
ಶಿವಮೊಗ್ಗ : ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ ಸಹಾಯಧನ ಪಡೆದುಕೊಳ್ಳಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದ್ದು, ರೈತರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಬಾಳೆ, ತರಕಾರಿ, ಕಾಳುಮೆಣಸು ಪ್ರದೇಶ ವಿಸ್ತರಣೆ, ಕೃಷಿಹೊಂಡ, ಕಳೆ ಚಾಪೆ (Weed Mat) ಟ್ರ್ಯಾಕ್ಟರ್, ಫಾರಂ ಗೇಟ್, ಪ್ರಾಥಮಿಕ ಸಂಸ್ಕರಣಾ ಘಟಕ, ಸಮಗ್ರ ಪೀಡೆ ನಿರ್ವಹಣೆ ಮತ್ತು ರಾಜ್ಯದೊಳಗೆ ಹಮ್ಮಿಕೊಳ್ಳುವ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ತಾಳೆ ಬೆಳೆ ಯೋಜನೆಯಡಿ ಪ್ರದೇಶ ವಿಸ್ತರಣೆ (ಸ್ವದೇಶಿ ಮತ್ತು ವಿದೇಶಿ ತಳಿಗಳು) ಅಂತರ ಬೆಳೆ, ಡಿಸೇಲ್ ಪಂಪ್ ಸೆಟ್ ಗೆ ಸಹಾಯಧನ, ಚಫ್ ಕಟರ್ ಯಂತ್ರ, ಟ್ರ್ಯಾಕ್ಟರ್ ಟ್ಯಾಲಿ, ತಾಳೆ ಹಣ್ಣು, ಕೊಯ್ಯಲು ಸಹಾಯಧನ ಕಾರ್ಯಕ್ರಮಗಳಿಗೆ ಸಹಾಯಧನ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹಣ್ಣಿನ ಬೆಳೆಗಳು, ತರಕಾರಿ ಮತ್ತು ತೋಟದ ಬೆಳೆಗಳಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಆಳವಡಿಸಿಕೊಳ್ಳಲು ಆಸಕ್ತ ರೈತರಿಂದ ಸಹಾಯಧನ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಕಾಳುಮೆಣಸು ಪ್ರದೇಶ ವಿಸ್ತರಣೆ ಕೈಗೊಳ್ಳಲು ಆಸಕ್ತ ರೈತರಿಂದ ಸಹಾಯಧನ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೇಂದ್ರ ಪುರಸ್ಕೃತ ಯೋಜನೆಯಾದ ಕೃಷಿ ವಿಸ್ತರಣೆ ಮತ್ತು ತರಬೇತಿ ಅಭಿಯಾನ ಯೋಜನೆಯಡಿ ಮತ್ತು ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಾಂತ್ರೀಕರಣ ಯೋಜನೆಯಡಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ, ತೆಂಗಿನ ಮರ ಹತ್ತುವ ಯಂತ್ರ, ಕಳೆ ಕೊಚ್ಚುವ ಯಂತ್ರ, ಟ್ರ್ಯಾಕ್ಟರ್ ಟ್ರೈಲರ್ ಮತ್ತು ಇನ್ನಿತರೆ ಯಂತ್ರೋಪಕರಣಗಳಿಗೆ ಸಹಾಯಧನ ನೀಡಲು ಆಸಕ್ತ ರೈತರಿಂದ ಸಹಾಯಧನ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸಲ್ಲಿಸಲು ದಿನಾಂಕ: 16.06.2025 ಕೊನೆಯ ದಿನಾಂಕ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಯಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಮತ್ತು ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವುದು.