
ಶಿವಮೊಗ್ಗ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸರ್ಕಾರವು ಮೂವರನ್ನು ನೇಮಕ ಮಾಡಿದೆ.
ನಗರದ ನವುಲೆಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯದ ಆಡಳಿತ ಮಂಡಳಿ ಸದಸ್ಯರನ್ನಾಗಿ ಶಿವಮೊಗ್ಗ ತಾಲೂಕು ಹೊಳೆಹನಸವಾಡಿ ನಿವಾಸಿ ಹೆಚ್.ಡಿ.ದೇವಿಕುಮಾರ್ ಹಾಗೂ ಶಿವಮೊಗ್ಗ ನಗರದ ನಿವಾಸಿ ಶಶಾಂಕ್ ಗೌಡ ಅವರನ್ನು ಸರ್ಕಾರ ನೇಮಕ ಮಾಡಿದೆ. ಈ ಸಂಬಂಧ ರಾಜ್ಯಪಾಲರ ಸಚಿವಾಲಯದಿಂದ ಅಧಿಕೃತ ಆದೇಶ ಹೊರಬಂದಿದೆ.
ಹೆಚ್.ಡಿ.ದೇವಿಕುಮಾರ್ ಮತ್ತು ಶಶಾಂಕ್ ಗೌಡ ಜೊತೆಗೆ ಮಡಿಕೇರಿಯ ಕಾವೇರಪ್ಪ ಅವರನ್ನು ಕೂಡ ನೇಮಕ ಮಾಡಲಾಗಿದೆ. ಮುಂದಿನ ಮೂರು ವರ್ಷದ ಅವಧಿಗೆ ಅವರು ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಲಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರೂ ಆಗಿರುವ ಹೆಚ್.ಡಿ.ದೇವಿಕುಮಾರ್ ಅವರು ಈ ಹಿಂದೆ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಸೇವೆ ಜೊತೆಗೆ ಪ್ರಗತಿಪರ ರೈತರಾಗಿಯೂ ಗುರುತಿಸಿಕೊಂಡಿರುವ ಅವರನ್ನು ಸರ್ಕಾರ ಈಗ ಕೃಷಿ ವಿಶ್ವ ವಿದ್ಯಾನಿಲಯದ ಆಡಳಿತ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿದ್ದು, ಅವರ ಬಹುಮುಖಿ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದೆ. ಹಾಗೆಯೇ ಶಶಾಂಕ್ ಗೌಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.