
ಗುಜರಾತಿನ ಅಹಮದಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ.
ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಇಡೀ ದೇಶದ ಜನರ ಚಿತ್ತ ಈಗ ಮೋದಿ ಕ್ರೀಡಾಂಗಣದತ್ತ ನೆಟ್ಟಿದೆ. ವಿಶೇಷವಾಗಿ ಕರ್ನಾಟಕದಲ್ಲೂ ಈ ಪಂದ್ಯ ಬಾರೀ ಕುತೂಹಲ ಕೆರಳಿದೆ. ಅದಕ್ಕೆ ಕಾರಣ ಆರ್ಸಿಬಿ. ಈ ಬಾರಿಯೂ ರಾಯಲ್ ಚಾಲೆಂ ಜರ್ಸ್ ಬೆಂಗಳೂರು (ಆರ್ ಸಿಬಿ ) ತಂಡ ಫೈನಲ್ ಪ್ರವೇಶಿಸಿದ್ದು, ಅದು ಇಂದು ಪಂಜಾಬ್ ಕಿಂಗ್ಸ್ ಇಲೆವೆನ್ ತಂಡಕ್ಕೆ ಮುಖಾಮುಖಿ ಆಗಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಗೆಲುವಿಗಾಗಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಶಿವಮೊಗ್ಗದಲ್ಲೂ ಆರ್ ಸಿಬಿ ಹವಾ ಜೋರಾಗಿದೆ. ಇಲ್ಲಿನ ಆರ್ಸಿಬಿ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆಯ ಜತೆಗೆ ರಕ್ತದಾನ, ಹಾಲಿನ ಅಭಿಷೇಕ ನಡೆಸುವ ಮೂಲಕ ಆರ್ ಸಿಬಿ ಗೆಲುವಿಗಾಗಿ ಶುಭ ಕೋರಿದ್ದು ವಿಶೇಷವಾಗಿತ್ತು. ಫೈನಲ್ ಪಂದ್ಯಾವಳಿಯ ಪ್ರಯುಕ್ತ 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಲವಗೊಪ್ಪದ ವೀರಭದ್ರ ಮೆಡಿಕಲ್ಸ್ ವತಿಯಿಂದ ವೀರಭದ್ರ ಕ್ಲೀನಿಕ್ ನಲ್ಲಿ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ.
ಆರ್ ಸಿ ಬಿ ಜಯಶಾಲಿಯಾಗಲಿ ಎಂದು ರಾಷ್ಟ್ರಭಕ್ತರ ಬಳಗದ ವತಿಯಿಂದ ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪಾಲಿಕೆ ಮಾಜಿ ಸದಸ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಕಾಲೇಜು, ಮೆಗ್ಗಾನ್ ಆಸ್ಪತ್ರೆ ಸಹಯೋಗದೊಂದಿಗೆ ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿ ಯುವಕರ ತಂಡವು ಇಂದು ರಕ್ತದಾನ ಶಿಬಿರ ಆಯೋಜಿಸಿತ್ತು. ಇಂದು ಬೆಳಗ್ಗೆ ಯಿಂದ 25 ಯುನಿಟ್ ಗಿಂತಲು ಹೆಚ್ಚಿನ ಪ್ರಮಾಣದ ರಕ್ತ ಸಂಗ್ರಹಿಸಲಾಯಿತು.