
ಶಿವಮೊಗ್ಗ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಬಲಿಯಾದ ರಾಜ್ಯದ 11 ಜನರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.13 ಮತ್ತು 16 ರಂದು ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಆಂತರಿಕ ಪೈಪೋಟಿಯಿಂದ ಇಂತಹ ಅನಾಹುತ ನಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರನ್ನು ಸನ್ಮಾನಿಸುವ ಕುರಿತು ಪೊಲೀಸ್ ಇಲಾಖೆಯ ಅಧಿಕಾರಿಗಳು ನಿರಾಕರಿಸಿ, ಲಕ್ಷಾಂತರ ಆರ್ ಸಿ ಬಿ ಅಭಿಮಾನಿಗಳು ಆಗಮಿಸುತ್ತಾರೆ. ಸಿಬ್ಬಂದಿಗಳ ಕೊರತೆ ಇರುವುದರಿಂದ ಅವರಿಗೆ ಭದ್ರತೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಪೋಲಿಸ್ ಅಧಿಕಾರಿಗಳು ಪತ್ರದಲ್ಲಿ ಉಲ್ಲೇಖ ಮಾಡಿ ತಿಳಿಸಿದ್ದರೂ ಸಹ ಎಚ್ಚೆತ್ತುಕೊಂಡಿಲ್ಲ. ನಂತರ ಸಿಎಂ ಮೂವತ್ತರಿಂದ ನಲವತ್ತು ಸಾವಿರ ಜನ ಆಗಮಿಸಬಹು ಎಂದುಕೊಂಡಿದ್ದೆವು ಎಂದು ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುಷ್ಟ ಜನವಿರೋಧಿ ಸರ್ಕಾರದ ವಿರುದ್ಧ ಜೂ.13 ರಂದು ಬೆಂಗಳೂರು ಮಹಾನಗರದ ಫ್ರೀಡಂ ಪಾರ್ಕ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಸದಸ್ಯರು, ನೊಂದ ಕುಟುಂಬದವರು ಸೇರಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವ ಕೆಲಸವನ್ನು ಮಾಡಲಿದ್ದೇವೆ. ಎರಡನೇ ಹಂತದಲ್ಲಿ ಜೂ.16 ರಂದು ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಜನವಿರೋಧಿ ಸರ್ಕಾರದ ವಿರುದ್ಧ ಹೋರಾಟ ಮಾಡಲಿದ್ದೇವೆ.
– ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಅಧ್ಯಕ್ಷ
ವಿಧಾನ ಸೌಧದ ಮುಂದೆ ಯಾವುದೇ ರೀತಿಯ ದುರ್ಘಟನೆ ನಡೆದಿಲ್ಲ. ಅದಕ್ಕೆ ನಾನು ಹೊಣೆಗಾರನಲ್ಲ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ. ಹನ್ನೊಂದು ಮುಗ್ಧ ಜೀವಿಗಳ ಬಲಿ ತೆಗೆದುಕೊಂಡಂತಾಯಿತು. ನೂರಾರು ಜನ ಗಾಯಗೊಂಡಂತಾಯಿತು. ಇದು ಆಕಸ್ಮಿಕವಾಗಿ ನಡೆದ ಘಟನೆ ಅಲ್ಲ. ರಾಜ್ಯ ಸರ್ಕಾರದ ಕೆಟ್ಟ ನಡವಳಿಕೆಯಿಂದಾಗಿ ರಾಜ್ಯ ಸರ್ಕಾರ ಕೊಲೆ ಮಾಡಿರುವಂತಹದ್ದು ಎಂದು ಆರೋಪಿಸಿದರು.
ಕಾಲ್ತುಳಿತಕ್ಕೆ ಅಭಿಮಾನಿಗಳು ಬಲಿ, ಕೈತುಳಿತಕ್ಕೆ ಪೋಲಿಸ್ ಅಧಿಕಾರಿಗಳು ಬಲಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಅರಿಬಿಡುವುದರ ಮೂಲಕ ಚರ್ಚೆ ಆಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳ ಹುಚ್ಚಾಟಕ್ಕೆ ಅಮಾಯಕ ಪ್ರಾಮಾಣಿಕ ಅಧಿಕಾರಿಗಳ ಮೇಲೆಯೂ ಗದಾಪ್ರಹಾರವಾಗಿದೆ. ಪೋಲಿಸ್ ಅಧಿಕಾರಿಗಳನ್ನು ಹರಕೆಯ ಕುರಿಗಳನ್ನಾಗಿ ಮಾಡಿದ್ದಾರೆ ಎಂದರು.

ರಾಜ್ಯದ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿದ್ದೇನೆ. ಈ ಪತ್ರ ಓದಿದ ತಕ್ಷಣ ಪತ್ರಕ್ಕೆ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸ ನನಗೂ ಇಲ್ಲ. ಆದರೂ ನಾಡಿನ ನೊಂದ ಜನರ ಭಾವನೆಯನ್ನು ಪ್ರತಿನಿಧಿಸುವ ಸಲುವಾಗಿ ಪತ್ರ ಬರೆದಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಜಗದೀಶ್, ಅಣ್ಣಪ್ಪ, ಸೂರಜ್, ಮೋಹನ್ ರೆಡ್ಡಿ, ಮಾಲತೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.