
ಶಿವಮೊಗ್ಗ : ನಾವು ಗಳಿಸಿದ, ಗುರುತಿಸಿದ ಸದ್ಗುಣಗಳನ್ನು ಉಳಿಸಿಕೊಳ್ಳುತ್ತೇವೆ ಎಂಬ ಸಂಕಲ್ಪ ಮಾಡಬೇಕು. ಸಂಕಲ್ಪದ ಸಂಸ್ಕಾರದಿಂದ ಸಾರ್ಥಕ ಚೈತನ್ಯ ಬರುತ್ತದೆ. ಈ ನಿಟ್ಟಿನಲ್ಲಿ ತಮ್ಮನ್ನು ತಾವು ರಾಷ್ಟ್ರಕ್ಕೆ ಸಮರ್ಪಿಸಿಕೊಳ್ಳುವ ವ್ಯಕ್ತಿತ್ವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರದ್ದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಬಣ್ಣಿಸಿದರು.
ಇಂದು (ಮಂಗಳವಾರ) ಶುಭಮಂಗಳ ಸಮುದಾಯ ಭವನದಲ್ಲಿ ಕೆ.ಎಸ್.ಈಶ್ವರಪ್ಪನವರ 77ನೇ ಹುಟ್ಟುಹಬ್ಬದ ನಿಮಿತ್ತ ಶ್ರೀಗಂಧ ಸಂಸ್ಥೆ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ವ್ಯಕ್ತಿ ಮೇಲೆ ಬರಬೇಕಾದರೆ ದುಡ್ಡಿನ ಆಧಾರದ ಮೇಲೆ ಬರುತ್ತಾನೆ. ಇಂದಿನ ರಾಷ್ಟ್ರೀಯ ನಾಯಕರೆನಿಸಿಕೊಂಡವರು ದುಡ್ಡು ಮತ್ತು ಜಾತಿ ಆಧಾರದ ಮೇಲೆ ನಡೆಯುತ್ತಿರುವುದು ರಾಜಕೀಯ ವಿಡಂಬನೆಯಾಗಿದೆ. ಈಶ್ವರಪ್ಪನವರು ಎಂದಿಗೂ ಜಾತಿಯನ್ನು ಏಣಿಯನ್ನಾಗಿ ಬಳಸಲಿಲ್ಲ. ಬದಲಾಗಿ ಹಿಂದುತ್ವ, ರಾಷ್ಟ್ರ, ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ ಎಂದರು.
ಹಿಂದುತ್ವ ಉಳಿದರೆ ಕುರುಬ, ದಲಿತ, ಬ್ರಾಹ್ಮಣ, ಮಠ-ಮಂದಿರಗಳು ಕುಟುಂಬಗಳು ಉಳಿಯುತ್ತವೆ. ಭಾರತ ಹಿಂದುತ್ವದ ತಳಹದಿಯ ಮೇಲೆ ಅಭಿವೃದ್ಧಿಯನ್ನು ಸಾಧಿಸುತ್ತಿದ್ದು, ಜಗತ್ತಿನ ಇತರ ರಾಷ್ಟ್ರಗಳನ್ನು ತನ್ನತ್ತ ಆಕರ್ಷಿಸುತ್ತಿದೆ ಎಂದರು.
ಕೆ.ಎಸ್.ಈಶ್ವರಪ್ಪನವರು ಎಂದೂ ಸಂಘದ ನಿಷ್ಠೆಯನ್ನು ಬಿಟ್ಟಿಲ್ಲ. ರಾಜಕೀಯದಲ್ಲಿ ಎಷ್ಟೇ ಏರುಪೇರಾದರೂ ಎಲ್ಲೂ ರಾಜೀ ಮಾಡಿಕೊಳ್ಳಲಿಲ್ಲ, ರಾಷ್ಟ್ರಜೀವನವನ್ನೇ ತಮ್ಮ ಜೀವನದುದ್ದಕ್ಕೂ ಸಮರ್ಥವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ದೇಶ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಈಶ್ವರಪ್ಪನವರ ಗುಣಗಾನ ಮಾಡಿದರು.
ಶ್ರೀರಾಮ ತೋರಿದ ಆದರ್ಶಗಳನ್ನು ಕೆ.ಎಸ್.ಈಶ್ವರಪ್ಪ ಅವರು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಬರುತ್ತಿದ್ದಾರೆ. ಇದು ಇಡೀ ಸಮಾಜಕ್ಕೆ ಮಾದರಿಯಾಗಿದೆ.
– ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು, ಶ್ರೀ ಪೇಜಾವರ ಮಠ
ಈ ಕಾರ್ಯಕ್ರಮ ಅತ್ಯಂತ ಸರಳ, ಅರ್ಥಪೂರ್ಣ, ಸಮಾಜಮುಖಿಯಾಗಿ ನಡೆಯುವ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿದೆಸೆಯಿಂದಲೇ ಈಶ್ವರಪ್ಪನವರು ರಾಷ್ಟ್ರಭಕ್ತಿ ಮೈಗೂಡಿಸಿಕೊಂಡವರು. ಜೀವನದಲ್ಲಿ ಎಷ್ಟೇ ರಾಜಕೀಯ ವೈಫಲ್ಯವಾದರೂ ರಾಷ್ಟ್ರೀಯತೆಯಿಂದ ವಿಮುಖರಾಗಲಿಲ್ಲ. ಇವತ್ತಿಗೂ ರಾಷ್ಟ್ರಸೇವೆಗೆ ಕಟಿಬದ್ಧರಾಗಿದ್ದಾರೆ. ಪತ್ನಿ ಜಯಲಕ್ಷ್ಮೀ, ಪುತ್ರ ಕಾಂತೇಶ್ ಅವರೊಡನೆ ಇರುವ ಅವಿನಾಭಾವ ಸಂಬಂಧ, ವಾತ್ಸಲ್ಯ, ಪ್ರೀತಿ ಇತರರಿಗೂ ಮಾದರಿ.
– ಶ್ರೀ ಮಾದರಚನ್ನಯ್ಯ ಸ್ವಾಮಿಗಳು, ಚಿತ್ರದುರ್ಗ
ಭಾರತ ಮಾತೆಯೇ ನನ್ನ ತಾಯಿ ಎಂದು ಭಾವಿಸಿಕೊಂಡವರು ಈಶ್ವರಪ್ಪನವರು. ಎಲ್ಲರೂ ಅಧಿಕಾರದ ಆಸೆಗಾಗಿ ಎಲ್ಲವನ್ನೂ ಮಾಡಿದ್ದಾರೆ. ಆದರೆ ಈಶ್ವರಪ್ಪನವರು ಪಕ್ಷಬಿಟ್ಟಿಲ್ಲ. ಅವರಿಗೆ ಪಕ್ಷಬಲ ಇರಲಿಲ್ಲ. ಆದರೆ ಗುರುಬಲ, ದೈವಬಲ, ಸದಾಕಾಲ ಅವರ ಮೇಲಿದೆ.
– ಶ್ರೀ ಈಶ್ವರಾನಂದಪುರಿ ಶ್ರೀಗಳು, ಕಾಗೆನೆಲೆ ಮಠ
ಕುಟುಂಬ ಒಡೆದು ಹೋಗದೇ ಇರಲು ಪಿತೃಯಜ್ಞ ಬಹಳ ಮುಖ್ಯ. ಈಶ್ವರಪ್ಪನವರಿಗೆ ದೈವಬಲದ ಜೊತೆಗೆ ಕುಟುಂಬದ ಮತ್ತು ಹಿತೈಷಿಗಳ ಬಲವಿದೆ. – ಕೂಡಲಿ ಮಠದ ಶ್ರೀಗಳು
ಎಲ್ಲರ ಒಳಿತಿಗಾಗಿ ತನ್ನ ಜೀವನ ರೂಪಿಸಿಕೊಂಡ ವ್ಯಕ್ತಿಗೆ ಅಭಿಮಾನದ ಪ್ರತೀಕವಾಗಿ ಶುಭ ಹಾರೈಸುವುದು ನಮ್ಮೆಲ್ಲರ ಕರ್ತವ್ಯ. ಮನುಷ್ಯನಿಗೆ ದೇವರು ವಿವೇಕ ಕೊಟ್ಟಿದ್ದಾನೆ. ಅದನ್ನು ಬಳಕೆಮಾಡಿ, ಜೀವನದಲ್ಲಿ ಆದರ್ಶ ಗುರಿಯನ್ನು ಇಟ್ಟುಕೊಂಡು ಜೀವನ ಸಾರ್ಥಕತೆ ಸಾಧಿಸಬೇಕು.
-ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳು
ಧರ್ಮಸಭೆಗೂ ಮೊದಲು ಮಹಾವೀರ ಗೋಶಾಲೆಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದರು. ಬಳಿಕ ಶುಭ ಮಂಗಳ ಸಮುದಾಯ ಭವನದ ಆವರಣದಲ್ಲಿ ಲಲಿತ ಸಹಸ್ರನಾಮ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ, ರುದ್ರಹೋಮ, ಶತ ಚಂಡಿಹವನ, 1008 ಮಹಿಳೆಯರಿಗೆ ಬಾಗಿನ ಸಮರ್ಪಣೆ ನಡೆಯಿತು.

ಸಭಾ ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಡೆಯುವ ಸಾಮಾಜಿಕ ಕಾರ್ಯಗಳಿಗೆ ಈಶ್ವರಪ್ಪನವರ ಕುಟುಂಬದಿಂದ ಮಂಗಳ ನಿಧಿಯನ್ನು ಹಿರಿಯ ಪ್ರಚಾರಕರಾದ ಸು. ರಾಮಣ್ಣನವರಿಗೆ ಸಮರ್ಪಿಸಲಾಯಿತು.
ವೇದಿಕೆಯಲ್ಲಿ ಜಯಲಕ್ಷ್ಮೀ ಈಶ್ವರಪ್ಪ, ಪುತ್ರ ಕೆ.ಈ.ಕಾಂತೇಶ್, ನಟರಾಜ್ ಭಾಗವತ್, ಪದ್ಮನಾಭ ಭಟ್, ಮಹಾಲಿಂಗ ಶಾಸ್ತ್ರಿ, ಕೆ.ಜಿ.ಕೃಷ್ಣಾನಂದ, ಈ.ವಿಶ್ವಾಸ್, ಶ್ರೀಕಾಂತ್ ಸೇರಿದಂತೆ ರಾಷ್ಟ್ರಭಕ್ತ ಬಳಗದ ಪ್ರಮುಖರು ಹಾಗೂ ಅಪಾರ ಅಭಿಮಾನಿಗಳು, ವಿವಿಧ ಮಠಾಧೀಶರು ಉಪಸ್ಥಿತರಿದ್ದರು.
ಇದನ್ನೂ ಓದಿ ⇒ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆ.ಮಾಯಣ್ಣಗೌಡ ಅಧಿಕಾರ ಸ್ವೀಕಾರ