
ಶಿವಮೊಗ್ಗ : ಶಾಲಾ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಮಕ್ಕಳನ್ನು ಕರೆದುಕೊಂಡು ಹೋಗುವ ಶಾಲಾ ಕಾಲೇಜು ವಾಹನಗಳನ್ನು ತಪಾಸಣೆ ಮಾಡಿದರು. ಈ ವೇಳೆ ಹೆಚ್ಚುವರಿ ಶಾಲಾ ಮಕ್ಕಳನ್ನು ಒಯ್ಯುವ 17 ಪ್ರಕರಣಗಳು, ಕುಡಿದು ವಾಹನ ಚಲಾಯಿಸುವ 04 ಪ್ರಕರಣಗಳು ಮತ್ತು ಫಿಟ್‌ನೆಸ್ ಅವಧಿ ಮುಗಿದಿರುವ (ಎಫ್‌ಸಿ) 03 ಪ್ರಕರಣಗಳು ಪತ್ತೆಯಾಗಿವೆ.
ಇಂದು ಬೆಳಗ್ಗೆ ಶಿವಮೊಗ್ಗ ನಗರದ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ನಗರದಾದ್ಯಂತ ವಿವಿಧ ಸ್ಥಳಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಶಾಲಾ ಕಾಲೇಜು ವಾಹನಗಳನ್ನು ತಪಾಸಣೆ ಮಾಡಿದ್ದು, ಒಟ್ಟಾರೆ ನಿಯಮ ಉಲ್ಲಂಘನೆ ಮಾಡಿರುವ 24 ವಾಹನ ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.
ವಾಹನ ಚಾಲಕರಿಗೆ ವಾಹನದ ವಿಮೆ, ಎಮಿಷನ್ ರಿಪೋರ್ಟ್ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಅನ್ನು ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳಲು ಸೂಚನೆಗಳನ್ನು ನೀಡಿದ್ದು, ಕಡ್ಡಾಯವಾಗಿ ಸಂಚಾರ ನಿಯಮಗಳ ಪಾಲಿಸುವಂತೆ ಅರಿವು ಮೂಡಿಸಿಲಾಗಿದೆ.