
ಶಿವಮೊಗ್ಗ : ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಇಂದು ಜುಲೈ 04, 2025 ರಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಬಾಗಿನ ಸಮರ್ಪಿಸಿದರು.
ಆಷಾಢ ಶುಕ್ರವಾರದ ವಿಶೇಷ ಶುಭಸಂದರ್ಭದಲ್ಲಿ ಅವರು ಕೋರ್ಪಲಯ್ಯ ಛತ್ರ ಮಂಟಪದ ಬಳಿ ನಮ್ಮೆಲ್ಲರ ಜೀವನದಿ ತುಂಗೆಗೆ ಸಾಂಪ್ರದಾಯಿಕವಾಗಿ ಪೂಜಿಸಿ, ತಮ್ಮ ಕಾರ್ಯಕರ್ತರೊಂದಿಗೆ ಬಾಗಿನ ಅರ್ಪಿಸಿದರು.
ಶಿವಮೊಗ್ಗದ ಜೀವನಾಡಿಯಾದ ತಾಯಿ ತುಂಗಾ ಮಾತೆಯು ಮೈದುಂಬಿ ಹರಿಯುತ್ತಿರುವ ಈ ಪವಿತ್ರ ಸಂದರ್ಭದಲ್ಲಿ, ನದಿಯ ಪರಿಪೂರ್ಣತೆಯ ಗೌರವಾರ್ಥವಾಗಿ ಹಾಗೂ ಪ್ರಕೃತಿ ಪ್ರತಿಯೊಂದು ಕಣಕ್ಕೂ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ, ಬಿಜೆಪಿ ಶಿವಮೊಗ್ಗ ನಗರ ಸಮಿತಿಯಿಂದ ಕೋರ್ಪಲಯ್ಯ ಛತ್ರ ಮಂಟಪದಲ್ಲಿ ‘ತುಂಗಾ ನದಿಗೆ ಬಾಗಿನ ಅರ್ಪಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
| ಎಸ್. ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು

ಸಕಲ ದೇವಾನುದೇವತೆಗಳ ಅನುಗ್ರಹದಿಂದ ಜಿಲ್ಲೆ ಹಾಗೂ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ತುಂಗಾ ನದಿ ರಾಜ್ಯದ ಕೃಷಿ, ಕುಡಿಯುವ ನೀರು ಮತ್ತು ಪರಿಸರ ಸಮತೋಲನದ ಪ್ರಮುಖ ಮೂಲವಾಗಿದ್ದು, ತುಂಗೆಗೆ ಬಾಗಿನ ಅರ್ಪಿಸುವ ಸಂಸ್ಕೃತಿ ನಮ್ಮ ನಾಡಿನ ನದಿ ಪೂಜಾ ಪರಂಪರೆಯ ಪ್ರತಿಬಿಂಬವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಹಾಗೂ ನಗರಾಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲೆ ಹಾಗೂ ನಗರದ ಸಮಿತಿಯ ಪ್ರಮುಖರು, ವಿವಿಧ ಮೋರ್ಚಾಗಳ ಸದಸ್ಯರು, ಧಾರ್ಮಿಕ ಮುಖಂಡರು, ಬಿಜೆಪಿ ಕಾರ್ಯಕರ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.
ಇದನ್ನೂ ಓದಿ ⇒ ಬೆಳೆ ವಿಮೆ ಮಾಡಿಸುವಂತೆ ರೈತರಿಗೆ ಕೃಷಿ ಇಲಾಖೆ ಸೂಚನೆ, ಕೊನೆಯ ದಿನಾಂಕ ಯಾವಾಗ?