
ದಿನಬೆಳಗಾದ್ರೆ ಆಕಾಶಕ್ಕೆ ಏರ್ತಾಯಿರೋ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಕಡಿಮೆ ಆಗೋ ಸಾಧ್ಯತೆ ದಟ್ಟವಾಗಿದೆ. ಆರ್‌ಬಿಐನ ಅದೊಂದು ನಡೆ ಇಂಥದ್ದೊಂದು ಸೂಚನೆಯನ್ನ ದೊಡ್ಡದಾಗಿ ಕೊಡ್ತಿದೆ.
ಹೌದು, ಜಗತ್ತಿನಾದ್ಯಂತ ಕೇಂದ್ರ ಬ್ಯಾಂಕುಗಳು ಚಿನ್ನವನ್ನು ಖರೀದಿಸಲು ಮುಗಿಬೀಳುತ್ತಿವೆ. ಚೀನಾದಿಂದ ಹಿಡಿದು ಪೋಲೆಂಡ್‌ವರೆಗೆ, ಎಲ್ಲರೂ ತಮ್ಮ ಖಜಾನೆಯನ್ನು ಹಳದಿ ಲೋಹದಿಂದ ತುಂಬಿಸುತ್ತಿದ್ದಾರೆ. ಆದರೆ, ಜಗತ್ತಿನ ಅತಿ ದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರಗಳಲ್ಲಿ ಒಂದಾದ ಭಾರತ ಮಾತ್ರ ದಿಢೀರ್ ಎಂದು ಚಿನ್ನ ಖರೀದಿಗೆ ಬ್ರೇಕ್ ಹಾಕಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಎರಡು ತಿಂಗಳಿಂದ ಒಂದು ಗ್ರಾಂ ಚಿನ್ನವನ್ನೂ ಖರೀದಿಸಿಲ್ಲ. ಹಾಗಾದರೆ, ಜಗತ್ತು ಒಂದು ದಾರಿಯಲ್ಲಿ ಸಾಗುತ್ತಿದ್ದರೆ, ಭಾರತ ಮಾತ್ರ ಬೇರೆ ದಾರಿ ಹಿಡಿದಿದೆಯೇ? ಆರ್‌ಬಿಐನ ಈ ನಿಗೂಢ ನಡೆಯ ಹಿಂದಿನ ಅಸಲಿ ಕಾರಣವಾದರೂ ಏನು? ಗಗನಕ್ಕೇರಿರುವ ಚಿನ್ನದ ಬೆಲೆ ಮತ್ತೆ ಭೂಮಿ ಕಡೆ ಬರುವ ಮುನ್ಸೂಚನೆ ಆರ್‌ಬಿಐಗೆ ಸಿಕ್ಕಿದೆಯಾ? ಭಾರತದ ಈ ಗೋಲ್ಡ್ ಸೈಲೆನ್ಸ್ ಹಿಂದಿರುವ ಮಾಸ್ಟರ್ ಪ್ಲಾನ್ ಏನು?
ಆರ್‌ಬಿಐ ಹಳದಿ ಲೋಹದಿಂದ ಅಂತರ ಕಾಯ್ದುಕೊಂಡಿರುವುದೇಕೆ?
ಇಡೀ ವಿಶ್ವವೇ ಚಿನ್ನದ ಹಿಂದೆ ಬಿದ್ದಿರುವಾಗ ಆರ್‌ಬಿಐ ಹಳದಿ ಲೋಹದಿಂದ ಅಂತರ ಕಾಯ್ದುಕೊಂಡಿದೆ. 2025-26ರ ಹಣಕಾಸು ವರ್ಷ ಶುರುವಾಗಿ ಮೂರು ತಿಂಗಳು ಕಳೆದಿದ್ದು, ಇಲ್ಲಿಯವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಚಿನ್ನದ ಮೀಸಲಿಗೆ ಏನನ್ನು ಸೇರಿಸಿಲ್ಲ. ಅಂದ್ರೇ ಚಿನ್ನ ಖರೀದಿಗೆ ಬ್ರೇಕ್ ಹಾಕಿದೆ. ಆರ್‌ಬಿಐನ ಈ ಅಚ್ಚರಿಯ ನಡೆ ಹಿಂದೆ ಸುರಕ್ಷಿತ ಸ್ವರ್ಗವಾಗಿರುವ ಚಿನ್ನದ ಬೆಲೆ ಇಳಿಯುವ ಮುನ್ಸೂಚನೆ ಕಾಣಿಸುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಬಂಗಾರದ ಬೆಲೆ ಇಳಿಯಬಹುದು ಎನ್ನುವ ಕಾರಣಕ್ಕೆ ಆರ್‌ಬಿಐ ತನ್ನ ಚಿನ್ನ ಸಂಗ್ರಹ ಕಾರ್ಯಕ್ಕೆ ಬ್ರೇಕ್ ಹಾಕಿದೆ ಎನ್ನಲಾಗುತ್ತಿದೆ.
ಜಾಗತಿಕ ವ್ಯಾಪಾರ ಮತ್ತು ರಾಜಕೀಯ ಅಸ್ಥಿರತೆ, ಯುದ್ಧಗಳ ಕಾರಣಕ್ಕೆ ಕಳೆದ ಐದು ವರ್ಷಗಳಲ್ಲಿ ಚಿನ್ನದ ಬೆಲೆ ಶೇ.80 ರಷ್ಟು ಏರಿಕೆಯಾಗಿದೆ. ಜಗತ್ತು ಈಗ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆ ಗೋಲ್ಡ್ ಪ್ರೈಸ್ ಇಳಿಯುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಆರ್‌ಬಿಐ ತನ್ನ ಗೋಲ್ಡ್ ರಿಸರ್ವ್ ಅನ್ನು ಏರಿಸಲು ಮುಂದಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ನಿಜವಾದ ಕಾರಣ ಮಾತ್ರ ಇನ್ನು ಬಹಿರಂಗವಾಗಿಲ್ಲ.
ಇತ್ತೀಚಿನ ಮಾಹಿತಿಯ ಪ್ರಕಾರ, ಈ ವರ್ಷದ ಮಾರ್ಚ್ ಅಂತ್ಯದಿಂದ ಮೇ ಅಂತ್ಯದವರೆಗೆ ಆರ್‌ಬಿಐ ಯಾವುದೇ ಚಿನ್ನವನ್ನು ಖರೀದಿಸಿಲ್ಲ. ಅಂದ್ರೇ ಸದ್ಯ 880 ಮೆಟ್ರಿಕ್ ಟನ್ ಚಿನ್ನ ಆರ್‌ಬಿಐ ಬಳಿ ಇದೆ. ಅದು ಹೆಚ್ಚಾಗಿಲ್ಲ. ಇತ್ತೀಚೆಗೆ ಬಂಗಾರ ಖರೀದಿಸದೇ ಇಷ್ಟು ದಿನ ಆರ್‌ಬಿಐ ಇರುವುದು ಇದೇ ಮೊದಲ ಬಾರಿಗೆ ಎನ್ನಲಾಗಿದೆ. ಇದೇ ರೀತಿ 2023ರ ಅಕ್ಟೋಬರ್ – ಡಿಸೆಂಬರ್ ಅವಧಿಯಲ್ಲಿ ಚಿನ್ನದ ಖರೀದಿಗೆ ಆರ್‌ಬಿಐ ಬ್ರೇಕ್ ಹಾಕಿತ್ತು. ಆಗ ಆರ್‌ಬಿಐ ಬಳಿ 804 ಟನ್ ಚಿನ್ನ ಇತ್ತು. ಈಗ ಚಿನ್ನದ ಸಂಗ್ರಹವನ್ನು ಆರ್‌ಬಿಐ ಏಕೆ ಹೆಚ್ಚಿಸುತ್ತಿಲ್ಲ ಎಂಬುದನ್ನು ಗಮನಿಸಿದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಈ ನಿಲುವು ವಿವಿಧ ಮಾರುಕಟ್ಟೆ ಅನಾಲಿಸಿಸ್‌ನಿಂದ ಪ್ರಭಾವಿತವಾಗಿರುವಂತೆ ಕಾಣುತ್ತಿದೆ. ಸಿಟಿ, ಫಿಚ್ ರಿಸರ್ಚ್ ಡಿವಿಷನ್, ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಚಿನ್ನದ ಬೆಲೆ ಇಳಿಯಲಿದೆ ಎಂದು ಭವಿಷ್ಯ ನುಡಿದಿವೆ. ಗೋಲ್ಡ್ ರೇಟ್ ಇದಕ್ಕಿಂತ ಮೇಲೆ ಏರಲ್ಲ ಎಂದು ಅವು ಪ್ರೆಡಿಕ್ಟ್ ಮಾಡಿವೆ. ಜಾಗತಿಕ ರಾಜಕೀಯ ಉದ್ವಿಗ್ನತೆಗಳಲ್ಲಿನ ಸಂಭಾವ್ಯ ಕಡಿತ ಮತ್ತು ಅಮೆರಿಕದ ಫೆಡರಲ್ ರಿಸರ್ವ್‌ನಿಂದ ನಿರೀಕ್ಷಿತ ಬಡ್ಡಿದರ ಕಡಿತ ಚಿನ್ನದ ಬೆಲೆ ಇಳಿಯಲು ಕಾರಣ ಆಗಲಿದೆ ಎಂದು ಅವು ಮುನ್ಸೂಚನೆ ನೀಡಿವೆ.
ಈ ಹಿಂದೆಯೇ ಬಂಗಾರದ ಬೆಲೆ 55 ರಿಂದ 60 ಸಾವಿರ ರೂಪಾಯಿ ಆಸುಪಾಸಿಗೆ ಕುಸಿಯಲಿದೆ ಎಂದು ಅಮೆರಿಕ ಮೂಲದ ಮಾರ್ನಿಂಗ್ ಸ್ಟಾರ್‌ನ ವಿಶ್ಲೇಷಕ ಜಾನ್ ಮಿಲ್ಸ್ ಭವಿಷ್ಯ ನುಡಿದಿದ್ದರು. ಅಂದರೆ ಈಗಿರುವ ಬೆಲೆಯಲ್ಲಿ ಶೇ.38 ರಷ್ಟು ಕುಸಿತ ಕಾಣಲಿದೆ ಎಂದಿದ್ದರು. ಅದರ ಬೆನ್ನಲ್ಲೇ ಕಳೆದ ತಿಂಗಳು ಅಮೆರಿಕದ ಸಿಟಿ ರಿಸರ್ಚ್‌ನ ಜಾಗತಿಕ ಸರಕುಗಳ ಮುಖ್ಯಸ್ಥ ಮ್ಯಾಕ್ಸ್ ಲೇಯ್ಟನ್ ಅವರು ಕೂಡ ಬಂಗಾರದ ಬೆಲೆ ಶೇ.30 ರಷ್ಟು ಇಳಿಯಲಿದೆ ಎಂದು ಭವಿಷ್ಯ ನುಡಿದಿದ್ದರು. ಅಂದ್ರೇ 70 ಸಾವಿರ ರೂಪಾಯಿಗಿಂತ ಕಡಿಮೆ ರೇಟ್‌ನಲ್ಲಿ 10 ಗ್ರಾಂ ಚಿನ್ನ ಸಿಗಲಿದೆ ಎಂದಿದ್ದರು. 2026ರಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ ಕಾಣಲಿದೆ ಎಂದು ಲೇಯ್ಟನ್ ಅಂದಾಜಿಸಿದ್ದರು. ಇದರ ಬೆನ್ನಲ್ಲೇ ಆರ್‌ಬಿಐ ಈಗ ಬಂಗಾರದ ಖರೀದಿಗೆ ಬ್ರೇಕ್ ಹಾಕಿರುವುದು ಕುತೂಹಲ ಕೆರಳಿಸಿದೆ.