
ಶಿವಮೊಗ್ಗ : ಸಿಗಂದೂರು ಸೇತುವೆ ಸಾರ್ವಜನಿಕ ಸೇವೆಗೆ ಅಡಿ ಇಡಲು ಸಿದ್ಧವಾಗಿದ್ದು, ಭಾರೀ ಮಳೆಯ ನಡುವೆಯೇ ಸೇತುವೆಯ ಮಧ್ಯ ಭಾಗದಲ್ಲಿ ಪೂಜಾ ಕೈಂಕರ್ಯಗಳು, ಹೋಮ – ಹವನಗಳು ನೆರವೇರಿದವು.

ಬಹುನಿರೀಕ್ಷಿತ ಅಂಬಾರಗೋಡ್ಲು-ಕಳಸವಳ್ಳಿಯ ಸಿಗಂದೂರು ಕೇಬಲ್ ಆಧಾರಿತ ಸೇತುವೆಯನ್ನು ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮಾರು 473.00 ಕೋಟಿ ರೂ.ಗಳ ವೆಚ್ಚದಲ್ಲಿ 2.44 ಕಿ.ಮೀ. ಉದ್ದ ಹಾಗೂ 16 ಮೀ. ಅಗಲವಾದ ದೇಶದಲ್ಲಿಯೇ ಎರಡನೇ ದೊಡ್ಡ ತೂಗು ಸೇತುವೆಯನ್ನು ಇಂದು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಇದು ನನ್ನ ಸೌಭಾಗ್ಯ : ನಿತಿನ್ ಗಡ್ಕರಿ
ಸೇತುವೆಯ ಶಂಕುಸ್ಥಾಪನೆಯನ್ನು ನಾನೇ ಮಾಡಿದ್ದು, ಉದ್ಘಾಟನೆಯನ್ನು ನಾನೇ ನೆರವೇರಿಸಿದ್ದೇನೆ. ಇದು ನನ್ನ ಸೌಭಾಗ್ಯ. ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ಹೆಸರು ಘೋಷಣೆ ಮಾಡುತ್ತೇನೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಯೋಜನೆಯ ಆರಂಭಕ್ಕೆ ಸಾಕಷ್ಟು ಅಡಚಣೆ ಇತ್ತು. ಯಡಿಯೂರಪ್ಪ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದಾಗ ನನಗೆ ಸಾಕಷ್ಟು ಅನುಮಾನ ಇತ್ತು. ಆದರೆ, ಚೌಡೇಶ್ವರಿ ದೇವಿಯ ಆಶೀರ್ವಾದದಿಂದ ಇದು ಸಾಧ್ಯವಾಗಿದೆ. ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ಹೆಸರಿಡಲು ಹಲವರು ಒತ್ತಾಯಿಸಿದ್ದೀರಿ ಎಂದರು.

ನಮ್ಮ ಸರ್ಕಾರ ಮುಂದಿನ ಐದು ವರ್ಷ ಪೂರೈಸುವುದರೊಳಗೆ 5 ಲಕ್ಷ ಕೋಟಿಯಷ್ಟು ಯೋಜನೆ ಜಾರಿಯಾಗಲಿದೆ. ಕರ್ನಾಟಕದಲ್ಲಿ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಪ್ರಮುಖ ರಾಷ್ಟೀಯ ಹೆದ್ದಾರಿಗಳ ಕಾಮಗಾರಿ ನಡೆದಿದೆ. ಅಟಲ್ ಟನಲ್, ಅಮೃತಸರ-ಕಟ್ರಾ, ಸೂರತ್-ಚೆನ್ನೈ, ಕರ್ನೂಲ್ ಮತ್ತಿತರ ಕಡೆ ಕೆಲಸ ನಡೆದಿದೆ. 6 ರಾಜ್ಯಗಳಲ್ಲಿ ಈ ಮಾರ್ಗ ಸಾಗಲಿದ್ದು, 2030 ರೊಳಗೆ ಕಾಮಗಾರಿ ಮುಗಿಯಲಿದೆ ಎಂದರು.
ಕರ್ನಾಟಕದಲ್ಲೂ ವಿವಿಧ ಹೆದ್ದಾರಿ ಕೆಲಸ ಪ್ರಗತಿಯಲ್ಲಿದೆ. ಹಾಸನ-ಬೆಂಗಳೂರು, ಬೀದರ-ಶ್ರೀರಂಗಪಟ್ಟಣ ಸೇರಿದಂತೆ ಹಲವು ಕಡೆ ಹೆದ್ದಾರಿ ವಿಸ್ತರಣೆ ಕೆಲಸ ನಡೆಯುತ್ತಿದೆ. ತುಮಕೂರು-ಶಿವಮೊಗ್ಗ ನಡುವಿನ ಹೆದ್ದಾರಿ ಕೆಲಸ 2028ಕ್ಕೆ ಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಕೇವಲ ಹೆದ್ದಾರಿ ಅಷ್ಟೇ ಅಲ್ಲ ರೋಪ್ ವೇ ಗೂ ಒತ್ತು ನೀಡಲಾಗುತ್ತಿದೆ. ಕೊಡಚಾದ್ರಿಯಲ್ಲಿ ರೋಪ್ ವೇ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

60 ವರ್ಷಗಳ ಕನಸು 6 ವರ್ಷದಲ್ಲಿ ನನಸು : ಬಿ.ವೈ.ರಾಘವೇಂದ್ರ
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, 60 ವರ್ಷಗಳ ಕನಸ್ಸುಗಳನ್ನು 6 ವರ್ಷದಲ್ಲಿ ನನಸು ಮಾಡಿದ ಕೇಂದ್ರದ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಅಭಿನಂದನೆಗಳು. ಸಾಕಷ್ಟು ಹೋರಾಟಗಳು, ಸಾಕಷ್ಟು ಮನವಿಗಳಿಂದ ಸೇತುವೆ ಕಾರ್ಯರೂಪಕ್ಕೆ ಬಂದಿದೆ. ಈ ಸೇತುವೆಗೆ ಪೂರಕವಾದ ಶಕ್ತಿಯನ್ನು ತುಂಬಿದ, ರಾಜ್ಯದ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ಯಾರೋ ಗುದ್ದಲಿ ಪೂಜೆ ಮಾಡುತ್ತಾರೆ. ಇನ್ಯಾರೋ ಉದ್ಘಾಟನೆ ಮಾಡುತ್ತಾರೆ. ಆದರೆ ಸಿಗಂದೂರು ಸೇತುವೆಯನ್ನು ಯಾರು ಶಂಕುಸ್ಥಾಪನೆ ಮಾಡಿದ್ದರೋ ಅವರೇ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ಆದಂತಹ ಸೇತುವೆಗೆ ಸಿಗಂದೂರು ಸೇತುವೆ ಎನ್ನುವ ಹೆಸರಿನ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ನಿಜವಾದ ನಾಯಕತ್ವ ಎಂದರೆ ಜನ ಸೇವೆ : ಬಿ.ಎಸ್.ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸುಂದರ ಭವ್ಯ ಸೇತುವೆ ಉದ್ಘಾಟನೆಗೊಂಡಿದೆ. ಬಹು ವರ್ಷಗಳ ಬೇಡಿಕೆ, ಬಹು ವರ್ಷಗಳ ಕನಸು ಇಂದು ನನಸಾಗಿದೆ. ಈ ಸೇತುವೆ ಸಾಕ್ಷಿಯಾಗಿದೆ. ಇಡೀ ದೇಶಕ್ಕೆ ಈ ಸೇತುವೆ ಐತಿಹಾಸಿಕ ಪ್ರಗತಿಯಾಗಲಿದೆ. ಅಭಿವೃದ್ಧಿಯ ಸಾಕಾರವಾಗಲಿದೆ ಎಂದರು.
ನಿಜವಾದ ನಾಯಕತ್ವ ಎಂದರೆ ಜನರ ಸೇವೆ. ಜನ ಸೇವೆಗಿಂತ ದೊಡ್ಡದು ಬೇರೆ ಯಾವುದು ಇಲ್ಲ. ನಾವು ಅಧಿಕಾರದಲ್ಲಿ ಇರಲಿ ಇಲ್ಲದೆ ಇರಲಿ ಜನ ಸೇವೆಯೇ ನಮ್ಮ ಗುರಿ. ಆಗುಂಬೆ ಘಾಟ್ ನಲ್ಲಿ ಸುರಂಗ ಮಾರ್ಗ ನಿರ್ಮಾಣ ಸೇರಿದಂತೆ ಹೊಸಪೇಟೆ ಬಾಳೆ ಹೊನ್ನೂರು ರಸ್ತೆ ನಿರ್ಮಾಣ, ಟ್ರಾಫಿಕ್ ನಿಯಂತ್ರಿಸಲು ಬೈಪಾಸ್ ವರ್ತುಲ ರಸ್ತೆ ನಿರ್ಮಾಣ ಮಾಡಲು ಮನವಿ ಮಾಡಲಾಗಿದೆ ಎಂದರು.

ಸಿಗಂದೂರು ಸೇತುವೆಗೆ ಮಾತೆ ಚೌಡೇಶ್ವರಿ ತಾಯಿಯ ಹೆಸರು : ಪ್ರಹ್ಲಾದ್ ಜೋಶಿ
ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಬಹುದೊಡ್ಡ ರಸ್ತೆಯ ಕ್ರಾಂತಿ ನಿರ್ಮಾಣ ಮಾಡಿದ ನಿತಿನ್ ಗಡ್ಕರಿ ಅವರು ರೋಡ್ ಕರಿ ಆಗಿ ಮಹತ್ವ ಪಡೆದಿದ್ದಾರೆ. ಬಹಳ ದೊಡ್ಡ ಪ್ರಮಾಣದಲ್ಲಿ ರಾಜ್ಯದ ಕ್ರಿಯಾಶೀಲ ಅಧ್ಯಕ್ಷರಾದ ರಾಘವೇಂದ್ರ ಅವರು ಫಾಲೋ ಅಪ್ ಮಾಡಿದ್ದಾರೆ. ತಾಯಿಯ ಆಶೀರ್ವಾದದ ಜೊತೆಗೆ ಜನರ ಆಶೀರ್ವಾದವು ನಿಮ್ಮ ಜೊತೆಗೆ ಇದೆ. ಸಿಗಂದೂರು ಸೇತುವೆಗೆ ಮಾತೆ ಶೌಡೇಶ್ವರಿ ತಾಯಿಯ ಹೆಸರು ಇಡಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿ 473.00 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಯಾರು ಶಂಕುಸ್ಥಾಪನೆ ಮಾಡಿರುತ್ತಾರೆ. ಅವರೇ ಉದ್ಘಾಟನೆ ಮಾಡಬೇಕು. ಅದಕ್ಕೆ ಈ ಸಿಗಂದೂರು ಸೇತುವೆ ಸಾಕ್ಷಿಯಾಗಿದೆ ಎಂದರು.
ಅಂಬಾರಕೊಪ್ಪ ಸೇತುವೆಗೆ ಬಹಳ ಇತಿಹಾಸವಿದೆ. ಪರಮೇಶ್ವರ್, ಪ್ರಸನ್ನ ಅವರು ಹೋರಾಟದ ನೇತೃತ್ವ ವಹಿಸಿದ್ದರು. ಯಾವುದೇ ಕೆಲಸ ಇರಲಿ ಬಹಳ ದೊಡ್ಡ ರೀತಿಯಲ್ಲಿ ಅದರ ಬೆನ್ನತ್ತಿ ಕೆಲಸ ಮಾಡುತ್ತಾರೆ. ಎಲ್ಲ ನಿರ್ಣಯಗಳನ್ನು ಬ್ರೇಕ್ ಮಾಡಿ ಈ ಕಾರ್ಯ ನಿರ್ವಹಿಸಿ, ಗಡ್ಕರಿ ಅವರು ಸಾಧ್ಯ ಮಾಡಿ ತೋರಿಸಿದ್ದಾರೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಅಂದಿನಾ ರೂವಾರಿ ನಿತಿನ್ ಗಡ್ಕರಿ ಅವರು. ದೇಶದ ಹಳ್ಳಿಗಳನ್ನು ರಾಜ್ಯ ಸರ್ಕಾರದ ಮೇಲೆ ಬಿಡಬಾರದು. ದೇಶದ ಹಳ್ಳಿಗಳಿಗೆ ವಿದ್ಯುತ್ ಒದಗಿಸಬೇಕು ಎಂದು ಯೋಜನೆ ತಂದವರು ನಿತಿನ್ ಗಡ್ಕರಿ ಅವರು. ನಿತಿನ್ ಗಡ್ಕರಿ ಬಂದ ನಂತರ 50 ಸಾವಿರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ್ದೇವೆ. ಸಂಚಾರ ಕ್ರಾಂತಿ ಮಾಡುತ್ತಿರುವವರು ನಿತಿನ್ ಗಡ್ಕರಿ ಅವರು. ಮೋದಿಯವರ ನೇತೃತ್ವದಲ್ಲಿ ಭಾರತ ಮೂರನೇ ಆರ್ಥಿಕ ದೇಶ ಆಗಲಿದೆ ಎಂದರು.

ಇದು ಬಂಗಾರದಿಂದ ಬರೆದಂತಹ ಕಾರ್ಯಕ್ರಮ : ಕಾಗೋಡು ತಿಮ್ಮಪ್ಪ
ಕಾಗೋಡು ತಿಮ್ಮಪ್ಪ ಮಾತನಾಡಿ, ಇದು ಬಂಗಾರದಿಂದ ಬರೆದಂತಹ ಕಾರ್ಯಕ್ರಮ. ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ದೆಹಲಿಯಿಂದ ಸಾಗರಕ್ಕೆ ಬಂದು ಈ ಸೇತುವೆಯನ್ನು ಉದ್ಘಾಟನೆ ಮಾಡಿಕೊಟ್ಟಿದ್ದಾರೆ. ಸಾಗರ ಜನರಿಗೆ ದೇವರು ಶಾಶ್ವತವಾದ ಪರಿಹಾರವನ್ನು ಒದಗಿಸಿಕೊಟ್ಟಿದ್ದಾರೆ ಎಂದರು.
ನಿತಿನ್ ಗಡ್ಕರಿ ಅವರು ಬಂದು ಈ ಕಾರ್ಯಕ್ರಮವನ್ನು ಮಾಡಿಕೊಟ್ಟಿರುವುದು ಇಡೀ ಕರ್ನಾಟಕ್ಕೆ ಸ್ಮರಣೀಯ ಕಾರ್ಯಕ್ರಮವಾಗಿದೆ. ನಾವು ಬಹಳ ದಿನಗಳಿಂದ ಕಾಯುತ್ತಿದ್ದೆವು ಯಾವಾಗ ಸೇತುವೆ ನಿರ್ಮಾಣ ಆಗುತ್ತದೆ ಎಂದು, ಆದರೆ ನಿತಿನ್ ಗಡ್ಕರಿ ಅವರು ನಮ್ಮ ಊರಿಗೆ ಬಂದು ನಮ್ಮ ಕಣ್ಣೀರನ್ನು ಒರೆಸಿ, ಸೇತುವೆ ಉದ್ಘಾಟನೆ ಮಾಡಿದ್ದಾರೆ. ಅವರಿಗೆ ನಾವು ಎಷ್ಟು ಕೃತಜ್ಞತೆ ಹೇಳಿದರು ಸಾಲದು ಎಂದರು.

ವೇದಿಕೆಯಲ್ಲಿದ್ದವರು :
ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ, ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಸೇರಿದಂತೆ ಮೊದಲಾದವರಿದ್ದರು.
ಸ್ಥಳೀಯರ ಮಾತು :
ಈ ದಿನ ಸಿಗಂದೂರು ಸೇತುವೆ ಉದ್ಘಾಟನೆ ಮಾಡಿದ್ದಾರೆ. ಎಷ್ಟೋ ದಿನದ ಕನಸನ್ನು ಇವತ್ತು ನನಸು ಮಾಡಿದ್ದಾರೆ. ಅದಕ್ಕೆ ಎಲ್ಲರಿಗೂ ಅಭಿನಂದನೆಗಳು. ಐತಿಹಾಸಿಕವಾಗಿ ನೆನಪಿಸಿಕೊಳ್ಳುವ ದಿನ ಆಗಬೇಕು. ಆರೋಗ್ಯ ಸಮಸ್ಯೆಯಾದರೆ ಲಾಂಚ್ ಮೂಲಕವೇ ತೆರಳಬೇಕಾಗಿತ್ತು. ಆದರೆ ಈಗ ಸೇತುವೆ ನಿರ್ಮಾಣ ಆಗಿರುವುದು ಬಹಳ ಉಪಯುಕ್ತವಾಗಿದೆ. ಮೋದಿಯವರಿಂದ ಎಲ್ಲರಿಗೂ ಅನುಕೂಲವಾಗಿದೆ. ಹಮ್ಮೆಯ ಸಂದರ್ಭ ಇದು. ಹಲವಾರು ವರ್ಷಗಳ ಕನಸು ನನಸಾಗಿದೆ ಸಿಗಂದೂರು ಚೌಡೇಶ್ವರಿ ತಾಯಿಯ ಕೃಪೆಯಿಂದ ಈ ಕನಸು ನನಸಾಗಿದೆ. ಸಿಗಂದೂರು ಸೇತುವೆ ನಿರ್ಮಾಣ ಇಡೀ ದೇಶದ ಜನರಿಗೆ ತಿಳಿದಿದೆ. ಗುಜರಾತ್ ಬಿಟ್ಟರೆ ಸಿಗಂದೂರು ಸೇತುವೆ ಇರುವುದು ಹೆಮ್ಮೆಯ ಸಂಗತಿ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಛಾಯಾಚಿತ್ರ : ಶಶಿಧರ್ ಎಂ.