
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಉನ್ನತೀಕರಣ ಮತ್ತು ಪ್ರಚಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಪ್ರವಾಸೋದ್ಯಮ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೆ.27 ರ ವಿಶ್ವ ಪ್ರವಾಸೋದ್ಯಮ ದಿನಾಚರಣೆ – 2025 ಕಾರ್ಯಕ್ರಮದ ಅಂಗವಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೋಗ ಜಲಪಾತ ಸೇರಿದಂತೆ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಹಾಗೂ ಈವರೆಗೆ ಗುರುತಿಸಲು ಸಾಧ್ಯವಾಗದೇ ಅಜ್ಞಾತವಾಗಿರುವ ಎಲ್ಲಾ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸುವ ಸದುದ್ದೇಶದಿಂದ ಸ್ಥಳೀಯ ಸಂಸ್ಥೆಗಳು, ಆಸಕ್ತರನ್ನೊಳಗೊಂಡು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ಜನಸಾಮಾನ್ಯರಿಗೆ ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ನೋಂದಣಿ ಹೇಗೆ?
ಸ್ಪರ್ಧೆಗಳಲ್ಲಿ ಭಾಗವಹಿಸುವವರು ಆನ್‌ಲೈನ್ ಮೂಲಕ ಆಗಸ್ಟ್ 11 ರಿಂದ 20 ರೊಳಗಾಗಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿದ ಸ್ಪರ್ಧಿಗಳಿಗೆ ಗುರುತಿನ ಚೀಟಿ ನೀಡಲಾಗುವುದು. ಸಮಿತಿಯ ನಿರ್ಣಯದಂತೆ ಸ್ಪರ್ಧೆಗಳ ವಿಜೇತರನ್ನು ಆಯ್ಕೆ ಮಾಡಲಾಗುವುದು.
ವಿಡಿಯೋಗ್ರಫಿ ಸ್ಪರ್ಧೆ :
ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ 40,000/-, ದ್ವಿತೀಯ ಬಹುಮಾನ 30,000/- ಹಾಗೂ ತೃತೀಯ ಬಹುಮಾನ 20,000/-ರೂ.ಗಳ ನಗದು ಬಹುಮಾನ ನೀಡಲಾಗುವುದು. ಅಲ್ಲದೇ 25,000/-ರೂ.ಗಳ ವಿಶೇಷ ಬಹುಮಾನ ನೀಡಲಾಗುವುದು.
ಫೋಟೋಗ್ರಫಿ ಸ್ಪರ್ಧೆ :
ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅನುಕ್ರಮವಾಗಿ 8,000/-, 5,000/- ಮತ್ತು 3,000/-ರೂ.ಗಳ ನಗದು ಪುರಸ್ಕಾರ ನೀಡಲಾಗುವುದು. ಅಲ್ಲದೇ 10,000/-ರೂ.ಗಳ ವಿಶೇಷ ಬಹುಮಾನ ನೀಡಲಾಗುವುದು.
ರೀಲ್ಸ್ ಸ್ಪರ್ಧೆ :
ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅನುಕ್ರಮವಾಗಿ 8,000/-, 5,000/- ಮತ್ತು 3,000/-ರೂ.ಗಳ ನಗದು ಪುರಸ್ಕಾರ ನೀಡಲಾಗುವುದು. ಅಲ್ಲದೇ 10,000/-ರೂ.ಗಳ ವಿಶೇಷ ಬಹುಮಾನ ನೀಡಲಾಗುವುದು.
ಲೋಗೋ ವಿನ್ಯಾಸ ಸ್ಪರ್ಧೆ (Logo) :
ಜಿಲ್ಲೆಯ ಮಹತ್ವದ ಹಲವು ವಿಶೇಷತೆಗಳನ್ನು ಬಿಂಬಿಸುವಂತೆ ಅತ್ಯುತ್ತಮ ರೀತಿಯಲ್ಲಿ ಲಾಂಛನ ವಿನ್ಯಾಸಗೊಳಿಸುವ ಓರ್ವ ವಿನ್ಯಾಸಕಾರರಿಗೆ 30,000/-ರೂ.ಗಳ ಬಹುಮಾನ ನೀಡಲಾಗುವುದು.
ಘೋಷವಾಕ್ಯ ಸ್ಪರ್ಧೆ (Tagline) :
ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ, ಎಲ್ಲರನ್ನೂ ಆಕರ್ಷಿಸುವ ರೀತಿಯಲ್ಲಿ ಜಿಲ್ಲೆಯನ್ನು ಇಲ್ಲಿನ ಮಹತ್ವಗಳನ್ನು ಪರಿಚಯಿಸುವ ಹಾಗೆ ಘೋಷವಾಕ್ಯ ರಚಿಸುವ ಓರ್ವರಿಗೆ ರೂ.5,000/-ಗಳ ನಗದು ಬಹುಮಾನ ನೀಡಲಾಗುವುದು ಎಂದರು.

ಸೆ.27 ರಂದು ಆಚರಿಸಲು ಉದ್ದೇಶಿಸಲಾಗಿರುವ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜನಮನ ಸೆಳೆಯುವ ನಿಟ್ಟಿನಲ್ಲಿ ರೂಪಿಸಿ ಆಯೋಜಿಸಲಾಗುವುದು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಜನರು ಸಹಭಾಗಿಗಳಾಗುವಂತೆ ವಿನೂತನ ರೀತಿಯ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
– ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ
ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಉನ್ನತೀಕರಣ ಮತ್ತು ಪ್ರಚಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಗಳನ್ನು ಸೆಪ್ಟಂಬರ್‌ರೊಳಗಾಗಿ ಪೂರ್ಣಗೊಳಿಸಲಾಗುವುದು. ಸೆ.27 ರಂದು ಅಂತಿಮ ತೀರ್ಪು ನೀಡಿ ಬಹುಮಾನ ನೀಡಲಾಗುವುದು. ಅಂದೇ ವೆಬ್ ಸೈಟ್ ಕೂಡ ಲಾಂಚ್ ಮಾಡಲಾಗುವುದು.
– ಎನ್.ಹೇಮಂತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಪತ್ರಿಕಾಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಧರ್ಮಪ್ಪ, ಶೇಖರ್ ಗೌಳೇರ್ ಮತ್ತಿತರರು ಉಪಸ್ಥಿತರಿದ್ದರು.