
ಶಿವಮೊಗ್ಗ : ಯಾವ ವಿದ್ಯಾರ್ಥಿಗಳು ಗುರುವನ್ನು, ಹೆತ್ತ ತಂದೆ ತಾಯಿಯನ್ನು ಮರೆಯುವುದಿಲ್ಲವೋ, ಅಂತಹ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೆ ತಲುಪುತ್ತಾರೆ. ಏನೇ ಮಾಡಿದರೂ ಸಹ ತಂದೆ ತಾಯಿ ಗುರುಗಳನ್ನು ಮರೆಯಬಾರದು. ಅವರು ದೇವರಿಗಿಂತ ದೊಡ್ಡಸ್ಥಾನದಲ್ಲಿರುತ್ತಾರೆ ಎಂದು ಜಯಪ್ರಕಾಶ್ ನಾರಾಯಣ್ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ನಿವೃತ್ತ ಪ್ರಾಂಶುಪಾಲರಾದ ಮಂಜಾನಾಯ್ಕ್ ಹೇಳಿದರು.
ಇಂದು ಜಯ ಪ್ರಕಾಶ್ ನಾರಾಯಣ್ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಶಿವಮೊಗ್ಗ ಇಲ್ಲಿ 2016-17ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮೇಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಎಲ್ಲಿಯೇ ಹೋದರು ಈ ಶಾಲೆಯನ್ನು ಮರೆಯಲು ಆಗುವುದಿಲ್ಲ. ಸುಮಾರು 8 ವರ್ಷಗಳ ಕಾಲ ಈ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದೇವೆ. ಸೇವೆ ಸಲ್ಲಿಸಿದ ಅಷ್ಟೂ ದಿನವೂ ಆತ್ಮೀಯತೆಯೊಂದಿಗೆ ಮಕ್ಕಳ ಜೊತೆ ಒಡನಾಟದಲ್ಲಿ ಸೇವೆ ಸಲ್ಲಿಸಿದ್ದೇವೆ. ಶಿಕ್ಷಕರೊಂದಿಗೆ ಗೌರವದಿಂದ ಆತ್ಮೀಯತೆಯಿಂದ ಭಯ ಭಕ್ತಿಯಿಂದ ನಡೆದುಕೊಳ್ಳುವುದು ಮುಖ್ಯ. ಎಲ್ಲರೂ ಸಾಮಾಜಿಕವಾಗಿ ಒಡನಾಟ ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಎಂದರು.
ಶಿಕ್ಷಕರು ಎಂದರೆ ಗೌರವದ, ಮಹತ್ವದ ಹುದ್ದೆ. ಶಿಕ್ಷಕರ ಹುದ್ದೆ ಅತ್ಯುತ್ತಮವಾದದ್ದು, ಬೆಲೆಕಟ್ಟಲಾಗದಂತಹದ್ದು, ಬಹಳ ಶ್ರೇಷ್ಠವಾದದ್ದು. ನಾನು ಬಂದ ಸಮಯದಲ್ಲಿ ವಾತಾವರಣ ಸ್ವಲ್ಪ ಹದಗೆಟ್ಟಿತ್ತು. ಕಹಿಯಾದದನ್ನು ಸಿಹಿಯಾದ ರೂಪದಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸಿದ್ದೇವೆ.
| ಮಂಜಾನಾಯ್ಕ್, ನಿವೃತ್ತ ಪ್ರಾಂಶುಪಾಲರು

ಈ ಒಂದು ಸುಂದರ ಕ್ಷಣಕ್ಕೆ ನಾವೆಲ್ಲರೂ ಆಭಾರಿಯಾಗಿದ್ದೇವೆ. ಬಹಳಷ್ಟು ಶಿಕ್ಷಕರು ಯಾವುದೇ ನಿರೀಕ್ಷೆ ಇಲ್ಲದೇ ಪಾಠ ಮಾಡುತ್ತೇವೆ. ಆದರೆ ಅದನ್ನು ಗುರುತಿಸುವ ಮನಸ್ಥಿತಿ ಬಹಳ ಶ್ರೇಷ್ಠವಾದದ್ದು. ಈ ಶಾಲೆಯ ಋಣ ತೀರಿಸಲು ಆಗುವುದಿಲ್ಲ. ನಮಗೆ ಪಾಠ ಮಾಡಿದ ಗುರುಗಳನ್ನು ನೆನಪಿಸಿಕೊಳ್ಳುವುದರಿಂದ ನಮ್ಮ ಜೀವನ ಸುಗಮವಾಗುತ್ತದೆ. ಗುರುಗಳ ಶ್ರಮದ ಪ್ರತಿಫಲ ನಾವು ಈ ಹಂತವನ್ನು ತಲುಪಿದ್ದೇವೆ ಎಂಬುದು ವಸ್ತು ಸ್ಥಿತಿ. ಬಾಂಧವ್ಯವನ್ನು ಬೆಸುಗೆ ಮಾಡಿದ ಈ ಸಮಯ ನಿರಂತರವಾಗಿರಲಿ.
| ವೈ.ಪ್ರಹ್ಲಾದ್, ಶಿಕ್ಷಕರು
ಈ ಶಾಲೆ ನಮಗೆ ಜೀವನ ಕೊಟ್ಟಿದೆ. ಯಾವಾಗಲೂ ಮರೆಯಲು ಆಗುವುದಿಲ್ಲ. ಶಾಲೆಯ ಮೇಲೆ ಅಭಿಮಾನ ಇದೆ. ಈ ಕಾರ್ಯಕ್ರಮ ಆಯೋಜಿಸಿರುವುದು ಬಹಳ ಖುಷಿ ತಂದಿದೆ.
| ಕುಸ್ತರ್ ಬಾನು, ಶಿಕ್ಷಕರು
ಈ ದಿನ ಸುಂದರವಾದ, ಅರ್ಥ ಪೂರ್ಣವಾದ ಕಾರ್ಯಕ್ರಮ. ಜೀವನದಲ್ಲಿ ನಾವು ಮೂರು ಜನರನ್ನು ಮರೆಯಲು ಆಗುವುದಿಲ್ಲ. ನಮ್ಮನ್ನು ಭೂಮಿಗೆ ಪರಿಚಯಿಸಿಕೊಟ್ಟ ತಂದೆ ತಾಯಿ, ಮಾರ್ಗದರ್ಶನ ನೀಡಿದ ಶಿಕ್ಷಕರು, ಇವರಿಗೆ ನಾವು ಯಾವಾಗಲೂ ಕೃತಜ್ಞರಾಗಬೇಕು. ಪ್ರತಿ ಹಂತದಲ್ಲೂ ನಾವು ಎಡವಿದಾಗ ನಮಗೆ ನೆನಪಾಗುವ ಶಿಕ್ಷಕರನ್ನು ನಾವು ನೆನಪಿಸಿಕೊಳ್ಳಬೇಕು. ಗುರುಗಳನ್ನು ಮೀರಿಸುವ ರೀತಿಯಲ್ಲಿ ವಿದ್ಯಾರ್ಥಿಗಳು ಬೆಳೆಯಬೇಕು.
| ಚಂದ್ರನಾಯ್ಕ್, ಶಿಕ್ಷಕರು
ಈ ಶಾಲೆಯಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಈ ಶಾಲೆಯ ಮೇಲೆ ಬಹಳ ಅಭಿಮಾನ ಇದೆ. ನಿಮ್ಮ ಪ್ರೀತಿ ಹೀಗೆ ನಿರಂತರವಾಗಿರಲಿ.
| ಸುಲೋಚನಾ, ಶಿಕ್ಷಕರು
ಆರದಿರಲಿ ದೀವಿಗೆ, ಬೆಳಕನು ನೀಡಲಿ ಬಾಳಿಗೆ ಎಂಬ ಹಾಡಿನ ಮೂಲಕ, ಪ್ರತಿಯೊಂದು ಶಾಲೆಯ ಗುಣಮಟ್ಟ ಆ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಂದ ನಿರ್ಮಾಣವಾಗಿರುತ್ತದೆ. ಯಾವುದೇ ವೃತ್ತಿಯನ್ನು ಮಾಡಿದರೂ ಸಹ ಈ ಶಾಲೆಯ ಪ್ರತಿನಿಧಿಯಾಗಿರುತ್ತೇವೆ. ತಂದೆ ತಾಯಿಗೆ ಹಾಗೂ ಗುರುಗಳಿಗೆ ಸದಾ ಚಿರಋಣಿಯಾಗಿರಬೇಕು.
| ಚಂದ್ರಕಲಾ, ಶಿಕ್ಷಕರು
ಜೆಪಿಎನ್ ಶಾಲೆ ಎಂದ ತಕ್ಷಣ ಹೃದಯ ತುಂಬಿ ಬರುತ್ತದೆ. ಈ ಶಾಲೆಗೆ ಶಿಕ್ಷಕರು ಬರುತ್ತಾರೆ ಹೋಗುತ್ತಾರೆ, ಆದರೆ ಈ ಶಾಲೆಯ ಕಟ್ಟಡ ಶಾಶ್ವತ. ಶಾಲೆಯ ಅಳಿವು ಉಳಿವು ನಮ್ಮ ನಿಮ್ಮ ಕೈಲಿದೆ. ಈ ದಿನ ನಿಜಕ್ಕೂ ಅವಿಸ್ಮರಣೀಯವಾದದ್ದು.
| ಛಾಯಾದೇವಿ, ಶಿಕ್ಷಕರು
ಇದು ನನ್ನ ತವರು ಮನೆ ಇದ್ದ ಹಾಗೆ. ತುಂಬಾ ಖುಷಿ ಇದೆ. ನಿಮ್ಮ ಈ ಕಾರ್ಯಕ್ರಮದ ಆಯೋಜನೆಯಿಂದ ಶಿಕ್ಷಕರಾಗಿದ್ದಕ್ಕೆ ಸಾರ್ಥಕ ಎನಿಸುತ್ತಿದೆ.
| ಮೇರಿ ಪ್ರಿಯದರ್ಶಿನಿ, ಶಿಕ್ಷಕರು
ಈ ಶಾಲೆ ಒಂದು ಸ್ವರ್ಗ ಇದ್ದಂತೆ. ನಿಮ್ಮಿಂದಲೇ ನಮಗೆ ಜೀವಂತ ಕಳೆ. ನೀವಿರುವುದರಿಂದಲೇ ನಾವು. ನಮ್ಮಿಂದ ಆಗುವಷ್ಟು ಶಾಲೆಗೆ ಏನಾದರೂ ಮಾಡೋಣ. ಈ ಶಾಲೆ ಹೀಗೆ ಮುಂದುವರೆಯಬೇಕು. ಅದಕ್ಕೆ ಎಲ್ಲರೂ ಶ್ರಮಿಸೋಣ.
| ಸುನೀತಾ ಎಸ್ ಕುರ್ಡೇಕರ್, ಶಿಕ್ಷಕರು
ನೀವೆಲ್ಲರೂ ಉತ್ತಮ ಸ್ಥಾನವನ್ನು ತಲುಪಿದ್ದೀರಿ. ಬಹಳ ಸಂತೋಷ ಇದೆ. ನಿಮ್ಮ ಭವಿಷ್ಯ ಇನ್ನೂ ಉಜ್ವಲವಾಗಿರಲಿ.
| ಕಲಾವತಿ, ಶಿಕ್ಷಕರು
ಸುಮಾರು 10 ವರ್ಷಗಳ ಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದೇವೆ. ಈಗ ಬೇರೆ ಕಡೆ ಇದ್ದರೂ ಈ ಶಾಲೆಯನ್ನು ನೆನಪಿಸಿಕೊಳ್ಳದ ದಿನವಿಲ್ಲ. ನಿಮ್ಮ ಜೀವನದಲ್ಲಿ ತಂದೆ ತಾಯಿಯರು, ಗುರುಗಳು ಬಹಳ ಮುಖ್ಯವಾಗಿರುತ್ತಾರೆ.
| ಆಶಾ, ಶಿಕ್ಷಕರು
ಈ ಶಾಲೆಗೆ ಶಿಕ್ಷಕನಾಗಿ ಬಂದ ನಂತರ ಪ್ರಪಂಚ ಬಹಳ ದೊಡ್ಡದಾಗಿದೆ ಎಂದು ಅರಿತಿದ್ದೇನೆ. ನಿಮಗೆಲ್ಲರಿಗೂ ಜೀವನದ ಮೌಲ್ಯವನ್ನು ಹೇಳಿಕೊಟ್ಟಿದ್ದೇನೆ.
| ಜಯದೇವಪ್ಪ, ಶಿಕ್ಷಕರು
ಹೆತ್ತ ತಾಯಿ ಹೊತ್ತ ನಾಡು, ಕಳಿಸಿದ ಶಿಕ್ಷಕ ಈ ಮೂರು ಜನ ನಮ್ಮ ಸರ್ವಸ್ವ. ಈ ಶಾಲೆಯಲ್ಲಿ ಸಿಕ್ಕ ತೃಪ್ತಿ, ಸಂತೋಷ ಮತ್ತೆಲ್ಲೂ ಸಿಕ್ಕಿಲ್ಲ. ನನ್ನ ಸೌಭಾಗ್ಯ ಈ ಶಾಲೆಯಲ್ಲಿ ಪಾಠ ಮಾಡುವ ಅವಕಾಶ ಸಿಕ್ಕಿತು. ನಾವೆಲ್ಲರೂ ನಿಮಗೆ ಆಭಾರಿಯಾಗಿದ್ದೇವೆ.
| ಲಕ್ಷ್ಮಣ್, ಶಿಕ್ಷಕರು
ನಿಜವಾಗಲೂ ಈ ದಿನ ಅವಿಸ್ಮರಣೀಯವಾದದ್ದು. ಸುಮಾರು 22 ವರ್ಷ ಶಿಕ್ಷಕ ಹುದ್ದೆಯನ್ನು ಪೂರೈಸಿದ್ದೇನೆ. ಎನ್ ಈ ಎಸ್ ಸಂಸ್ಥೆಯಲ್ಲಿ 10 ವರ್ಷ ಕಾಲ ಸೇವೆ ಸಲ್ಲಿಸಿದ್ದೇನೆ. ಆದರೆ ವೃತ್ತಿ ಜೀವನದಲ್ಲಿ ತೃಪ್ತಿ ನೀಡಿದ್ದು ಈ ಜೆಪಿಎನ್ ಶಾಲೆ. ಈ ಸಮಯದಲ್ಲಿ ನಮ್ಮ ಶಿಕ್ಷರನ್ನು ನೆನಪಿಸಿಕೊಳ್ಳುತ್ತೇನೆ. ನನಗೆ ಪಾಠ ಹೇಳಿಕೊಟ್ಟ ಶಿಕ್ಷಕರ ಆಸೆಯನ್ನು ಪೂರೈಸಿದ್ದೇನೆ ಎನ್ನುವ ಆತ್ಮತೃಪ್ತಿ ಇದೆ.
| ಮಮತಾ, ಶಿಕ್ಷಕರು
ಇದು ನಿಮ್ಮ ಸುವರ್ಣ ಯುಗ. ನೀವು ಮನಸ್ಸು ಮಾಡಿದರೇ ಏನೂ ಬೇಕಾದರೂ ಮಾಡಬಹುದು. ಉತ್ತಮ ಕಟ್ಟಡ, ನುರಿತ ಶಿಕ್ಷಕರ ವ್ಯವಸ್ಥೆ ಇದ್ದರೂ ಸಹ ಪ್ರಸ್ತುತ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಿದೆ. ಪೋಷಕರು ಖಾಸಗಿ ಶಾಲೆಗಳತ್ತ ಒಲವು ತೋರುತ್ತಿದ್ದಾರೆ. ಇದು ನಿಜಕ್ಕೂ ಬೇಸರದ ಸಂಗತಿ. ಆ ನಿಟ್ಟಿನಲ್ಲಿ ಶಾಲೆಯ ಸ್ಥಿತಿಯನ್ನು ಉತ್ತಮ ಮಟ್ಟದಲ್ಲಿ ತೆಗೆದುಕೊಂಡು ಹೋಗಲು ಎಲ್ಲರ ಸಹಕಾರ ಅತ್ಯಂತ ಅಗತ್ಯ.
| ಇಮ್ತಿಯಾಜ್ ಅಹಮ್ಮದ್, ಮುಖ್ಯ ಶಿಕ್ಷಕರು

ಕಾರ್ಯಕ್ರಮದ ಮೊದಲು ಶಿಕ್ಷಕರಿಂದ ಗಿಡ ನೆಡುವ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಜಯಪ್ರಕಾಶ್ ನಾರಾಯಣ್ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಗುರುಗಳಾದ ವೈ.ಪ್ರಹ್ಲಾದ್, ಡಿ.ಎಂ.ಜಯದೇವಪ್ಪ, ಬಿ.ಎಸ್.ಛಾಯಾದೇವಿ, ಡಿ. ಲಕ್ಷ್ಮಣ್, ಎಲ್.ಚಂದ್ರನಾಯ್ಕ್, ಸುನೀತಾ ಎಸ್ ಕುರ್ಡೇಕರ್, ಆಶಾ.ಡಿ.ಪಿ, ಕುಸ್ತರ್ ಬಾನು, ಎನ್.ಸುಲೋಚನಾ, ಕಲಾವತಿ, ಮೇರಿ ಪ್ರಿಯದರ್ಶಿನಿ, ಮಮತಾ, ಶಾಲೆಯ ಮುಖ್ಯೋಪಾಧ್ಯಾಯರಾದ ಇಮ್ತಿಯಾಜ್ ಅಹಮ್ಮದ್, ಶಿವಕುಮಾರ್ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.