
ಶಿವಮೊಗ್ಗ : ಇಂದು ಮಧ್ಯಾಹ್ನ ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತದ ಅಂಡರ್ ಗ್ರೌಂಡ್ (Underground) ನಡಿಗೆಯಲ್ಲಿ ಮಳೆ ನೀರು ತುಂಬಿ ರಸ್ತೆ ಮೇಲೆ ಹರಿದು, ಸಾರ್ವಜನಿಕರಿಗೆ ಸಂಚಾರ ತೊಂದರೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದರು.
ಸ್ಥಳೀಯ ಆಡಳಿತ ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿ, ತ್ವರಿತ ಕ್ರಮವಾಗಿ ಮೋಟಾರ್ ವ್ಯವಸ್ಥೆಯ ಮೂಲಕ ನೀರು ಹೊರಹಾಕುವ ಕಾರ್ಯಕ್ಕೆ ಸೂಚನೆ ನೀಡಿದರು.
ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಮುಂಬರುವ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕ್ರಮಗಳನ್ನು ರೂಪಿಸಬೇಕು.
– ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು

ಜನ ಬಳಕೆಗೆ ಬಾರದ ಅಂಡರ್ ಪಾಸ್ ಗಳು :
ಸುಗಮ ಸಂಚಾರದ ವ್ಯವಸ್ಥೆಗಾಗಿ, ಮುಕ್ತ ಓಡಾಟ ಕಲ್ಪಿಸುವ ಸಲುವಾಗಿ, ಪಾದಚಾರಿಗಳಿಗೆ ಅನುಕೂಲವಾಗುವಂತೆ ನಗರದ ಶಿವಪ್ಪನಾಯಕ ವೃತ್ತ ಹಾಗೂ ಅಮೀರ್ ಅಹಮ್ಮದ್ ವೃತ್ತಗಳಲ್ಲಿ ಅಂಡರ್ ಪಾಸ್ ನಿರ್ಮಿಸುವ ಯೋಜನೆಯನ್ನು 2008 ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ವೇಳೆ ರೂಪಿಸಿ ಅನುಷ್ಟಾನಗೊಳಿಸಲಾಗಿತ್ತು.
ಶಾಲೆ, ಕಾಲೇಜುಗಳು ಸೇರಿದಂತೆ ಗಾಂಧೀ ಬಜಾರ್, ಹೂವಿನ ಮಾರ್ಕೆಟ್, ಬಹುತೇಕ ಬಟ್ಟೆ ಅಂಗಡಿಗಳು, ವಿವಿಧ ರೀತಿಯ ಮಳಿಗೆಗಳು ಇರುವ ನಗರದ ಹೃದಯ ಭಾಗವಾಗಿರುವ ಇಲ್ಲಿ ಅಗತ್ಯವಾಗಿ ವಸ್ತುಗಳನ್ನು ಖರೀದಿಸಲು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಓಡಾಡುತ್ತಾರೆ. ಆದರೆ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಅಂಡರ್ ಪಾಸ್ ಪ್ರಸ್ತುತ ನೀರಿನಿಂದ ಆವೃತವಾಗಿ ಕಸ ಕಡ್ಡಿಗಳಿಂದ ಪಾಳು ಬಿದ್ದಿದ್ದು, ಅಂಡರ್ ಪಾಸ್ ಸ್ಥಿತಿ ಶೋಚನೀಯವಾಗಿದೆ.
ಈ ಮೊದಲು ಪಾದಚಾರಿಗಳಿಗೆ ಅಂಡರ್ ಪಾಸ್ ಮೂಲಕ ಓಡಾಡಲು ಸೂಚಿಸಿದರೂ ಸಹ ಜನರು ಉತ್ಸಾಹ ತೋರಲಿಲ್ಲ. ಕಾಲಕ್ರಮೇಣ ಅಂಡರ್ ಪಾಸ್ ಅನೈತಿಕ ಚಟುವಟಿಕೆ ತಾಣವಾಗಲಾರಂಭಿಸಿದ ಕಾರಣ, ಇದರ ಬಾಗಿಲುಗಳಿಗೆ ಬೀಗ ಹಾಕಲಾಗಿತ್ತು. ಆದರೆ ಮಳೆ ನೀರು, ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಕವರ್ ಸೇರಿದಂತೆ ಇತ್ಯಾದಿ ಕಸದ ರಾಶಿಗಳಿಂದ ತುಂಬಿ ಸ್ವಚ್ಛತೆಗೆ ಆದ್ಯತೆ ಇಲ್ಲದಂತಾಗಿದೆ.

ನೀರು ಹೊರಹೋಗುವ ಯಾವುದೇ ವ್ಯವಸ್ಥೆ ಮಾಡಿರದ ಕಾರಣದಿಂದ, ಅವ್ಯವಸ್ಥೆ ಸೃಷ್ಟಿಯಾಗುವಂತಾಗಿತ್ತು. ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಳ್ಳಲಾರಂಭಿಸಿದ್ದ ಕಾರಣ ಸೀಪೇಜ್ ಇರಬಹುದೆಂದು ಆಗಾಗ್ಗೆ ಪಂಪ್ ಸೆಟ್ ಗಳ ಮೂಲಕ ಅಂಡರ್ ಪಾಸ್‌ನಲ್ಲಿ ಸಂಗ್ರಹವಾಗುತ್ತಿದ್ದ ನೀರನ್ನು ಹೊರ ಹಾಕಲಾಗುತ್ತಿತ್ತು. ಪ್ರಸ್ತುತ ಅಂಡರ್ ಪಾಸ್‌ನಲ್ಲಿ ಭಾರೀ ಪ್ರಮಾಣದ ನೀರು ತುಂಬಿಕೊಂಡು, ಕಾಲುವೆಯಂತಾಗಿ ಪರಿಣಮಿಸಿದೆ.
ಮತ್ತೊಂದೆಡೆ, ಅಂಡರ್ ಪಾಸ್‌ನಲ್ಲಿ ಫುಟ್ ಪಾತ್ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿಕೊಡುವ ನಿರ್ಧಾರ ಕೂಡ ಮಾಡಲಾಗಿತ್ತು. ಅದು ಕೂಡ ಕಾರ್ಯರೂಪಕ್ಕೆ ಬರಲಿಲ್ಲ. ನೀರಿನಿಂದ ಆವೃತವಾಗಿರುವ ಅಂಡರ್ ಪಾಸ್ ಗೆ ಕಾಯಕಲ್ಪ ನೀಡುವ ಕಾರ್ಯವಾಗಬೇಕಾಗಿದೆ. ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಆಡಳಿತ ಇತ್ತ ಗಮನಹರಿಸುವುದು ಅಗತ್ಯವಾಗಿದೆ.