
ಶಿವಮೊಗ್ಗ : ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ಉತ್ಸವದ ಅಂಗವಾಗಿ ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಮಹಾದ್ವಾರ ನಿರ್ಮಾಣ ಕಾರ್ಯವು ಸಕಲ ಸಿದ್ಧತೆಗಳೊಂದಿಗೆ ಆರಂಭವಾಗಿದೆ. ಈ ಬಾರಿಯ ಮಹಾದ್ವಾರ ವಿನ್ಯಾಸದ ಕುರಿತು ಇದ್ದ ಕುತೂಹಲಕ್ಕೆ ತೆರೆಬೀಳಲು ಕ್ಷಣಗಣನೆ ಶುರುವಾಗಿದೆ.
ಈ ಹಿಂದೆ ರಾಮ ಮಂದಿರ, ಸಿಂಹಾಸನರೂಢ ಛತ್ರಪತಿ ಶಿವಾಜಿ ಮಹಾರಾಜ್, ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಸನ್ನಿವೇಶ ಈ ರೀತಿಯಲ್ಲಿ ರೂಪಿಸಿದ್ದ ಮಹಾದ್ವಾರಗಳು ಜನರ ಗಮನ ಸೆಳೆದಿದ್ದವು. ಈ ಬಾರಿ ವಿಭಿನ್ನವಾದ ಕಾನ್ಸೆಪ್ಟ್ ಸಿದ್ಧವಾಗಿದ್ದು, ಜನರ ಕುತೂಹಲವನ್ನು ಹೆಚ್ಚಿಸಿದೆ.
ಈ ಬಾರಿಯ ಕಾನ್ಸೆಪ್ಟ್ ಏನು?
ಅದೇ ರೀತಿ ಈ ಬಾರಿಯ ಮಹಾದ್ವಾರ ನಿರ್ಮಾಣ ಕುರಿತು ಜನರ ಕುತೂಹಲ ಗರಿಗೆದರಿತ್ತು. ಪುರಾಣಗಳಲ್ಲಿ ಪ್ರಸಿದ್ಧವಾದ ಸಮುದ್ರ ಮಂಥನ ಅಥವಾ ಕ್ಷೀರ ಸಾಗರ ಮಂಥನ ಘಟನೆಯ ಸನ್ನಿವೇಶವನ್ನು ಈ ಬಾರಿ ರೂಪಿಸಲಾಗಿದೆ.
ಜೀವನ್ ಕಲಾ ಸನ್ನಿಧಿಯಲ್ಲಿ ನಿರ್ಮಾಣ ಆಗಿದ್ದ ಕಲಾಕೃತಿಗಳನ್ನು ಗಾಂಧಿ ಬಜಾರ್‌ಗೆ ತರಲಾಗಿದ್ದು, ಈ ಕಲಾಕೃತಿಗಳ ಜೋಡಣೆ ಕಾರ್ಯ ನಡೆಯಲಿದೆ. ಜೀವನ್ ನೇತೃತ್ವದ ಕಲಾವಿದರ ತಂಡದವರು ಮಹಾದ್ವಾರವನ್ನು ನಿರ್ಮಾಣ ಮಾಡಲಿದ್ದಾರೆ.

ಈ ಹಿಂದೆ ನಡೆದಂತಹ ಸಮುದ್ರ ಮಂಥನವನ್ನು ಗಮನದಲ್ಲಿಟ್ಟುಕೊಂಡು, ಇಡೀ ಹಿಂದೂ ಸಮಾಜಕ್ಕೆ ಒಂದು ದಿಕ್ಕನ್ನು ಕೊಡಬೇಕೆಂದು ಯೋಚನೆ ಮಾಡಿ, ದುಷ್ಟರ ಸಂಹಾರ, ಕೆಟ್ಟ ಮನಸ್ಥಿತಿಗಳ ಕೊನೆ, ರಾಕ್ಷಸಿ ಭಾವನೆಗಳನ್ನು ದೂರಮಾಡಬೇಕು ಎನ್ನುವ ನಿಟ್ಟಿನಲ್ಲಿ ಸಮುದ್ರ ಮಂಥನದ ವ್ಯವಸ್ಥೆಯನ್ನು ಯೋಚನೆ ಮಾಡಲಾಗಿದೆ. ಇದೊಂದು ಐತಿಹಾಸಿಕ ಕಾರ್ಯವಾಗಿದೆ. ಇಡೀ ಹಿಂದೂ ಸಮಾಜ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತದೆ. ಇದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಕೇಸರಿ ಹಿಂದೂ ಅಲಂಕಾರ ಸಮಿತಿ ಕಾರ್ಯಕ್ಕೆ ಭಗವಂತನ ಆಶೀರ್ವಾದ ಇರುತ್ತದೆ. ಶಿವಮೊಗ್ಗ ಜನತೆಯ ಪರವಾಗಿ ಸಹಕರಿಸಿದ ಎಲ್ಲ ಕಲಾವಿದರಿಗೆ ಅಭಿನಂದನೆಗಳು.
| ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು
ಕೇಸರಿ ಹಿಂದೂ ಅಲಂಕಾರ ಸಮಿತಿ ನೀಡಿದ ವಿಷಯದ ಮೇರೆಗೆ ಸುಮಾರು 250 ಪೋಟೋಗಳನ್ನು ನೋಡಿ, ನಂತರ ನಮ್ಮ ಕಲ್ಪನೆ ಮೇರೆಗೆ ವ್ಯವಸ್ಥೆ ಮಾಡಲಾಗಿದೆ. ಇಡೀ ವ್ಯವಸ್ಥೆ ಮಾಡಲು ಸುಮಾರು ಒಂದು ತಿಂಗಳು ಸಮಯ ತೆಗೆದುಕೊಂಡಿದ್ದು, 30 ಜನ ಕಲಾವಿದರು ಕೆಲಸ ಮಾಡಿದ್ದೇವೆ.
| ಜೀವನ್, ಕಲಾವಿದ
ಹಿಂದೂ ಧರ್ಮದಲ್ಲಿ ಸಮುದ್ರ ಮಂಥನ ಅಥವಾಮೀ ಕ್ಷೀರಸಾಗರ ಮಂಥನ ಅಥವಾ ಸಾಗರ ಮಂಥನ ಘಟನೆ ಪುರಾಣಗಳಲ್ಲೂ ಅತ್ಯಂತ ಪ್ರಸದ್ಧಿಯನ್ನು ಪಡೆದುಕೊಂಡಿದೆ. ಸಮುದ್ರ ಮಂಥನವನ್ನು ನೆನೆದು 12 ವರ್ಷಗಳಿಗೊಮ್ಮೆ ಅತ್ಯಂತ ವಿಜೃಂಭಣೆಯಿಂದ ಕುಂಭಮೇಳ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಮುದ್ರ ಮಂಥನದ ಕಥೆಯನ್ನು ನಾವು ಭಾಗವತ ಪುರಾಣ, ಮಹಾಭಾರತ ಹಾಗೂ ವಿಷ್ಣು ಪುರಾಣದಲ್ಲೂ ಕೂಡ ನೋಡಬಹುದು.
ಸಮುದ್ರ ಮಂಥನಕ್ಕೆ ಕಾರಣ :
ಸಮುದ್ರ ಮಥನದ ಕಥೆಯು ಹಿಂದೂ ಪುರಾಣಗಳಲ್ಲಿ ಉಲ್ಲೇಖಿತವಾದ, ದೇವತೆಗಳು ಮತ್ತು ಅಸುರರು ಅಮೃತವನ್ನು ಪಡೆಯಲು ನಡೆಸಿದ ಒಂದು ಮಹಾ ಘಟನೆಯಾಗಿದೆ. ಇದಕ್ಕೆ ಕಾರಣ, ಇಂದ್ರನಿಗೆ ದೂರ್ವಾಸರು ನೀಡಿದ ಹಾರವನ್ನು ಆನೆ ತುಳಿದಾಗ, ದೂರ್ವಾಸರ ಶಾಪದಿಂದ ದೇವತೆಗಳು ತಮ್ಮ ಶಕ್ತಿ ಕಳೆದುಕೊಂಡರು. ವಿಷ್ಣುವಿನ ಸಲಹೆಯಂತೆ, ಅವರು ಅಸುರರೊಂದಿಗೆ ಸೇರಿ, ಮಂದಾರ ಪರ್ವತವನ್ನು ಕಡಗೋಲಾಗಿಯೂ, ವಾಸುಕಿ ಹಾವನ್ನು ಹಗ್ಗವಾಗಿಯೂ ಬಳಸಿ, ಕ್ಷೀರಸಾಗರವನ್ನು ಕಡೆದರು. ಈ ಮಂಥನದಲ್ಲಿ ಆಲಾಹಲ ಎಂಬ ವಿಷ, ಲಕ್ಷ್ಮಿ, ಧನ್ವಂತರಿ, ಅಮೃತ ಸೇರಿದಂತೆ ಹದಿನಾಲ್ಕು ರತ್ನಗಳು ಹೊರಬಂದವು.
ಇದನ್ನೂ ಓದಿ » ಶಿವಪ್ಪನಾಯಕ ವೃತ್ತದ ಅಂಡರ್ ಪಾಸ್ ಸ್ಥಿತಿ ಶೋಚನೀಯ, ಸ್ಥಳಕ್ಕೆ ಶಾಸಕ ಚೆನ್ನಿ ಭೇಟಿ, ತ್ವರಿತ ಕ್ರಮಕ್ಕೆ ಸೂಚನೆ