
ಶಿವಮೊಗ್ಗ : ಶಿವಮೊಗ್ಗ ನಗರದ ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ನಗರ ಈಗ ಕೇಸರಿಮಯವಾಗಿದೆ.
ಈಗಾಗಲೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಮೆರವಣಿಗೆಯ ಯಶಸ್ಸಿಗೆ ಬಿಗಿಭದ್ರತಾ ಕ್ರಮ ಕೈಗೊಂಡಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ. ಇನ್ನೊಂದೆಡೆ ಜಿಲ್ಲಾಡಳಿತವೂ ಕೂಡ ಹಿಂದೂ ಮಹಾ ಸಭಾ ಗಣಪತಿಯ ಮೆರವಣಿಗೆಯ ಹಿನ್ನೆಲೆಯಲ್ಲಿ ವಾಹನಗಳ ಮಾರ್ಗ ಬದಲಾವಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಇದರ ಜೊತೆಗೆ ಈಗ ಹಿಂದೂಪರ ಸಂಘಟನೆಗಳು ನಗರಕ್ಕೆ ವಿಶೇಷ ಅಲಂಕಾರ ಮಾಡಿವೆ.
ನಗರದ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಹಿಂದೂ ಮಹಾ ಸಭಾ ಗಣಪತಿಗೆ ಇಂದು (ಸೆ.05) ರಂದು ರಾತ್ರಿ ಮಹಾಮಂಗಳರಾತಿ ನಡೆಯಲಿದೆ. ಅಲ್ಲಿಂದ ನಾಳೆ (ಸೆ.06) ರಂದು ಬೆಳಿಗ್ಗೆಯಿಂದ ಮೆರವಣಿಗೆ ಆರಂಭವಾಗಲಿದೆ. ಕೋಟೆ ರಸ್ತೆ ಮೂಲಕ ರಾಮಣ್ಣ ಶ್ರೇಷ್ಟಿ ಪಾರ್ಕ್ ದೇವಸ್ಥಾನಕ್ಕೆ ಬಂದು, ಅಲ್ಲಿಂದ ಗಾಂಧಿಬಜಾರ್ ಮೂಲಕ ನೆಹರು ರಸ್ತೆ, ಹಾದು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಆನಂತರ ವಿಸರ್ಜನೆಗೊಳ್ಳಲಿದೆ.

ಕೇಸರಿಯಿಂದ ಕಂಗೊಳಿಸುತ್ತಿರುವ ನಗರ :
ಈಗಾಗಲೇ ನಗರದ ಗಾಂಧಿಬಜಾರ್ ಮುಖ್ಯ ಮಹಾದ್ವಾರದಲ್ಲಿ ಕಲಾಕೃತಿಯು ಸಂಪೂರ್ಣವಾಗಿ ಸೆಟ್ಟೇರಿದೆ. ಹಿಂದೂ ಅಲಂಕಾರ ಸಮಿತಿಯು ಕಳೆದ ಐದಾರು ವರ್ಷಗಳಿಂದ ಗಾಂಧಿ ಬಜಾರ್ನ ಮಹಾದ್ವಾರದಲ್ಲಿ ವಿಶೇಷ ಅಲಂಕಾರ ಮಾಡುತ್ತಾ ಬಂದಿದೆ. ಅಂತೆಯೇ ಈ ವರ್ಷವೂ ಕೂಡ ಕಲಾಕೃತಿಯನ್ನ ನಿರ್ಮಿಸಿ ಜನರ ಆಕರ್ಷಣೆಗೆ ಮುಂದಾಗಿದೆ.
ಕಳೆದ ಬಾರಿಯಂತೆಯೇ ಈ ವರ್ಷವೂ ಗಾಂಧಿ ಬಜಾರ್ನ ಮುಖ್ಯ ದ್ವಾರದಲ್ಲಿ ಆಕರ್ಷಣೀಯವಾದ ಕಲಾಕೃತಿ ನಿರ್ಮಿಸಲಾಗಿದೆ. ಕಲಾವಿದ ಜೀವನ್ ಅವರಿಂದ ಮೂಡಿಬರುತ್ತಿರುವ ಈ ಕಲಾಕೃತಿಗಳ ಸಂಭ್ರಮ, 2018 ರಲ್ಲಿ ಆಯೋಧ್ಯೆ ರಾಮಮಂದಿರ, 2019 ರಲ್ಲಿ ಸಿಂಹಾಸನರೂಢ ಛತ್ರಪತಿ ಶಿವಾಜಿ ಮಹಾರಾಜ್, 2020-21 ಕೊರೋನದ ಹಿನ್ನಲೆಯಲ್ಲಿ ಕಲಾಕೃತಿಗೆ ವಿರಾದು. 2022 ರಲ್ಲಿ ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಸನ್ನಿವೇಶ, 2023ರಲ್ಲಿ ಉಗ್ರ ನರಸಿಂಹ, 2024 ಈ ಬಾರಿ ಕಾಶಿ ವಿಶ್ವನಾಥನ ದೇಗುಲದ ಕಲಾಕೃತಿ, 2025 ರ ಈ ಬಾರಿ ಪುರಾಣಗಳಲ್ಲಿ ಪ್ರಸಿದ್ಧವಾದ ಸಮುದ್ರ ಮಂಥನ ಅಥವಾ ಕ್ಷೀರ ಸಾಗರ ಮಂಥನ ಘಟನೆಯ ಸನ್ನಿವೇಶ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ.

ಅದರ ಜೊತೆಗೆ ನಗರವೆಲ್ಲಾ ವಿದ್ಯುತ್ ದೀಪಾಲಂಕೃತ ಗೊಂಡಿದೆ. ಈಗಾಗಲೇ ಗಾಂಧಿ ಬಜಾರ್ ರಸ್ತೆಯನ್ನು ಕೇಸರಿ ಬಂಟಿಂಗ್ಸ್ನಲ್ಲಿ ಅಲಂಕಾರ ಮಾಡಲಾಗಿದೆ. ಇನ್ನೊಂದೆಡೆ ನಗರದ ಪ್ರಮುಖ ವೃತ್ತಗಳಲ್ಲಿಯೂ ಕೂಡ ದ್ವಾರಗಳನ್ನು ನಿರ್ಮಿಸಲಾಗಿದ್ದು, ಈ ಬಾರಿಯ ಮೆರವಣಿಗೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಇಂದು ಸಂಜೆಯಿಂದ ಮಧ್ಯ ಮಾರಾಟ ನಿಷೇಧ!