
ಶಿವಮೊಗ್ಗ : ಶಿವಮೊಗ್ಗ ನಗರದ ಪ್ರಸಿದ್ದ ಹಿಂದೂ ಮಹಾ ಸಭಾ ಗಣಪತಿಯ ವಿಸರ್ಜನಾ ಪೂರ್ವ ರಾಜ ಬೀದಿ ಉತ್ಸವ ಅಭೂತ ಪೂರ್ವ ಯಶಸ್ಸು ಕಂಡಿದೆ. ಜನರ ನಿರೀಕ್ಷೆ ನಿಜವಾಗಿದೆ. ಅದರಲ್ಲೂ ಶಿವಮೊಗ್ಗ ನಗರದ ಶಾಂತಿ, ಸೌಹಾರ್ದಕ್ಕೆ ಸದಾ ಶ್ರಮಿಸುವ ಮನಸ್ಸುಗಳಿಗೆ ಇದು ನಿಜಕ್ಕೂ ಖುಷಿ ತಂದಿದೆ. ಶಿವಮೊಗ್ಗ ಮಹಾನಗರದಲ್ಲಿ ಶನಿವಾರ ತಡರಾತ್ರಿವರೆಗೂ ನಡೆದ ಹಿಂದೂ ಮಹಾ ಸಭಾ ಗಣಪತಿ ಮೆರವಣಿಗೆಯೂ ಶಾಂತಿ, ಸೌಹಾರ್ದದ ಉತ್ಸವಕ್ಕೆಸಾಕ್ಷಿಯಾಗಿದೆ. ಅದೇ ವೇಳೆ ಮುಂಬರುವ ಹಬ್ಬಕ್ಕೂ ಇದು ಮಾದರಿಯಾಗಿ ನಿಂತಿರುವುದು ತುಂಬಾ ವಿಶೇಷ ಎನಿಸಿದೆ.
ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ದೊಡ್ಡ ಇತಿಹಾಸವೇ ಇದೆ. ಸ್ವಾತಂತ್ರ್ಯ ಪೂರ್ವದಿಂದಲೇ ಶುರುವಾದ ಈ ಉತ್ಸವಕ್ಕೆ ಅನೇಕ ಗಣ್ಯರ ಪರಿಶ್ರಮವಿದೆ. ಅದೇ ಕಾರಣಕ್ಕೆ ಶಿವಮೊಗ್ಗ ಹಿಂದೂ ಮಹಾ ಸಭಾ ಗಣಪತಿಯ ರಾಜಬೀದಿ ಉತ್ಸವ ಎನ್ನುವುದು ರಾಜ್ಯದಲ್ಲಿಯೇ ಒಂದು ಕುತೂಹಲದ ಸಂಗತಿಯಾಗಿರುವುದು ಹೊಸದೇನಲ್ಲ. ಆರಂಭದಲ್ಲಿ ಅದು ಸಂಭ್ರಮದ ಉತ್ಸವವೇ ಆಗಿದ್ದು, ಕೆಲವು ವರ್ಷಗಳಲ್ಲಿ ಮೆರವಣಿಗೆಯ ವೇಳೆ ನಡೆದಿದ್ದ ಗಲಾಟೆ, ಗಲಭೆಗಳ ಕಾರಣದಿಂದ ವಿವಾದಿತ ಗಣಪತಿ ಆಗಿತ್ತು. ಆದರೆ ಅದೆಲ್ಲವೂ ತೆರೆ ಮರೆಗೆ ಸರಿದು, ಇದೊಂದು ಹಿಂದೂಗಳ ದೊಡ್ಡ ಉತ್ಸವ ಎನ್ನುವುದನ್ನು ಇತ್ತೀಚಿನ ವರ್ಷಗಳ ಉತ್ಸವಗಳು ಸಾಬೀತು ಮಾಡಿವೆ. ಅದನ್ನು ಈ ಬಾರಿಯ ಅಭೂತ ಪೂರ್ವ ಯಶಸ್ಸು ಕೂಡ ಸಾಕ್ಷಿಕರಿಸಿತು.

ಕೇಸರಿಯಲ್ಲಿ ಮಿಂದೆದ್ದ ಬೃಹತ್ ಜನ ಸ್ತೋಮ :
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಿಂದೂ ಮಹಾ ಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದ ಭಾರೀ ಪ್ರಮಾಣದ ಜನರು ಬಂದಿದ್ದರು. ದೊಡ್ಡ ಪ್ರಮಾಣದಲ್ಲಿ ಜನಸಾಗರವೇ ಸೇರಿತ್ತು. ರಾಮಣ್ಣ ಶ್ರೇಷ್ಟಿ ಪಾರ್ಕ್ ನಿಂದ ಮೆರವಣಿಗೆ ನೆಹರು ರಸ್ತೆ ಪ್ರವೇಶಿಸುವ ತನಕ ಜನರು ಸಮುದ್ರದಂತೆ ಮೆರವಣಿಗೆಗೆ ಹರಿದು ಬಂದಿದ್ದರು. ಇಷ್ಟಾಗಿಯೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜನರು ಸಹಕಾರ ನೀಡಿದ್ದು, ಭವಿಷ್ಯಕ್ಕೆ ಹೊಸ ಸಂದೇಶ ರವಾನಿಸಿದೆ.
ಇದರ ಹಿಂದೆ ಎಲ್ಲಾ ಹಿಂದೂ ಸಂಘಟನೆಗಳ ಕಾರ್ಯಕರ್ತರ ಪರಿಶ್ರಮವಿದೆ. ಹಾಗೆಯೇ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರೂ ಉತ್ಸವದಲ್ಲಿ ಪಾಲ್ಗೊಂಡಿದ್ದು, ಶಾಂತಿಯುತ ಉತ್ಸವಕ್ಕೆ ವಿಶೇಷ ಮೆರಗು ತಂದುಕೊಟ್ಟಿದೆ.
ವಿಶೇಷವಾಗಿ ಇಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಸಾಹಸವನ್ನು ನೆನೆಯಲೇಬೇಕಿದೆ. ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವವನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆ ವಾರದಿಂದಲೇ ತಯಾರಿ ನಡೆಸಿತ್ತು. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಂಡಿತ್ತು. ಹಾಗೆಯೇ ವಿಶೇಷ ತುಕಡಿಗಳು ಕೂಡ ಬಂದಿದ್ದವು. ಆ ಎಲ್ಲಾ ವಿಭಾಗಗಳ ಪೊಲೀಸ್ ಸಿಬ್ಬಂದಿ ಶಾಂತಿಯುತ ಆಚರಣೆಗೆ ಎಲ್ಲಾ ರೀತಿಯಲ್ಲೂ ಕಟ್ಟೆಚ್ಚರ ವಹಿಸಿದ್ದರ ಪ್ರತಿಫಲವೇ ಎನ್ನುವ ಹಾಗೆ ಗಣಪತಿ ರಾಜ ಬೀದಿ ಉತ್ಸವ ಅಭೂತ ಪೂರ್ವ ಯಶಸ್ಸು ಕಂಡಿದೆ.
ಶಿವಮೊಗ್ಗದ ಹಿಂದೂ ಮಹಾ ಸಭಾ ಗಣಪತಿಯ ಶಾಂತಿಯುತ ಮೆರವಣಿಗೆ ಹೊಸ ಪಾಠವೇ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಾ ಬಂದ ಹಿಂದೂ ಮಹಾ ಸಭಾ ಗಣಪತಿಯ ರಾಜಬೀದಿ ಉತ್ಸವವೂ ಯಾವುದೇ ಪಕ್ಷ ಅಥವಾ ಯಾವುದೇ ಒಂದು ಸಂಘಟನೆ ಎನ್ನುವ ಯಾವುದೇ ಬ್ರಾಂಡ್ ಗೆ ಅಂಟಿಕೊಂಡಿಲ್ಲ. ಅದು ಕಲರ್ ಫುಲ್ ಆದಷ್ಟು ಎಲ್ಲರನ್ನು ಒಳಗೊಳ್ಳುತ್ತಾ ಬಂದಿದೆ. ಎಲ್ಲಾ ರಾಜಕೀಯ ನಾಯಕರು ಕೂಡ ಪಕ್ಷಾತೀತವಾಗಿ ಪಾಲ್ಗೊಂಡು, ದೇವರ ಕೃಪೆಗೆ ಪಾತ್ರರಾದ ಹಾಗೆಯೇ ಎಲ್ಲ ಸಂಘಟನೆಗಳು ಕೂಡ ಇಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ಹಾಗೆಯೇ ಮಹಿಳೆಯರು ಕುಟುಂಬ ಸಮೇತ ಪಾಲ್ಗೊಳ್ಳುವ ಮೂಲಕ ಇಂದೊಂದು ಜನಮನದ ಉತ್ಸವವೇ ಆಗಿರುವುದು ವಿಶೇಷಗಳಲ್ಲಿಯೇ ವಿಶೇಷ.