
ಶಿವಮೊಗ್ಗ : ಪೌರ ಕಾರ್ಮಿಕರ ವಸತಿ ಭಾಗ್ಯ ಯೋಜನೆಗೆ ಹಣದ ಕೊರತೆಯಿಂದ ನಿಂತುಹೋದ ಕಾರ್ಯಕ್ಕೆ ಶಕ್ತಿ ತುಂಬಲು 2.00 ಕೋಟಿ ರೂ.ಗಳನ್ನು ಶಾಸಕರ ಅನುದಾನದಿಂದ ನೀಡುವುದಾಗಿ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಘೋಷಿಸಿದ್ದಾರೆ.
ನಗರದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಮಹಾನಗರ ಪಾಲಿಕೆ ಮತ್ತು ಪೌರಕಾರ್ಮಿಕರ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ-2025 ನ್ನು ಉದ್ಘಾಟಿಸಿ ಮಾತನಾಡಿದ ಅವರು, ಎರಡುವರೆ ವರ್ಷದ ನಂತರ ಸರ್ಕಾರ ಶಾಸಕರಿಗೆ 25 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದೆ. ಅದರಲ್ಲಿ ಪೌರ ಕಾರ್ಮಿಕರ ವಸತಿ ಭಾಗ್ಯಕ್ಕೂ ನೀಡುವ ಚಿಂತನೆ ಮಾಡಿದ್ದೇನೆ. ನೌಕರರ ಸಮಸ್ಯೆ ಅನೇಕ ಇದೆ. ಕಾರ್ಮಿಕರ ಕೊರತೆ ಇದೆ. ಇನ್ನೂ ಹಲವಾರು ಅವರ ಬೇಡಿಕೆಗಳು ನೇರವೇರಿಸಲು ಬಾಕಿ ಇದೆ. ಈ ಬಗ್ಗೆ ಸರ್ಕಾರದೊಂದಿಗೆ ಈಗಾಗಲೇ ನಾನು ಚರ್ಚಿಸಿದ್ದೇನೆ. ಮೇ ಅಂತ್ಯದೊಳಗೆ ವಸತಿಭಾಗ್ಯ, ನೀಡಲು ಪ್ರಯತ್ನಿಸುತ್ತೇವೆ. ಈ ಕಾರ್ಯಕ್ಕೆ ಈಗಾಗಲೇ ವೇಗವನ್ನು ನೀಡಿದ್ದೇವೆ ಎಂದರು.

ಪೌರ ಕಾರ್ಮಿಕರ ದಿನಾಚರಣೆ ಮಾಡುವ ನಿಶ್ಚಯ ಮಾಡಿದಾಗ, ನನಗೆ ಅತ್ಯಂತ ಸಂತೋಷವಾಗಿತ್ತು. ಕಳೆದವರ್ಷದಿಂದ ದಸರಾ ಸಂದರ್ಭದಲ್ಲಿ ಕೂಡ ಒಂದು ದಿನವನ್ನು ಪೌರ ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ.ಅವರಿಗೆ ಎಷ್ಟು ನೀಡಿದರೂ ಅವರ ಋಣ ತೀರಿಸಲಾಗುವುದಿಲ್ಲ. ಈ ದೇಶದ ಅಸ್ಮಿತೆ ಸಂಸ್ಕೃತಿ ಮತ್ತು ಪರಂಪರೆಯಾಗಿದ್ದು, ಇವೆರಡನ್ನೂ ಜೋಡಿಸಿಕೊಂಡು ಹೋದಾಗ ಭಾರತ ಸಾಂಸ್ಕೃತಿಕ ರಾಷ್ಟ್ರವಾಗಿ ಪ್ರಜ್ವಲಿಸುತ್ತದೆ ಎಂದರು.
ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಪೌರ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ದಸರಾ ಸಂದರ್ಭದಲ್ಲಿ ಪೌರ ಕಾರ್ಮಿಕರು ಹಣ ಕೇಳುತ್ತಾರೆ ಎಂದು ಕೆಲವು ನಾಗರೀಕರು ಆರೋಪಿಸುತ್ತಾರೆ. ಆದರೆ ನಾಗರೀಕರಲ್ಲಿ ನನ್ನ ನಮ್ರ ವಿನಂತಿ ಏನೆಂದರೆ ನಿಮಗೆ ಸಾಧ್ಯವಿದ್ದರೆ ಕೈಲಾದಷ್ಟು ಸಹಾಯ ಮಾಡಿ, ಆದರೆ ನಿಮ್ಮ ಮನೆಯನ್ನು ಸ್ವಚ್ಛವಾಗಿರಿಸಲು ಸಹಕಾರ ನೀಡುವ ಅವರಿಗೆ ಅಪಮಾನ ಮಾಡಬೇಡಿ. ಅವರು ಅತ್ಯಂತ ಸ್ವಾಭಿಮಾನದಿಂದ ಬದುಕುವವರು.
| ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು
ಎಲ್ಲರ ಮನಸ್ಸನ್ನು ಬದಲಾವಣೆ ಮಾಡಿ, ಸ್ವಸ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಪ್ರಧಾನಿಯವರು ಕೂಡ ಪೌರ ಕಾರ್ಮಿಕರ ಪಾದ ತೊಳೆದು ನೀರನ್ನು ಸೇವಿಸಿ ಅದರ ಹಿಂದಿರುವ ಕಲ್ಪನೆಯನ್ನು ವಿವರಿಸಿದ್ದರು. ಇಂದು ಸಾಂಕೇತಿಕವಾಗಿ ಇಬ್ಬರು ಪೌರ ಕಾರ್ಮಿಕರಿಗೆ ಪಾದಪೂಜೆ ಮಾಡಲಾಗಿದೆ. ಇದು ಸಾಂಕೇತಿಕವಷ್ಟೇ. ಎಲ್ಲಾ ಪೌರಕಾರ್ಮಿಕರಿಗೂ ಮನಃಪೂರ್ವಕವಾಗಿ ಇದೇ ರೀತಿಯಲ್ಲಿ ನಾನು ಗೌರವಿಸುತ್ತೇನೆ ಎಂದರು.
ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರಾದ ಅಚ್ಚಮ್ಮ ಹಾಗೂ ರೇಣುಕಮ್ಮ ಮತ್ತಿತರರ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ವೇಳೆ ಶಾಸಕ ಎಸ್.ಎನ್.ಚನ್ನಬಸಪ್ಪ ಕಾರ್ಮಿಕರ ಪಾದಕ್ಕೆರಗಿ ಗೌರವ ಸಲ್ಲಿಸಿದಿದ್ದು ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಆಯುಕ್ತರಾದ ಮಾಯಣ್ಣಗೌಡ, ಸಂಘದ ಅಧ್ಯಕ್ಷ ಗೋವಿಂದಪ್ಪ, ಮಾಜಿ ಅಧ್ಯಕ್ಷ ಮಾರಪ್ಪ, ಅಧಿಕಾರಿಗಳಾದ ಭರತ್, ಪುಟ್ಟಣ್ಣಯ್ಯ, ತುಷಾರ್ ಹೊಸೂರ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.