
ಶಿವಮೊಗ್ಗ : ರಾಜ್ಯ ಸರ್ಕಾರ ಮತ್ತಷ್ಟು ಅಭಿವೃದ್ಧಿ ನಿಗಮಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶಿಸಿದೆ. ಶಿವಮೊಗ್ಗದ ಯುವ ಕಾಂಗ್ರೆಸ್ ಮುಖಂಡ ಚೇತನ್ ಕೆ. ಗೌಡ ಅವರನ್ನು ಜವಳಿ ಮೂಲ ಸೌಲಭ್ಯ (ವಿದ್ಯುತ್ ಮಗ್ಗಗಳ) ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿ ಆದೇಶ ಮಾಡಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಬಾಕಿ ಉಳಿದಿದ್ದ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಲು ಕಾಂಗ್ರೆಸ್ ಪಕ್ಷ ಮುಂದಾಗಿ 39 ಮುಖಂಡರು, ಕಾರ್ಯಕರ್ತರನ್ನು ವಿವಿಧ ನಿಗಮ ಮಂಡಳಿಗಳಿಗೆ ನೇಮಕ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಶಿಫಾರಸ್ಸು ಮಾಡಿದ್ದರು.
ಅದರಂತೆ, ಶಿಫಾರಸ್ಸಿನ ಹಿಂದೆಯೇ ಶಿವಮೊಗ್ಗದ ಯುವ ಕಾಂಗ್ರೆಸ್ ಮುಖಂಡ ಚೇತನ್ ಕೆ.ಗೌಡ ಅವರಿಗೆ ಕರ್ನಾಟಕ ರಾಜ್ಯ ಕೈಮಗ್ಗ ಮೂಲಸೌಕರ್ಯ (ವಿದ್ಯುತ್ ಮಗ್ಗ) ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.
ಎನ್ ಎಸ್ ಯು ಐ ಸಂಘಟನೆ ಮೂಲಕ ಚೇತನ್ ಕೆ ಗೌಡರವರು ಹೋರಾಟ ಆರಂಭಿಸಿದ್ದರು. 2005 ರಲ್ಲಿ ನ್ಯಾಷನಲ್ ಪಿಯು ಕಾಲೇಜ್ ನಲ್ಲಿ ವಿದ್ಯಾರ್ಥಿಯಾಗಿದ್ದ ವೇಳೆ, ಅಂದಿನ NSUI ಜಿಲ್ಲಾಧ್ಯಕ್ಷರಾಗಿದ್ದ ಮಧುಸೂದನ್ ಸಂಪರ್ಕಕ್ಕೆ ಬಂದಿದ್ದರು. ಅಲ್ಲಿಂದ ಸತತ ನಾಲ್ಕು ವರ್ಷಗಳ ಕಾಲ, ಶಿವಮೊಗ್ಗ ಜಿಲ್ಲೆಯಲ್ಲಿ NSUI ಸಂಘಟನೆಯನ್ನು ಪ್ರಬಲ ವಿದ್ಯಾರ್ಥಿ ಪರ ಸಂಘಟನೆಯನ್ನಾಗಿ ರೂಪಿಸುವಲ್ಲಿ ಸಕ್ರಿಯವಾಗಿ ದುಡಿದಿದ್ದರು.
ಇವರ ಸೇವೆಗೆ ಪ್ರತಿಫಲವಾಗಿ 2009 ರಲ್ಲಿ NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಆನಂತರ ಎರಡು ವರ್ಷ ನಗರಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ದೆಹಲಿಯಲ್ಲಿ ನಡೆದ NSUI ಪದಾಧಿಕಾರಿಗಳ ತರಬೇತಿ ಶಿಬಿರದಲ್ಲಿ, ಅತ್ಯುತ್ತಮ ಜಿಲ್ಲಾಧ್ಯಕ್ಷ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಸ್ವತಃ ಎಐಸಿಸಿ ವರಿಷ್ಟ ರಾಹುಲ್ ಗಾಂಧಿಯವರು ಚೇತನ್ ರಿಗೆ ಅತ್ಯುತ್ತಮ ಜಿಲ್ಲಾಧ್ಯಕ್ಷ ಗೌರವ ನೀಡಿ, ಚೇತನ್ ರ ಸೇವೆಯನ್ನ ಮೆಚ್ಚಿ ಸ್ಮರಿಸಿದ್ದರು.