
ಶಿವಮೊಗ್ಗ : ಶಿವಮೊಗ್ಗ ನಗರದ ಸವಳಂಗ ರಸ್ತೆಯಲ್ಲಿನ ರೈಲ್ವೆ ಮೇಲ್ಸೇತುವೆ ವಾಹನಗಳ ಸಂಚಾರಕ್ಕೆ ಮುಕ್ತವಾಗಿರುವ ಬೆನ್ನಲೇ ಉಪಾ ನರ್ಸಿಂಗ್ ಹೋಂ ಬಳಿ ಅಕ್ಕಮಹಾದೇವಿ ವೃತ್ತದಲ್ಲಿ ನಾಲ್ಕು ಕಡೆಯ ರಸ್ತೆಗಳಲ್ಲೂ ವಾಹನಗಳ ಸಂಚಾರ ದಟ್ಟವಾಗಿರುವ ಹಿನ್ನೆಲೆ ಭಾರೀ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ.
ಇಲ್ಲಿನ ಉಷಾ ನರ್ಸಿಂಗ್ ಹೋಂ ರೋಡ್, ಸವಳಂಗ ರೋಡ್, ರವೀಂದ್ರ ನಗರ ಮತ್ತು 100 ಅಡಿ ರಸ್ತೆಗಳ ಅಕ್ಕಮಹಾದೇವಿ ವೃತ್ತದಲ್ಲಿ ಭಾರೀ ಪ್ರಮಾಣದ ವಾಹನಗಳ ಸಂಚಾರದಿಂದ ಟ್ರಾಫಿಕ್ ಜಾಮ್ ಸಮಸ್ಯೆ ಇದ್ದು, ಇದು ತೀವ್ರ ಸಮಸ್ಯೆಗೆ ಕಾರಣವಾಗುತ್ತಿದೆ.

ಸವಳಂಗ ರಸ್ತೆಯ ಎರಡು ಕಡೆಗಳಿಂದ ಬರುವ ವಾಹನಗಳ ಜೊತೆಗೆ ಇತ್ತ ರೈಲ್ವೆ ನಿಲ್ದಾಣದಿಂದ ವಿನಾಯಕ ನಗರ ಮಾರ್ಗವಾಗಿ ಬರುವ ವಾಹನಗಳು, ಅತ್ತ ಲಕ್ಷ್ಮೀ ಟಾಕೀಸ್ ಕಡೆಯಿಂದ ಸಂಪರ್ಕ ಪಡೆಯುವ ನೂರಡಿ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ವಾಹನಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅಕ್ಕಮಹಾದೇವಿ ವೃತ್ತ ಭಾರೀ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ.
ಅದರಲ್ಲೂ ರೈಲ್ವೆ ಮೇಲ್ಸೇತುವೆಯಲ್ಲಿನ ವಾಹನಗಳು ದಿಢೀರನೆ ವೃತ್ತಕ್ಕೆ ಬಂದಿಳಿಯುವುದು ಸೇರಿದಂತೆ ಇದರ ಜೊತೆಗೆ ಇದೀಗ ರಾಗಿಗುಡ್ಡ ಫೈ ಓವರ್ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಹರಿಹರದಿಂದ ಬಸ್ ನಿಲ್ದಾಣಕ್ಕೆ ತಲುಪುವ ಬಸ್ ಗಳು ಹಾಗೂ ಭಾರೀ ಗಾತ್ರದ ವಾಹನಗಳು ಉಷಾ ಸರ್ಕಲ್ ನಿಂದಲೇ ಹಾದು ಹೋಗುತ್ತಿರುವುದರಿಂದ ವಾಹನ ಸಂಚಾರದಲ್ಲಿಯೇ ಅಸ್ತವ್ಯಸ್ತ ಉಂಟಾಗುವಂತೆ ಮಾಡಿದೆ.

ನಾಲ್ಕು ರಸ್ತೆಗಳು ಸೇರುವ ಈ ವೃತದಲ್ಲಿ ಸದ್ಯಕ್ಕೆ ತಾತ್ಕಾಲಿಕ ಟ್ರಾಫಿಕ್ ಸಿಗ್ನಲ್ ಇದ್ದರೂ ಸಹ ಬೆಳಗ್ಗೆಯ ಸಮಯದಲ್ಲಿ ಹಾಗೂ ಸಂಜೆಯ ಸಮಯದಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್ ಕಾಣಬಹುದಾಗಿದೆ. ವಾಹನ ಚಾಲಕರಿಗೆ, ಪಾದಚಾರಿಗಳಿಗೆ ಇದು ದೊಡ್ಡ ಸವಾಲನ್ನು ಸೃಷ್ಟಿಸಿದೆ. ಟ್ರಾಫಿಕ್ ಸಿಗ್ನಲ್ಗಳು ಸಾರ್ವಜನಿಕರ ಭದ್ರತೆಗೆ ಅಗತ್ಯವಾದ ಅಂಶವಾಗಿದ್ದು, ವಾಹನಗಳ ವೇಗವನ್ನು ಕಡಿಮೆ ಮಾಡಲು ಪ್ರತಿ ಅರ್ಧ ಮೈಲಿಗೆ ಹಾಕಲಾಗುವ ಟ್ರಾಫಿಕ್ ಸಿಗ್ನಲ್ ಗಳಿಂದ ದಟ್ಟಣೆಯನ್ನು ಬಹಳ ಬಿಗಿಯಾಗಿ ನಿಯಂತ್ರಿಸಲಾಗುತ್ತದೆ.

ಹೆಚ್ಚು ಕಡಿಮೆ ಇಲ್ಲಿಗೆ ಮೂರ್ನಾಲ್ಕು ವರ್ಷಗಳೇ ಆದವು, ಸವಳಂಗ ರಸ್ತೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶುರುವಾದ ನಂತರ ಇಲ್ಲಿ ವಾಹನಗಳ ಓಡಾಟ ತಗ್ಗಿತ್ತು. ಸುತ್ತಿ ಬಳಸಿ ಶಿಕಾರಿಪುರ, ಶಿರಾಳಕೊಪ್ಪ ಕಡೆಗೆ ಹೋಗಬೇಕಾಗಿದ್ದ ಕಾರಣಕ್ಕೆ ಆ ಕಡೆಗೆ ಹೋಗುತ್ತಿದ್ದ ನಗರದ ಬಹುತೇಕ ವಾಹನಗಳು, ವಿನೋಬನಗರ ಮೂಲಕವೋ, ಇಲ್ಲವೇ ಮೇದಾರ್ ಕೇರಿಯ ಮುಖ್ಯ ರಸ್ತೆಯ ಮೂಲಕವೋ ಎಲ್.ಬಿ.ಎಸ್. ನಗರ ಸೇರಿ, ಅಲ್ಲಿಂದ ಸವಳಂಗ ರಸ್ತೆಗೆ ಸೇರುತ್ತಿದ್ದವು. ಆದರೆ ಈಗ ರೈಲ್ವೆ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗಿರುವ ಹಿನ್ನೆಲೆ ಈ ಮಾರ್ಗದಲ್ಲಿ ವಾಹನಗಳ ಓಡಾಟ ಹೆಚ್ಚಾಗಿದೆ. ಅದೇ ಕಾರಣಕ್ಕೆ ಅಕ್ಕಮಹಾದೇವಿ ವೃತ್ತದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ.
