
ಶಿವಮೊಗ್ಗ : ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನದಲ್ಲಿ ಆರ್ಯವೈಶ್ಯ ಸ್ನೇಹಿತರ ಬಳಗದ ವತಿಯಿಂದ ನಾಲ್ಕು ದಿನಗಳವರೆಗೆ ಆಯೋಜಿಸಲಾದ ‘ಶೆಟ್ಟರ ಸಂತೆ’ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಪಟ್ಟಾಭಿರಾಂ ಅವರು ನೆರವೇರಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ವೈ.ವಿಜಯೇಂದ್ರ ಅವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಿದರು.
ಅತ್ಯಂತ ಸಂಭ್ರಮದ ವಾತಾವರಣದಲ್ಲಿ ನೆರವೇರಿದ ಈ ಕಾರ್ಯಕ್ರಮವು ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಒದಗಿಸಿದ್ದು, ಈ ಕಾರ್ಯಕ್ರಮಕ್ಕೆ ಮೊದಲನೇ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಉತ್ತಮ ರೀತಿಯಲ್ಲಿ ಯಶಸ್ವಿ ಚಾಲನೆ ಪಡೆದಿದೆ.
ಇದನ್ನೂ ಓದಿ » ಪೊಲೀಸ್ ಧ್ವಜ ದಿನಾಚರಣೆ: ಸಮಯ ಪ್ರಜ್ಞೆ-ಕರ್ತವ್ಯ ನಿಷ್ಟೆಯಿಂದ ಇಲಾಖೆಗೆ ಹೆಸರು: ನಿವೃತ್ತ ಎಎಸ್ಐ ರಾಜಕುಮಾರ
ಶೆಟ್ಟರ ಸಂತೆಯಲ್ಲಿ ಜನಾಕರ್ಷಿಸುವಂತೆ ಅನೇಕ ವೈವಿಧ್ಯಮಯ ಸ್ಟಾಲ್‌ಗಳನ್ನು ಸ್ಥಾಪಿಸಲಾಗಿದ್ದು, ಗೃಹೋಪಯೋಗಿ ವಸ್ತುಗಳು, ತಿಂಡಿ ತಿನಿಸುಗಳು, ಸೀರೆ ಮಳಿಗೆ, ಡ್ರೆಸ್ ಮೆಟೀರಿಯಲ್ಸ್‌ಗಳು ಸೇರಿದಂತೆ ಅನೇಕ ರೀತಿಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.

ಕಾರ್ಯಕ್ರಮದ ವೇಳೆ ನಡೆದ ಸಾಂಸ್ಕೃತಿಕ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿದ್ದು, ಸ್ಥಳೀಯ ಕಲಾವಿದರ ನೃತ್ಯ, ಸಂಗೀತ ಹಾಗೂ ಸಾಂಪ್ರದಾಯಿಕ ಕಲೆಗಳು ಜನಮನ ಸೆಳೆದವು. ಶಿವಮೊಗ್ಗದ ಸಾಂಸ್ಕೃತಿಕ ಪರಂಪರೆ, ಸಾಮಾಜಿಕ ಒಗ್ಗಟ್ಟು ಹಾಗೂ ಸ್ಥಳೀಯ ಪ್ರತಿಭೆಯ ಹಿರಿಮೆಯನ್ನು ಸಾರಿದ ಮಹತ್ವದ ವೇದಿಕೆಯಾಗಿದೆ.

‘ಶೆಟ್ಟರ ಸಂತೆ’ ಕೇವಲ ವ್ಯಾಪಾರಿಕ ಉದ್ದೇಶದ ಮೇಳ ಮಾತ್ರವಲ್ಲದೇ ಸಾಂಸ್ಕೃತಿಕ ವಿನಿಮಯ ಹಾಗೂ ಸಮುದಾಯದ ಒಗ್ಗಟ್ಟನ್ನು ಸಾರುವ ಮಹತ್ವದ ವೇದಿಕೆಯಾಗಿಯೂ ಬಿಂಬಿಸಿಕೊಂಡಿದೆ.

ಶೆಟ್ಟರ ಸಂತೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಶಾಸಕರು, ರಾಜ್ಯ ಬಿಜೆಪಿ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನಿರ್ದೇಶಕರಾದ ಡಿ.ಎಸ್.ಅರುಣ್ ಅವರು ವಹಿಸಿದ್ದರು.

ಈ ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಡಿ.ಹೆಚ್.ಶಂಕರಮೂರ್ತಿ, ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ, ಆರ್‌ಎಸ್‌ಎಸ್ ಪ್ರಮುಖರಾದ ಜಗದೀಶ್, ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಪ್ರತಿಭಾ ಅರುಣ್, ಶ್ರೀರಾಮ ಸಹಕಾರ ಸಂಘದ ಅಧ್ಯಕ್ಷ ಡಾ. ಭರತ್, ಶ್ರೀನಿಧಿ ಟೆಕ್ಸ್‌ಟೈಲ್ಸ್‌ನ ಅಶ್ವಥ್ ನಾರಾಯಣ ಹಾಗೂ ಶರಣ್ಯ ಸಂಸ್ಥೆಯ ಡಿ.ಎಲ್.ಮಂಜುನಾಥ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ » Job News: ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?