
ಶಿವಮೊಗ್ಗ : ನಗರದ ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಸಾಧನೆಯು ಒಂದು ಮೈಲಿ ಗಲ್ಲಾಗಿದ್ದು, ಈ ಸಂಸ್ಥೆಯು ವೀರಶೈವ ಸಮಾಜದ ಸಮಗ್ರ ಆರ್ಥಿಕ ಕೇಂದ್ರವಾಗುವ ಮೂಲಕ ಕಷ್ಟಕಾಲದಲ್ಲಿ ಕೈಹಿಡಿದು ನಡೆಸಿದ ಸಂಸ್ಥೆಯಾಗಿದೆ. ಸಹಕಾರ ಸಂಘದಲ್ಲಿ ಪಾರದರ್ಶಕತೆ ಇದ್ದಾಗ ಮಾತ್ರ ಶತಮಾನೋತ್ಸವ ಮಾಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಣ್ಣಿಸಿದರು
ಶನಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮದಲ್ಲಿ ಸಂಸ್ಥೆಯ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಜಗಜ್ಯೋತಿ ಬಸವಣ್ಣನವರು ತೋರಿದ ದಾರಿಯಲ್ಲಿಯೇ ನಡೆಯುತ್ತಿರುವ ಈ ಸಹಕಾರ ಸಂಘ ಬಸವತತ್ವದ ಸತ್ಯ, ಶುದ್ಧ, ಪಾರದರ್ಶಕತೆಯನ್ನು ಆಧಾರವಾಗಿಟ್ಟುಕೊಂಡು ನಡೆಯುತ್ತಿದ್ದು, ಈ ಸಂಘದ ಸಾಧನೆ ಇಡೀ ದೇಶಕ್ಕೆ ಆದರ್ಶವಾಗಿದೆ. ಸಮಾಜದ ಎಲ್ಲಾ ವರ್ಗಗಳ ಸಹಾಯ-ಸಹಕಾರದಿಂದ 100 ವರ್ಷ ಹೆಮ್ಮರವಾಗಿ ಬೆಳೆದುನಿಂತಿದೆ. ಬ್ರಿಟೀಷ್ ಕಾಲದಲ್ಲಿಯೇ ನೊಂದಣಿಯಾಗಿ ಈ ಸಂಸ್ಥೆ ಮಲೆನಾಡಿಗರ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಎಂದು ಶ್ಲಾಘಿಸಿದರು.
ವೀರಶೈವ ಸಮಾಜದವರು ಆರ್ಥಿಕ ಸಂಕಷ್ಟದಲ್ಲಿದ್ದಾಗ ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘ ಅವರ ನೆರವಿಗೆ ಬಂದಿದೆ. ಸಮಾಜದವರ ಸಹಕಾರವಿಲ್ಲದೆ ಇಷ್ಟೊಂದು ಬೃಹದಾಕಾರವಾಗಿ ಸಂಘ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಸಂಘವನ್ನು ಆರಂಭಿಸಿದ ಎಲ್ಲಾ ಹಿರಿಯರಿಗೆ ಅಧ್ಯಕ್ಷರಾಗಿ, ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಎಲ್ಲರಿಗೂ ಹೃತೂರ್ವಕ ಧನ್ಯವಾದ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
– ಬಿ.ವೈ.ರಾಘವೇಂದ್ರ, ಸಂಸದರು
ಸಮಾಜದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ರಚನಾತ್ಮಕ ಕಾರ್ಯಗಳು ನಡೆಯಬೇಕು. ಸುಖ ನೆಮ್ಮದಿಯ ಬದುಕಿಗೆ ಆರ್ಥಿಕ ಸಂಪನ್ಮೂಲ ಬಹಳ ಮುಖ್ಯ. ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಬದುಕು ವಿಕಾಸಗೊಳ್ಳುತ್ತದೆ. ಆ ರೀತಿಯಲ್ಲಿ ಹಲವರ ನಿಸ್ವಾರ್ಥ ಶ್ರಮದ ಮೂಲಕ ಶ್ರೀ ಬಸವೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮದಲ್ಲಿರುವುದು ಅತ್ಯಂತ ಸಂತಸದ ಸಂಗತಿ.
– ಡಾ. ವೀರಸೋಮೇಶ್ವರ ಜಗದ್ಗುರು, ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠ

1925ರಲ್ಲಿ 40 ಸದಸ್ಯರೊಂದಿಗೆ ಆರಂಭವಾದ ಈ ಸಹಕಾರ ಸಂಘ ಇಂದು ವೀರಶೈವ ಸಮಾಜದ ಸಮಗ್ರ ಆರ್ಥಿಕ ಕೇಂದ್ರವಾಗಿದೆ. ಅಲ್ಲದೆ ಆರ್ಥಿಕ ಭದ್ರಬುನಾದಿಯಾಗಿ ಬ್ಯಾಂಕುಗಳು ಗ್ರಾಮಗಳಿಗೆ, ವ್ಯಾಪಾರಸ್ಥರಿಗೆ ಬಡ, ಮಧ್ಯಮ ವರ್ಗದವರಿಗೆ ತಲುಪದೇ ಇರುವ ಸಂದರ್ಭದಲ್ಲಿ, ಅವರ ಕಷ್ಟಕಾಲದಲ್ಲಿ ಕೈಹಿಡಿದು ನಡೆಸಿದ ಸಂಸ್ಥೆಯಾಗಿದೆ ಎಂದು ಕೊಂಡಾಡಿದ ಅವರು, ಸಂಘದ ಎಲ್ಲಾ ಹಾಲಿ, ಮಾಜಿ, ಅಧ್ಯಕ್ಷರು, ಪದಾಧಿಕಾರಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಶತಮಾನೋತ್ಸವದ ಸಂಭ್ರಮದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘವು ಈಗ ಶತಮಾನೋತ್ಸವದ ಸಂಭ್ರಮದಲ್ಲಿದ್ದುದು ಇದರ ಶ್ರೇಯಸ್ಸು ಇದನ್ನು ಆರಂಭಿಸಿ, ಮುನ್ನಡೆಸಿಕೊಂಡು ಬಂದ ಸಮಾಜದ ಮುಖಂಡರಿಗೆ ಸಲ್ಲುತ್ತದೆ. ಈ ಸಹಕಾರ ಸಂಘವು ಇನ್ನೂ ನಾಲ ಬಾಳಿ ಹಣಕಾಸಿನ ಅಗತ್ಯವಿದ್ದವರಿಗೆ ನೆರವು ನೀಡಿ, ಆರ್ಥಿಕ ಊರುಗೋಲಾಗಿ ಮುನ್ನಡೆಯಲು ಎಂದು ಆಶಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಬಾಳೆಹೊನ್ನೂರಿನ ಶ್ರೀ 1008 ಜಗದ್ಗುರು ಪ್ರಸನ್ನರೇಣುಕಾ ಡಾ. ವೀರಸೋಮೇಶ್ವರ ರಾಜದೇಶೀ ಕೇಂದ್ರ ಶಿವಾಚಾರ್ಯ ಭಾಗವತ್ಪಾದರು, ಕಾಶೀಪೀಠದ ಶ್ರೀ 1008 ಜಗದ್ಗುರು ವಿದ್ಯಾವಾಚ ಸ್ಪತಿ ಡಾ. ಚಂದ್ರಶೇಖರ ಶಿವಾಚಾರ್ಯ ಭಾಗವತ್ಪಾದರು ವಿವಿಧ ಮಠಾಧೀಶರು, ಶಾಸಕರಾದ ಡಾ. ಧನಂಜಯ ಸರ್ಜಿ, ಪ್ರಮುಖರಾದ ಬಳ್ಳೇಕೆರೆ ಸಂತೋಷ್, ಆಯನೂರು ಮಂಜುನಾಥ್, ಸಿ.ಎಸ್. ಷಡಾಕ್ಷರಿ, ಎಸ್.ಎಸ್.ಜ್ಯೋತಿಪ್ರಕಾಶ್, ಕೆ.ಎಸ್.ತಾರಾನಾಥ್, ಕೆ.ಸಿ.ಪಾಲಾಕ್ಷಪ್ಪ, ಹೆಚ್.ಎಂ.ಶಿವಾನಂದ್, ಹೆಚ್.ವಿ.ಮರುಳೇಶ್, ಎಂ.ರುದ್ರಪ್ಪ, ಅನಿತಾ ರವಿಶಂಕರ್, ಎಸ್.ಪಿ.ದಿನೇಶ್, ಜಿ.ಎನ್.ಸುಧೀರ್, ಎಸ್.ಕೆ.ಮರಿಯಪ್ಪ, ಎಂ.ಆರ್.ಪ್ರಕಾಶ್, ಎಂ.ಜೆ.ಚನ್ನೇಶ್, ಎಸ್. ಸದಾ ಶಿವಮೂರ್ತಿ, ಎಸ್.ಪಿ.ಶಶಿಧರ್, ಎಂ.ರುದ್ರಪ್ಪ ಹೆಚ್.ಸಿ.ಬಸವರಾಜ್ ಮೊದಲಾದವರಿದ್ದರು.