
ಶಿವಮೊಗ್ಗ : ನಗರದ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಶಿವಮೊಗ್ಗ ನಗರವನ್ನು ಸಾಂಸ್ಕೃತಿಕವಾಗಿ ಅತ್ಯಂತ ಸುಂದರ ಉದ್ಯಾನ ನಗರಿಯನ್ನಾಗಿ ರೂಪಿಸುವುದು ನಮ್ಮ ಸಾಂಸ್ಕೃತಿಕ ನಗರಿಯ ಹಿರಿಮೆಯನ್ನು ಹೆಚ್ಚಿಸುವ ಮೊದಲ ಆದ್ಯತೆಯಾಗಿದೆ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಇದನ್ನೂ ಓದಿ » ನೇರ ಸಂದರ್ಶನ: ಬ್ಯಾಂಕ್ ಉದ್ಯೋಗದಲ್ಲಿ ಆಸಕ್ತಿ ಇದ್ದರೆ, ಈ ಸುದ್ದಿ ನಿಮಗಾಗಿ!
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳ ಬದಿಗಳನ್ನು ಕಲಾತ್ಮಕವಾಗಿ ನವೀಕರಿಸುವ ಯೋಜನೆಯ ಭಾಗವಾಗಿ ಈ ಕಲಾ ಚಿತ್ರಣವನ್ನು ಸಿದ್ಧಪಡಿಸಲಾಗಿದೆ. ಇದು ಸಾರ್ವಜನಿಕರ ಗಮನ ಸೆಳೆಯುವ ಜೊತೆಗೆ ನಗರದ ಶಿಸ್ತು ಮತ್ತು ಅಂದವನ್ನು ಹೆಚ್ಚಿಸಲಿದೆ.
– ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು
ಶುಕ್ರವಾರ ಶಿವಮೊಗ್ಗ ನಗರದ ಪ್ರಮುಖ ಸಂಪರ್ಕ ರಸ್ತೆಯಾದ ಬಿ.ಹೆಚ್. ರಸ್ತೆಗೆ ಹೊಂದಿಕೊಂಡಿರುವ ಶ್ರೀ ಸರ್ ಎಂ. ವಿಶ್ವೇಶ್ವರಯ್ಯ ರಸ್ತೆಯಲ್ಲಿ, ಭಾರತ ರತ್ನ ಶ್ರೀ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಯ ಹಿಂಭಾಗದ ಆವರಣದಲ್ಲಿ ಶಾಸಕರ ವಿಶೇಷ ಅನುದಾನದಡಿಯಲ್ಲಿ ನಿರ್ಮಿಸಲಾಗಿರುವ ಸ್ಥಿರ ಕಲಾ ಚಿತ್ರಣದ ಉದ್ಘಾಟನೆಯನ್ನು ಶಾಸಕರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿದರು.
ಕಲಾಕೃತಿಯ ಸುತ್ತಮುತ್ತಲಿನ ಜಾಗದಲ್ಲಿ ನಿರಂತರ ಸ್ವಚ್ಛತೆ ಕಾಪಾಡಲು ಹಾಗೂ ರಾತ್ರಿಯ ಅವಧಿಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗದ ಖ್ಯಾತ ಶಿಲ್ಪಿ ಜೀವನ್, ಪ್ರಮುಖರಾದ ಎಂ.ಬಿ.ಹರಿಕೃಷ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜ್ಞಾನೇಶ್ವರ್, ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ನವಲೆ, ದೀನ್ ದಯಾಳ್ ಸೇರಿದಂತೆ ಸರ್ ಎಂ.ವಿಶ್ವೇಶ್ವರಯ್ಯ ಕೋ ಆಪರೇಟಿವ್ ಸೊಸೈಟಿಯ ಪದಾಧಿಕಾರಿಗಳು, ಚೇಂಬರ್ ಆಫ್ ಕಾಮರ್ಸ್ ನ ಪದಾಧಿಕಾರಿಗಳು, ಶಿವಮೊಗ್ಗ ಇಂಜಿನಿಯರ್ ಅಸೋಸಿಯೇಷನ್ ಪದಾಧಿಕಾರಿಗಳು, ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ » ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಆನ್‌ಲೈನ್ ಅರ್ಜಿ ಆಹ್ವಾನ