
ಶಿವಮೊಗ್ಗ : ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಚಲಾಯಿಸಲು ನೀಡಿದ ವಾಹನದ ಮಾಲೀಕೆಗೆ ಶಿವಮೊಗ್ಗ ನ್ಯಾಯಾಲಯ ರೂ.25,000 ದಂಡ ವಿಧಿಸಿ ಆದೇಶಿಸಿದೆ.
ನಗರದ 100 ಅಡಿ ರಸ್ತೆಯಲ್ಲಿರುವ ನಿರ್ಮಲಾ ಆಸ್ಪತ್ರೆಯ ಚಾನೆಲ್ ಬಳಿ ಪೂರ್ವ ಸಂಚಾರ ಪೊಲೀಸ್ ಠಾಣೆಯ ಎಸ್‌ಐ ಭಾರತಿ ಬಿ.ಎಚ್. ಅವರು ಸಿಬ್ಬಂದಿಯೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ » ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ನ.30 ಕೊನೆಯ ದಿನ
ಈ ವೇಳೆ KA-14 ನೋಂದಣಿ ಸಂಖ್ಯೆಯ ಹೋಂಡಾ ಡಿಯೋ ಸ್ಕೂಟರ್ ಚಲಾಯಿಸಿಕೊಂಡು ಬಂದ ಬಾಲಕನನ್ನು ಪೊಲೀಸರು ತಡೆದು ಪರಿಶೀಲಿಸಿದಾಗ, ಆತ ಅಪ್ರಾಪ್ತ ಎಂಬುದು ತಿಳಿದುಬಂದಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಎಸ್‌ಐ ಭಾರತಿ ಅವರು ಸ್ಕೂಟರ್ ಮಾಲೀಕೆಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಅಪ್ರಾಪ್ತನಿಗೆ ವಾಹನ ಚಲಾಯಿಸಲು ನೀಡಿದ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆಯ ಕಲಂ 199(A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗ ನ್ಯಾಯಾಲಯವು, ಅಪ್ರಾಪ್ತನಿಗೆ ವಾಹನ ನೀಡಿದ ತಪ್ಪಿಗಾಗಿ ಮಾಲೀಕೆಗೆ ರೂ.25,000 ದಂಡ ವಿಧಿಸಿ ಆದೇಶಿಸಿದೆ.
ಪೋಷಕರಿಗೆ ಸಂಚಾರ ಪೊಲೀಸರ ಎಚ್ಚರಿಕೆ :
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ನೀಡುವುದು ಕಾನೂನುಬಾಹಿರ ಮಾತ್ರವಲ್ಲದೆ, ಅವರ ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯಕಾರಿಯಾಗಿದೆ. ಅಪ್ರಾಪ್ತರಿಗೆ ವಾಹನ ನೀಡಿದಲ್ಲಿ ವಾಹನದ ಮಾಲೀಕರೇ ಕಾನೂನು ಕ್ರಮಕ್ಕೆ ಹೊಣೆಗಾರರಾಗಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮಕ್ಕಳ ಸುರಕ್ಷತೆ ಹಾಗೂ ರಸ್ತೆ ಅಪಘಾತಗಳ ನಿಯಂತ್ರಣದ ದೃಷ್ಟಿಯಿಂದ ಪೋಷಕರು ಅಪ್ರಾಪ್ತರಿಗೆ ಯಾವುದೇ ಕಾರಣಕ್ಕೂ ವಾಹನ ಚಲಾಯಿಸಲು ಅವಕಾಶ ನೀಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ » ಆಧಾರ್ ಕೆಲಸಕ್ಕೆ ಇನ್ನು ಅಲೆದಾಟ ಬೇಡ! ಶಿವಮೊಗ್ಗದಲ್ಲಿ ಹೊಸ ಆಧಾರ್ ಸೇವಾ ಕೇಂದ್ರ ಆರಂಭ, ಎಲ್ಲಿದೆ ಗೊತ್ತೇ?