
ಶಿವಮೊಗ್ಗ : ಇಂದು ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್. ರವರು ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿ, ಇಲ್ಲಿಯವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ಈ ಚಲನ್ ಮೂಲಕ ವಿಧಿಸಲಾದ ದಂಡದ ಪಾವತಿಯಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು.
ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ದಿನಾಂಕ 2025 ರ ಆಗಸ್ಟ್ 23 ರಿಂದ ಸೆಪ್ಟೆಂಬರ್ 12 ರವರೆಗೆ ಈ ಚಲನ್ ಮೂಲಕ ಪಾವತಿಗಾಗಿ ಬಾಕಿ ಇರುವ ದಂಡದ ಮೊತ್ತದಲ್ಲಿ ಶೇ.50 ರಷ್ಟು ಕಡಿತಗೊಳಿಸಿ, ಕಡಿಮೆ ಮೊತ್ತದ ದಂಡ ಪಾವತಿ ಮಾಡಿದಲ್ಲಿ ಅಂತಹ ಪ್ರಕರಣವನ್ನು ವಿಲೇ ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಈ ಸವಲತ್ತನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಪರಿಶೀಲಿಸಿದರು.
ಈವರೆಗೂ ಪಾವತಿಸಲಾಗಿರುವ ದಂಡದ ಮೊತ್ತ :
ಈ ಸಮಯದಲ್ಲಿ ಹಾಜರಿದ್ದ ಸಂಚಾರಿ ಪೊಲೀಸ್ ಠಾಣೆಯ ನಿರೀಕ್ಷಕರು ಹಾಗೂ ಉಪನಿರೀಕ್ಷಕರು ನೀಡಿದ ವಿವರದಂತೆ, ಆ.28 ರಿಂದ ಆ.30 ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 2,94,181 ಪ್ರಕರಣಗಳು ದಾಖಲಾಗಿದ್ದು, ಅದರ ದಂಡದ ಒಟ್ಟು ಮೊತ್ತ ರೂ.23,37,67,500 ಆಗಿದ್ದು, ಅವುಗಳ ಪೈಕಿ ಒಟ್ಟು 56,199 ಈ ಚಲನ್ ಪ್ರಕರಣಗಳು ಮುಕ್ತಾಯಗೊಂಡಿದ್ದು, ಒಟ್ಟು ರೂ.4,09,02,500 ಗಳಷ್ಟು ಹಣ ಪಾವತಿ ಮಾಡಲಾಗಿದೆ.
ದಾಖಲಾದ ಪ್ರಕರಣಗಳ ಪೈಕಿ 2,37,982 ಈ ಚಲನ್ ಪ್ರಕರಣಗಳು ವಿಲೇವಾರಿಗೆ ಬಾಕಿ ಇದ್ದು, ಅವುಗಳಿಂದ ಒಟ್ಟು ರೂ.19,28,65,000 ಗಳಷ್ಟು ಹಣ ದಂಡದ ಮೂಲಕ ಪಾವತಿಯಾಗಲು ಬಾಕಿ ಇದೆ ಎಂದು ಅಂಕಿ ಅಂಶದ ಮೂಲಕ ನಿರೀಕ್ಷಕರು ತಿಳಿಸಿದ್ದಾರೆ.

ಇನ್ನೂ ಒಂದೇ ದಿನ ಬಾಕಿ :
ಸೆ.13 ರ ಶನಿವಾರದಂದು ರಾಷ್ಟ್ರೀಯ ಲೋಕ್ ಅದಾಲತ್ ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿದ್ದು, ಅದರ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಈ ಚಲನ್ ಮೂಲಕ ವಿಧಿಸಲಾದ ದಂಡದ ಮೊತ್ತದಲ್ಲಿ ಶೇ.50 ರಷ್ಟು ಕಡಿಮೆ ಮಾಡಿ ದಂಡದ ಮೊತ್ತವನ್ನು ಪಾವತಿ ಮಾಡುವಂತೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿರುವ ಯೋಜನೆಯು ಇನ್ನು ಕೇವಲ ಒಂದೇ ದಿನ ಜಾರಿಯಲ್ಲಿ ಇರುವ ಕಾರಣ ಅತಿ ಹೆಚ್ಚು ಪ್ರಕರಣಗಳಲ್ಲಿ ಕಡಿಮೆ ಮೊತ್ತದ ದಂಡ ಪಾವತಿ ಮಾಡಿ ಸಾರ್ವಜನಿಕರು ಅವಕಾಶದ ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಶಿವಮೊಗ್ಗದಿಂದ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ಸದಸ್ಯ ಕಾರ್ಯದರ್ಶಿಗಳು ಕೋರಿದ್ದಾರೆ.
ಸಾರ್ವಜನಿಕರು ತಮ್ಮ ವಾಹನ ಸಂಖ್ಯೆಯನ್ನು ನಮೂದಿಸುವ ಮೂಲಕ ಸಂಚಾರಿ ಪೊಲೀಸ್ ಠಾಣೆ ಅವರು ಬಿಡುಗಡೆಗೊಳಿಸಿರುವ ಕ್ಯೂಆರ್ ಕೋಡ್ ಮೂಲಕ ಈ ಚಲನ್ ಪ್ರಕರಣಗಳ ವಿವರವನ್ನು ತಿಳಿದುಕೊಳ್ಳಬಹುದು.
ದಂಡ ಪಾವತಿಸುವುದು ಇಲ್ಲಿ?
ಸಾರ್ವಜನಿಕರು ತಮ್ಮ ವಾಹನದ ಮೇಲೆ ಪ್ರಕರಣಗಳು ದಾಖಲಾಗಿದ್ದರೆ ಅವುಗಳಿಗೆ ಸಂಬಂಧಿಸಿದ ದಂಡದ ಮೊತ್ತದಲ್ಲಿ ಶೇ.50 ರಷ್ಟು ಕಡಿಮೆ ಮೊತ್ತದ ಹಣವನ್ನು ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಹಾಗೂ ಪೂರ್ವ ಸಂಚಾರಿ ಪೊಲೀಸ್ ಠಾಣೆ ಮತ್ತು ಭದ್ರಾವತಿ ನಗರದ ಸಂಚಾರಿ ಪೊಲೀಸ್ ಠಾಣೆ ಅಲ್ಲದೆ ರಸ್ತೆಯ ವೃತ್ತದಲ್ಲಿ ಇರುವಂತಹ ಸಂಚಾರಿ ಪೊಲೀಸ್ ಅಧಿಕಾರಿ ಆಗಿರುವಂತಹ ಸಹಾಯಕ ಪೊಲೀಸ್ ನಿರೀಕ್ಷಕರ ಬಳಿ ಇರುವ ಈ.ವಿ.ಎಂ. ಯಂತ್ರಗಳ ಮೂಲಕ ಸಾರ್ವಜನಿಕರು ದಂಡದ ಮೊತ್ತವನ್ನು ಪಾವತಿ ಮಾಡಲು ಅನುಕೂಲ ಮಾಡಲಾಗಿದ್ದು, ಈ ಅವಕಾಶದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.