
ಶಿವಮೊಗ್ಗ : ರಾಷ್ಟ್ರೋತ್ಥಾನ ಬಳಗ ಶಿವಮೊಗ್ಗದ ವತಿಯಿಂದ ದೇಶ ಅನುಭವಿಸಿದ ಕರಾಳ ತುರ್ತುಪರಿಸ್ಥಿತಿಗೆ 50 ವರ್ಷದ ಹಿನ್ನೆಲೆಯಲ್ಲಿ ಮರುಮುದ್ರಿತ ಭುಗಿಲು ಪುಸ್ತಕದ ಲೋಕಾರ್ಪಣೆ ಮತ್ತು ವೈಚಾರಿಕ ಉಪನ್ಯಾಸ ಕಾರ್ಯಕ್ರಮವನ್ನು ಜುಲೈ 15 ರಂದು ಸಂಜೆ 5.30 ಗಂಟೆಗೆ ನಗರದ ಸಾಗರ ರಸ್ತೆಯಲ್ಲಿರುವ ದ್ವಾರಕಾ ಕನ್ವೆನ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷರು ಹಾಗೂ ಮೂಳೆ ಮತ್ತು ಕೀಲು ತಜ್ಞರಾದ ಡಾ.ಸುಧೀಂದ್ರ.ಪಿ.ಆರ್ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯೋತ್ಥಾನ ಬಳಗವು ಪ್ರತಿ ಬಾರಿಯೂ ವೈಚಾರಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಅದೇ ರೀತಿ ಈ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆಯನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಮುಖ್ಯ ವಕ್ತಾರರಾಗಿ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ನಟ, ನಿರ್ದೇಶಕರು ಹಾಗೂ ಚಿಂತಕರಾದ ಪ್ರಕಾಶ್ ಬೆಳವಾಡಿ ಆಗಮಿಸಲಿದ್ದಾರೆ. ರಾಜ್ಯೋತ್ಥಾನ ಪರಿಷತ್ತಿನ ಡಾ.ಸುಧೀಂದ್ರರವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
1975 ರ ಜೂನ್ 25 ರ ಮಧ್ಯರಾತ್ರಿಯಿಂದ 1977 ಮಾರ್ಚ್ 21 ಬೆಳಗಿನವರೆಗೆ ಭಾರತ ಆಂತರಿಕ ತುರ್ತುಪರಿಸ್ಥಿತಿಗೆ ತುತ್ತಾಯಿತು. ಪ್ರಜಾಪ್ರಭುತ್ವ ಸಂವಿಧಾನಗಳನ್ನಲ್ಲ ಬದಿಗೊತ್ತಿದೆ. ಇಂದಿರಾಗಾಂಧಿ, ಇಡೀ ದೇಶವನ್ನು ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡು, ಸರ್ವಾಧಿಕಾರವನ್ನು ಮೆರೆದರು. ಇಂದಿರಾಗಾಂಧಿಯವರ ಈ ಸಂವಿಧಾನ ವಿರೋಧಿ ನಡೆಯನ್ನು ಪ್ರತಿಭಟಿಸಿ, ದೇಶಾದ್ಯಂತ ಆಂದೋಲನ ನಡೆಯಿತು. ಆ ಹೋರಾಟಕ್ಕೆ ಈಗ 50 ವರ್ಷಗಳು, ನಮ್ಮ ದೇಶದ ಯುವಜನತೆಗೆ ಈ ಹೋರಾಟದ ಭೀಕರತೆಯೂ ತಿಳಿದಿರಲಿಕ್ಕಿಲ್ಲ. ಸ್ವತಂತ್ರಗೊಂಡ ನಮ್ಮದೇ ದೇಶದಲ್ಲಿ, ಅಂಬೇಡ್ಕರ್ ರವರ ಸಂವಿಧಾನದ ನೆರಳಲ್ಲಿ ಆನಂದವಾಗಿ ಬದುಕುತ್ತಿರುವ ನಾವೆಲ್ಲರೂ ಮತ್ತೊಮ್ಮೆ ಸ್ವಾತಂತ್ರಕ್ಕಾಗಿ ಹೋರಾಡಬೇಕಾಯಿತು ಎಂದರು.
ಈ ಕರಾಳ ಎಮರ್ಜೆನ್ಸಿ, ಇದು ಜನತೆಗೆ ಗೊತ್ತೇ ಆಗದಂತೆ ಅರ್ಧರಾತ್ರಿಯಲ್ಲಿ ಅವರಿಂದ ಸ್ವಾತಂತ್ರ್ಯ ಕಸಿದ ರೀತಿ. ಪತ್ರಿಕಾ ಸ್ವಾತಂತ್ರ್ಯದ ಮೇಲೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ, ಸಂಘ ಸಂಸ್ಥೆಗಳ ಸ್ವಾಯತ್ತತೆಗಳ ಮೇಲೆ, ಸರ್ಕಾರದ ನೀತಿ ನಿಯಮಗಳನ್ನು ಪ್ರಶ್ನಿಸುವ ಹೋರಾಟಗಾರರ ಮೇಲೆ, ಏಕಾಏಕಿ ಪ್ರಹಾರವನ್ನು ಮಾಡಿದ ಎಮರ್ಜೆನ್ಸಿಯ ವರಸೆ. ಕೇಂದ್ರದ ಆಡಳಿತ ಪಕ್ಷವು ಸಂವಿಧಾನದ 358 ಮತ್ತು 327ನೇ ವಿಧಿಗಳನ್ನು ದುರುಪಯೋಗಪಡಿಸಿಕೊಂಡ ವಿಧಾನವಾಯಿತು ಎಂದರು.
ಜನಸಾಮಾನ್ಯರು, ವಿದ್ಯಾರ್ಥಿಗಳು, ರಾಜಕೀಯ ನಾಯಕರು, ಸಾಮಾಜಿಕ ಹೋರಾಟಗಾರರು ಹಾಗೂ ಸಂತರು ಈ ಭಯಾನಕ ಸ್ವಾತಂತ್ರ್ಯ ಹರಣದ ಸಂದರ್ಭವನ್ನು ಎದುರಿಸಿದ, ಎದುರಿಸಿ ಗೆದ್ದ, ಗೆದ್ದು ಮತ್ತೊಮ್ಮೆ ಪರಿಪೂರ್ಣ ಪ್ರಜಾಪ್ರಭುತ್ವವನ್ನು ರಾಷ್ಟ್ರದಲ್ಲಿ ಸಂಸ್ಥಾಪಿಸಿದ ಕಥಾನಕವು ಒಂದು ರೋಚಕ ಇತಿಹಾಸ. ಆ ವ್ಯಾಪಕ ಹೋರಾಟದ ಸತ್ಯಕಥೆ ಭುಗಿಲು, ಅಖಿಲ ಭಾರತದಲ್ಲಿ ನಡೆದ ಆ ಸ್ವಾತಂತ್ರ್ಯ ಸಂಘರ್ಷದ ಸಂಕ್ಷಿಪ್ತ ಚಿತ್ರದ ಹಿನ್ನೆಲೆಯಲ್ಲಿ ಕರ್ನಾಟಕವು ಅದಕ್ಕೆ ಸಲ್ಲಿಸಿದ ವಿಶಿಷ್ಟ ಕಾಣಿಕೆಯ ವಿಸ್ತಾರವಾದ ವಿವರ ಇದರಲ್ಲಿದೆ. ಈ ಪುಸ್ತಕದ ಮರು ಬಿಡುಗಡೆ ಕಾರ್ಯಕ್ರಮ ಇದಾಗಿದೆ ಎಂದರು.
ಕಾರ್ಯಕ್ರಮಕ್ಕೆ ನಗರದ ಗಣ್ಯರು, ಪ್ರಭುದ್ಧರು, ನಾಗರೀಕರು ವಿಶೇಷವಾಗಿ ಇಂದಿನ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೋತ್ಥಾನ ಬಳಗದ ಪ್ರಮುಖರಾದ ಮಂಜುನಾಥ್, ನವೀನ್, ಎಂ.ಆರ್.ಸುರೇಶ್, ಪರಿಸರ ನಾಗರಾಜ್, ನವೀನ್ ಉಪಸ್ಥಿತರಿದ್ದರು.