
ಶಿವಮೊಗ್ಗ : ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯಡಿ ರೈತರು ಕೇವಲ ಶೇ.2 ರಷ್ಟು ವಿಮಾ ಕಂತು ಪಾವತಿಸಿ ಬೆಳೆ ವಿಮೆ ಯೋಜನೆಗೆ ನೊಂದಾಯಿಸಿಕೊಳ್ಳಬಹುದಾಗಿರುತ್ತದೆ. ಬೆಳೆಗಳು ನೈರ್ಸಗಿಕ ವಿಕೋಪಗಳಿಂದ ಕುಂಠಿತ ಬೆಳವಣಿಗೆ, ಇಳುವರಿ ನಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ರೈತರನ್ನು ಆರ್ಥಿಕ ನಷ್ಟದಿಂದ ಹೊರತರಲು ಈ ಯೋಜನೆ ಉಪಯುಕ್ತವಾಗಿರುತ್ತದೆ. ಹಾಗಾಗಿ ರೈತರು ಕಡ್ಡಾಯವಾಗಿ ಬೆಳೆ ವಿಮೆಗೆ ನೊಂದಾಯಿಸಿಕೊಳ್ಳುವುದು ಅನಿರ್ವಾಯವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಬೆಳೆ ವಿಮೆ ಯೋಜನೆಗೆ ನೊಂದಾಯಿಸಿಕೊಳ್ಳಲು ಮುಸುಕಿನ ಜೋಳ ಬೆಳೆಗೆ ಜುಲೈ 31 ಕೊನೆಯ ದಿನಾಂಕವಾಗಿದ್ದು, ಭತ್ತದ ಬೆಳೆಗೆ ಆಗಸ್ಟ್ 16 ಕೊನೆಯ ದಿನಾಂಕವಾಗಿರುತ್ತದೆ. ಬೆಳೆ ವಿಮೆಯನ್ನು ರೈತರುಗಳು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಕರ್ನಾಟಕ-ಓನ್, ಗ್ರಾಮ-ಓನ್ ಕೇಂದ್ರ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕಟ್ಟಬಹುದಾಗಿರುತ್ತದೆ.
ರೈತರು ತಾವು ಬೆಳದ ಬೆಳೆಯನ್ನು ತಾವೇ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮುಖಾಂತರ ಸಮೀಕ್ಷೆ ಮಾಡಿಕೊಳ್ಳಲು ಸೂಚಿಸಿದೆ. ಬೆಳೆ ಪರಿಹಾರ, ಬೆಳೆ ವಿಮೆ, ಬೆಳೆ ಸಾಲ, ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಕ್ಕೆ ಫಸಲನ್ನು ಬಿಡಲು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಯಲ್ಲಿ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ದತ್ತಾಂಶ ಪರಿಶೀಲನೆ ಮಾಡುವುದು ಕಡ್ಡಾಯವಾಗಿರುವುದು. ರೈತರು ತಮ್ಮ ಬೆಳೆಯನ್ನು ತಾವೇ ಸಮೀಕ್ಷೆ ಮಾಡಿಕೊಳ್ಳುವುದು ಹೆಚ್ಚು ಅನುಕೂಲವಾಗಿರುತ್ತದೆ. ಬೆಳೆ ಸಮೀಕ್ಷೆ ಸಂದರ್ಭದಲ್ಲಿ ತೊಡಕು ಉಂಟಾದಾಗ ತಮ್ಮ ಗ್ರಾಮದ ಖಾಸಗಿ ನಿವಾಸಿಯನ್ನು ಸಂಪರ್ಕಿಸುವುದು. ರೈತರು ಗೂಗಲ್ ಪ್ಲೇಸ್ಟೋರ್ ನಲ್ಲಿ ಮುಂಗಾರು ರೈತರ ಬೆಳೆ ಸಮೀಕ್ಷೆ-2025 (Farmer Crop Survey App-2025) ರಲ್ಲಿ ಡೌನ್ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆ ಮಾಡಿಕೊಳ್ಳುವುದು.
ರೈತರು ಪ್ರಕೃತಿ ವಿಕೋಪಗಳಿಂದ ಆಗುವ ಆರ್ಥಿಕ ನಷ್ಟದಿಂದ ಪಾರಾಗಲು ಬೆಳೆ ವಿಮೆ ಯೋಜನೆ ನೊಂದಾಯಿಸಿಕೊಳ್ಳುವುದು ಹೆಚ್ಚು ಅನುಕೂಲಕರವಾಗಿರುತ್ತದೆ. ಹಾಗೇಯೇ ತಾವು ಬೆಳೆದ ಬೆಳೆಯನ್ನು ಸ್ವತಃ ತಾವೇ ಮುಂಗಾರು ರೈತರ ಬೆಳೆ ಸಮೀಕ್ಷೆ-2025 (Farmer Crop Survey App-2025) ರಲ್ಲಿ ಡೌನ್ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆ ಮಾಡಿಕೊಳ್ಳುವುದು.
| ರಮೇಶ್ ಎಸ್.ಟಿ, ಸಹಾಯಕ ಕೃಷಿ ನಿರ್ದೇಶಕರು
ಶಿವಮೊಗ್ಗ ತಾಲ್ಲೂಕಿನಾದ್ಯಂತ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಪ್ರಸುತ್ತ ಮುಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೆ 113 ಮಿ.ಮೀ ವಾಡಿಕೆ ಮಳೆಗೆ 205 ಮಿ.ಮೀ ಮಳೆಯಾಗಿರುತ್ತದೆ. ವಾಡಿಕೆಗಿಂತ ಶೇ.83 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿರುತ್ತದೆ. ರೈತರು ಈಗಾಗಲೇ ಬಿತ್ತನೆ ಕಾರ್ಯ ಕೈಗೊಂಡಿದ್ದು, 13350 ಹೆಕ್ಟೇರ್ ಬಿತ್ತನೆ ಪ್ರದೇಶಕ್ಕೆ 10000 ಹೆಕ್ಟೇರ್ ಶೇ.75 ರಷ್ಟು ಮುಸುಕಿನ ಜೋಳದ ಬಿತ್ತನೆ ಆಗಿರುತ್ತದೆ. ರೈತರು ವಿವಿದ ತಳಿಗಳ ಭತ್ತದ ಬೀಜಗಳನ್ನು ಖರೀದಿ ಮಾಡುತ್ತಿದ್ದು, ಸಸಿ ಮಡಿ ಮಾಡಲು ತಯಾರಿ ನೆಡಸುತ್ತಿದ್ದಾರೆ.
ಮುಂಗಾರು ಹಂಗಾಮು ಉತ್ತಮವಾಗಿರುತ್ತದೆ ಎಂದು ಹವಮಾನ ವರದಿ ಹೇಳಿದ್ದರೂ ಸಹ ಮಳೆಯು ರೈತರೊಂದಿಗೆ ಜೂಜಾಟವಾಡುತ್ತಿದ್ದು, ಬೆಳವಣಿಗೆ ಹಂತದಲ್ಲಿ ಕೆಲವೊಮ್ಮೆ ಮಳೆ ಕೈಕೊಡುವುದು. ಹಾಗೆಯೇ ಕೊಯ್ಲಿನ ಸಮಯದಲ್ಲಿ ಹೆಚ್ಚು ಮಳೆ ಬರುವುದು ಸಾಮಾನ್ಯವಾಗಿರುತ್ತದೆ. ಇದರಿಂದ ರೈತರಿಗೆ ಇಳುವರಿ ಕಡಿಮೆಯಾಗಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.
ತಾಲ್ಲೂಕಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಪ್ರಸುತ್ತ ರೈತ ಸಂಪರ್ಕ ಕೇಂದ್ರಗಳಲ್ಲಿ 301 ಕ್ವಿಂಟಾಲ್ ಮುಸುಕಿನ ಜೋಳ ಬಿತ್ತನೆ ಬೀಜ 700 ಕ್ವಿಂಟಾಲ್ ಭತ್ತ, 20 ಕ್ವಿಂಟಾಲ್ ರಾಗಿ ಹಾಗೂ ದ್ವಿದಳ ದಾನ್ಯ 20 ಕ್ವಿಂಟಾಲ್ ದಾಸ್ತಾನು ಇದ್ದು, ಯಾವುದೇ ಬಿತ್ತನೆ ಬೀಜದ ಕೊರತೆ ಇರುವುದಿಲ್ಲ. ಹಾಗೆಯೇ ರಸಗೊಬ್ಬರ 1116 ಮೆ.ಟನ್ ಯುರಿಯಾ, 272 ಮೆ.ಟನ್ ಡಿ.ಎ.ಪಿ, 556 ಮೆ.ಟನ್ ಎಂ.ಓ.ಪಿ, 332 ಮೆ.ಟನ್ ಎಸ್.ಎಸ್.ಪಿ ಹಾಗೂ 2292 ಮೆ.ಟನ್ ವಿವಿಧ ಕಾಂಪ್ಲೇಕ್ಸ್ ರಸಗೊಬ್ಬರಗಳು ಲಭ್ಯವಿದ್ದು, ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವುದಿಲ್ಲ. ರೈತರುಗಳು ಡಿ.ಎ.ಪಿ ಗೊಬ್ಬರದ ಮೇಲೆ ಅವಲಂಬಿತರಾಗದೇ ಲಭ್ಯವಿರುವ ವಿವಿಧ ಕಾಂಪ್ಲೇಕ್ಸ್ ರಸಗೊಬ್ಬರಗಳನ್ನು ಹಾಕಿ ಉತ್ತಮ ಇಳುವರಿ ಪಡೆಯಬಹುದಾಗಿರುತ್ತದೆ. ಈ ಕುರಿತು ಎಲ್ಲಾ ರಸಗೊಬ್ಬರ ಮಳಿಗೆಗಳ ಮುಂದೆ ಅಗತ್ಯ ಪ್ರಚಾರವನ್ನು ಕೈಗೊಳ್ಳಲಾಗಿದೆ.