
ಶಿವಮೊಗ್ಗ : ಶಿವಮೊಗ್ಗ ತಾಲ್ಲೂಕಿನಾದ್ಯಂತ ಜುಲೈ ತಿಂಗಳಿನಲ್ಲಿ ಸತತವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರೈತರು ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆ ಮಾಡಲು ಕೃಷಿ ಇಲಾಖೆ ಸಲಹೆ ನೀಡಿದೆ.
ಇದನನ್ನೂ ಓದಿ ⇒ ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ರೈಲುಗಳ ಸೇವೆ ವಿಸ್ತರಣೆ
ಜುಲೈ ಮಾಹೆಯಲ್ಲಿ ಕಸಬಾ ಹೋಬಳಿಯಲ್ಲಿ ವಾಡಿಕೆ ಮಳೆಗೆ 163.4 ಮಿಮಿ ಗೆ 93 ಮಿಮಿ (ಶೇ.43 ರಷ್ಟು ಕಡಿಮೆ ಮಳೆ), ನಿದಿಗೆ-1 ಹೋಬಳಿ ವಾಡಿಕೆ ಮಳೆ 169.4 ಮಿಮಿ ಗೆ 123.5 ಮಿಮಿ (ಶೇ.27 ರಷ್ಟು ಕಡಿಮೆ ಮಳೆ), ನಿದಿಗೆ-2 ಹೋಬಳಿ ವಾಡಿಕೆ ಮಳೆ 235 ಮಿಮಿ ಗೆ 216.7 ಮಿಮಿ (ಶೇ.8 ರಷ್ಟು ಕಡಿಮೆ ಮಳೆ), ಹೊಳಲೂರು-2 ಹೋಬಳಿ ವಾಡಿಕೆ ಮಳೆ 157.6 ಮಿಮಿ ಮಳೆಗೆ 81.6ಮಿಮಿ (ಶೇ.48 ರಷ್ಟು ಕಡಿಮೆ ಮಳೆ), ಹೊಳಲೂರು-1 ಹೋಬಳಿ ವಾಡಿಕೆ ಮಳೆ 139.1 ಮಿಮಿ ಗೆ 72.8 ಮಿಮಿ (ಶೇ.48ರಷ್ಟು ಕಡಿಮೆ ಮಳೆ) ಹಾರನಹಳ್ಳಿ ಹೋಬಳಿ ವಾಡಿಕೆ ಮಳೆ 214 ಮಿಮಿ ಗೆ 77.7 ಮಿಮಿ (ಶೇ.64 ರಷ್ಟು ಕಡಿಮೆ ಮಳೆ) ಕುಂಸಿ ಹೋಬಳಿ ವಾಡಿಕೆ ಮಳೆ 203 ಮಿಮಿ ಗೆ 151.4 ಮಿಮಿ (ಶೇ.25 ರಷ್ಟು ಕಡಿಮೆ ಮಳೆ) ಮತ್ತು ಆಯನೂರು ಹೋಬಳಿ ವಾಡಿಕೆ ಮಳೆ 216 ಮಿಮಿ ಗೆ 135.8 ಮಿಮಿ (ಶೇ.37 ರಷ್ಟು ಕಡಿಮೆ ಮಳೆ) ಬಿದ್ದಿರುತ್ತದೆ.
ಈ ಭಾರಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆ ಆಗಿದ್ದರೂ ಸಹ ಸತತವಾಗಿ ಪ್ರತಿದಿನ ಮಳೆ ಆಗುತ್ತಿರುವುದರಿಂದ ಯೂರಿಯಾ ಮೇಲುಗೊಬ್ಬರ ನೀಡುವುದು, ಎಡೆ ಕುಂಟೆ ಹೊಡೆಯುವುದು, ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ತುಂಬಾ ತೊಂದರೆ ಉಂಟಾಗಿರುತ್ತದೆ.
ಈ ನಿಟ್ಟಿನಲ್ಲಿ ರೈತರು ಶಿಫಾರಸ್ಸಿಗಿಂತ ಅತೀ ಹೆಚ್ಚು ಯೂರಿಯಾ ರಸಗೊಬ್ಬರವನ್ನು ಮಳೆಯಲ್ಲಿಯೇ ಅಥವಾ ಕೊಂಚ ಮಳೆ ಕಡಿಮೆಯಾದಾಗ ಕೊಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಈ ಹಂತದಲ್ಲಿ ಸಾರಜನಕ ಕೊರತೆ ಕಂಡುಬಂದರೂ ಸಹ ಯೂರಿಯಾ ರಸಗೊಬ್ಬರವನ್ನು ಸರಿಯಾಗಿ ಮಣ್ಣಿನಲ್ಲಿ ಸೇರಿಸಲು ಸಾಧ್ಯವಿರದ ಕಾರಣ ಬೆಳೆಗಳು ಶೀತದಿಂದ ಬೇರುಗಳ ಬೆಳವಣಿಗೆ ಕುಂಠಿತವಾಗಿ ಗಿಡಗಳ ಬೆಳವಣಿಗೆಯೂ ಸಹ ಕುಂಠಿತವಾಗಿ ಇಳುವರಿ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ.
ಆದ್ದರಿಂದ ರೈತರು 4 ರಿಂದ 5 ತಾಸು ಮಳೆ ಕಡಿಮೆ ಅದಾಗ ಯೂರಿಯಾ ರಸಗೊಬ್ಬರವನ್ನು ಕೊಡುವ ಬದಲಾಗಿ ನ್ಯಾನೋ ಯೂರಿಯಾ (ಶೇ.20 ಸಾರಜನಕ)-500ಮಿಲಿ ಬಾಟಲಿನಲ್ಲಿ ಲಭ್ಯವಿದ್ದು (ರೂ.225 ದರ) ಅಥವಾ ನ್ಯಾನೋ ಡಿಎಪಿ (ಶೇ.8 ಸಾರಜನಕ ಮತ್ತು ಶೇ.16 ರಂಜಕ)-500 ಮಿಲಿ ಬಾಟಲಿನಲ್ಲಿ ಲಭ್ಯವಿರುವ (ರೂ.600) ದ್ರವ ರೂಪದ ಸಾರಜನಕವನ್ನು ಪ್ರತಿ ಲೀಟರ್ ನೀರಿಗೆ 3 ರಿಂದ 5 ಮಿಲಿ ಬೆರೆಸಿ ಸಿಂಪಡಿಸಲು ಕೋರಿದೆ.
ಈ ದ್ರವ ಗೊಬ್ಬರವನ್ನು 30 ರಿಂದ 35 ದಿನಗಳು ಮೊದಲನೇ ಹಂತ ಮತ್ತು 50 ರಿಂದ 60 ದಿನಗಳಲ್ಲಿ ಸಿಂಪಡಿಸುವುದರಿAದ ಪೋಷಕಾಂಶಗಳ ಸದ್ಬಳಕೆಯಾಗಿ ಉತ್ತಮ ಬೆಳೆ ಬೆಳವಣಿಗೆ ಮತ್ತು ಉತ್ತಮ ಇಳುವರಿ ಸಾಧ್ಯವಾಗುತ್ತದೆ. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಅಧಿಕ ಹರಡುವಿಕೆ ಸಾಮರ್ಥ್ಯ ಹೊಂದಿರುವುದರಿಂದ ಇವುಗಳನ್ನು ಇತರೆ ಕೀಟನಾಶಕ, ಶಿಲೀಂಧ್ರನಾಶಕ ಮತ್ತು ನೀರಿನಲ್ಲಿ ಕರಗುವ ರಸಗೊಬ್ಬರಗಳೊಂದಿಗೆ ಸೇರಿಸಿ ಸಿಂಪರಣೆ ಮಾಡಬಹುದಾಗಿದೆ. ಮೇಲು ಗೊಬ್ಬರವಾಗಿ ಬಳಸುವ ಯೂರಿಯಾ ಚೀಲವನ್ನು ಶೇ.50 ರಷ್ಟು ಕಡಿಮೆ ಮಾಡಬಹುದಾಗಿದೆ ಎಂದು ಶಿವಮೊಗ್ಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ ⇒ ನಂದಿನಿ ಹಾಲು ಮಾರಾಟಗಾರರಿಗೆ ಜಿಎಸ್‌ಟಿಯಿಂದ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ಡಿಸಿಗೆ ಮನವಿ