
ಶಿವಮೊಗ್ಗ : ನಂದಿನಿ ಹಾಲು ಮಾರಾಟಗಾರರಿಗೆ ಜಿಎಸ್‌ಟಿಯಿಂದ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ನಂದಿನಿ ಹಾಲು ಅಧಿಕೃತ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
ಬಹುತೇಕ ಡೀಲರ್‌ದಾರರು ಜಿಎಸ್‌ಟಿ ವ್ಯಾಪ್ತಿಯಲ್ಲಿ ಬರುವುದರಿಂದ ನಂದಿನಿ ಹಾಲಿನ ಡೀಲರ್‌ದಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಜಿಎಸ್‌ಟಿ ವ್ಯಾಪ್ತಿಯಲ್ಲಿ ವಾರ್ಷಿಕ 1 ಕೋಟಿ ರೂ. ವಹಿವಾಟು ನಡೆಸಲು ಅವಕಾಶ ಮಾಡಿಕೊಡಬೇಕು. ನಮಗೆ ಶೇ.3 ರಿಂದ 4 ರಷ್ಟು ಮಾರ್ಜಿನ್ ಇದ್ದು, ವಾರ್ಷಿಕ ಒಂದು ಲಕ್ಷ ರೂ. ನಿಂದ ಎರಡು ಲಕ್ಷ ರೂ. ವರೆಗೆ ಆದಾಯ ಇರುತ್ತದೆ. ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ಆರೋಗ್ಯ ಖರ್ಚು ಎಲ್ಲವನ್ನು ನಿರ್ವಹಣೆ ಮಾಡಬೇಕಿರುತ್ತದೆ. ಜಿಎಸ್‌ಟಿ ಬರುವುದರಿಂದ ವೆಚ್ಚ ಭರಿಸುವುದು ಸೇರಿದಂತೆ ಇನ್ನಿತರ ಸಮಸ್ಯೆಗಳಾಗುತ್ತಿವೆ ಎಂದು ಮನವಿಯಲ್ಲಿ ತಿಳಿಸಿದರು.
ಈಗಾಗಲೇ ನಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದ್ದು, ಆರೋಗ್ಯ ವಿಮೆ, ಸರ್ಕಾರಿ ಸೌಲಭ್ಯಗಳು ಮತ್ತು ಕಾರ್ಮಿಕ ಕಾರ್ಡ್ ಗಳಿಂದಲೂ ವಂಚಿತರಾಗಿದ್ದೇವೆ. ಎಲ್ಲ ಸಮಸ್ಯೆಗಳನ್ನು ಗಮನಿಸಿ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಮನವಿ ವೇಳೆಯಲ್ಲಿ ಸಂಘದ ಅಧ್ಯಕ್ಷ ಯು.ಕೆ.ಪ್ರಕಾಶ್, ಸಹ ಕಾರ್ಯದರ್ಶಿ ಮೋಹನ್, ಖಜಾಂಚಿ ಕೆ.ಕೆ.ಚಂದ್ರಶೇಖರ್, ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ದೇವರಾಜ್.ಎಂ.ಸಿ, ನಾಗರಾಜ್, ಮಲ್ಲಿಕಾರ್ಜುನ್, ಜಲೀಲ್ ಸಾಬ್, ನವೀನ್, ರಾಘವೇಂದ್ರ ಇತರರಿದ್ದರು.