
ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಕುಟುಂಬದ ವಿರುದ್ದ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆ ಘೋಷಣೆಯಾಗಿದ್ದ ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದ ನಮ್ಮ ಕುಟುಂಬದ ವಿರುದ್ಧ ದಾಖಲಾಗಿದ್ದ ಕೇಸ್ ನಲ್ಲಿ ಏನೂ ಇಲ್ಲ ಎಂಬುದು ಸಾಬೀತಾದಂತಾಗಿದ್ದು ತುಂಬಾ ಖುಷಿಯಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರುದ್ದೇಶದಿಂದ ನನ್ನ ಕುಟುಂಬದ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಹೊರಿಸಲಾಗಿತ್ತು. ಈಗ ಇದಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ. ವಕೀಲ ವಿನೋದ್ ಅವರು ನಮ್ಮ ಕುಟುಂಬದ ವಿರುದ್ಧ ಮೊದಲು ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದಾಗಿ ಹೈಕೋರ್ಟ್‌ನಲ್ಲಿ ಕೇಸ್ ಹಾಕಿದ್ದರು. ಕೋರ್ಟ್ ಸದರಿ ಕೇಸ್ ನ್ನು ಕೆಳ ನ್ಯಾಯಾಲಯಕ್ಕೆ ನೀಡಿತ್ತು, ಅಲ್ಲಿ ಕೇಸ್ ವಜಾ ಆಗಿತ್ತು. ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಕೇಸ್‌ನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ದೊಡ್ಡ ತಪ್ಪು ನಡೆದಿದೆ ಎಂದು ಬಿಂಬಿಸಲಾಗಿತ್ತು. ಆದರೆ ಈಗ ಹೈಕೋರ್ಟ್ ಈ ಲೋಕಾಯುಕ್ತ ತನಿಖೆಗೆ ತಡೆಯಾಜ್ಞೆ ನೀಡಿದೆ. ಈ ಪ್ರಕರಣದಲ್ಲಿ ಖ್ಯಾತ ನ್ಯಾಯವಾದಿ ಅಶೋಕ್ ಹಾರಹಳ್ಳಿ ನಮ್ಮ ಪರ ವಾದಿಸಿದ್ದಾಗಿ ತಿಳಿಸಿದರು.
ಈ ಕೇಸ್ ಇದ್ದ ಸಂದರ್ಭದಲ್ಲಿ ಅನಾವಶ್ಯಕವಾಗಿ ನಮ್ಮ ಬಗ್ಗೆ ರಾಜ್ಯಾದ್ಯಂತ ತಪ್ಪು ಅಭಿಪ್ರಾಯ ಮೂಡುವಂತಾಗಿತ್ತು. ಆದರೆ ನನ್ನ ಅಭಿಮಾನಿಗಳು ಹಾಗೂ ಹಿತೈಷಿಗಳು ಇದರ ಬಗ್ಗೆ ಯಾವುದೇ ಆತಂಕ ಪಡುವಂತಿಲ್ಲ ಎಂದು ಹೇಳಿದರು.
ನಮ್ಮ ಕುಟುಂಬದ ವಿರುದ್ಧ ಅನಾವಶ್ಯಕವಾಗಿ ಆರೋಪ ಮಾಡುತ್ತಿರುವ ವಕೀಲ ವಿನೋದ್ ವಿರುದ್ಧ ಹೈಕೋರ್ಟ್‌ಲ್ಲಿ ಈಗಾಗಲೇ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ. ಈ ಪ್ರಕರಣ ಇನ್ನೂ ಬಾಕಿ ಇದೆ ಎಂದರು.
ಇಂದು ತಮ್ಮ ಕುಟುಂಬದ ವಿರುದ್ಧ ಕೇಸ್ ಗೆ ತಡೆ ಸಿಕ್ಕಿರುವುದಕ್ಕೆ ಈಶ್ವರಪ್ಪ ಜಾಮೂನು ತಿಂದು ಸಂಭ್ರಮಿಸಿದರು.
ಇದನ್ನೂ ಓದಿ ⇒ ಪೌರ ಕಾರ್ಮಿಕರ ಸಮಸ್ಯೆ ಬಗೆಹರಿಯಲು ಮುಖ್ಯಮಂತ್ರಿಗಳ ಮಧ್ಯ ಪ್ರವೇಶ ಅಗತ್ಯ: ಚೆನ್ನಿ ಆಗ್ರಹ