
ಶಿವಮೊಗ್ಗ : ತಾಳಗುಪ್ಪ – ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ತುಂಗಾ ನದಿ ಸೇತುವೆ ಮೇಲೆ ಬರುತ್ತಿದ್ದಂತೆ ಬೋಗಿಗಳ ನಡುವೆ ಲಿಂಕ್ ಕಟ್ ಆಗಿ, ಎರಡು ಬೋಗಿಗಳ ಮಧ್ಯೆ ಇದ್ದ ಕಪ್ಲಿಂಗ್ ಲಾಕ್ ತುಂಡಾಗಿ, ಎಂಜಿನ್ ಹಾಗೂ ಬೋಗಿಗಳು ಬೇರ್ಪಟ್ಟ ಘಟನೆ ಬುಧವಾರ ಸಂಜೆ ಶಿವಮೊಗ್ಗದ ತುಂಗಾ ನದಿ ಬಳಿ ನಡೆದಿದೆ.
ಲಿಂಕ್ ತಪ್ಪಿದ್ದ ಬೋಗಿಗಳು ತುಂಗಾ ನದಿ ಸೇತುವೆ ಮೇಲೆ ನಿಂತಿದ್ದು, ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಅದೃಷ್ಟಾವಶಾತ್ ಯಾರಿಗೂ ಯಾವುದೇ ತೊಂದರೆ ಉಂಟಾಗಿಲ್ಲ.
ತಾಳಗುಪ್ಪ – ಮೈಸೂರು ರೈಲು ತುಂಗಾ ನದಿ ಬರುತ್ತಿದ್ದಂತೆ ಬೋಗಿಗಳ ನಡುವೆ ಲಿಂಕ್ ಕಟ್ ಆಗಿದ್ದು, ಹಿಂದಿನ ಐದು ಬೋಗಿಗಳು ಲಿಂಕ್ ತಪ್ಪಿ ಎಂಜಿನ್ ಕೆಲವು ಮೀಟರ್‌ಗಳಷ್ಟು ಮುಂದೆ ಹೋಗಿತ್ತು. ಬೋಗಿ ಬೇರ್ಪಟ್ಟಿದ್ದು ತಿಳಿಯುತ್ತಿದ್ದಂತೆ ರೈಲು ನಿಲ್ಲಿಸಿದ್ದಾರೆ. ಮತ್ತೆ ವಾಪಾಸ್ ಬಂದು ಬೋಗಿಗಳನ್ನು ಜೋಡಿಸಿಕೊಂಡು ರೈಲು ಮುಂದೆ ಹೊರಟಿತು. ಇದರಿಂದ ರೈಲು 45 ನಿಮಿಷಗಳ ಕಾಲ ತಡವಾಗಿ ಚಲಿಸಿತು.
