
ಶಿವಮೊಗ್ಗ : ಬಹುಕೋಟಿ ವೆಚ್ಚದ ಸಿಗಂದೂರು (ಅಂಬರಗೋಡ್ಲು – ಕಳಸವಳ್ಳಿ) ಸೇತುವೆ ಉದ್ಘಾಟನೆಗೆ ಕೌಂಟ್ ಡೌನ್ ಶುರುವಾಗಿದ್ದು, ನಾಳೆ (ಜುಲೈ 14) ರಂದು ಅಧಿಕೃತವಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಂದ ಲೋಕಾರ್ಪಣೆಗೊಳ್ಳಲು ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ಸುಮಾರು 473.00 ಕೋಟಿ ಅನುದಾನದಲ್ಲಿ ರಾಜ್ಯದ ಅತಿ ಉದ್ದದ 2.44 ಕಿ.ಮೀ. ಕೇಬಲ್ ಆಧಾರಿತ ಸೇತುವೆ ಕಾಮಗಾರಿ ಸಾರ್ವಜನಿಕರ ಸೇವೆಗೆ ಕ್ಷಣ ಗಣನೆ ಶುರು ಮಾಡಿದೆ.
ಸಿಗಂದೂರು ಸೇತುವೆ ನಿರ್ಮಾಣ ಸುಮಾರು ಐದು ದಶಕಗಳ ಕನಸಾಗಿದ್ದು, ಶರಾವತಿ ಮುಳುಗಡೆ ಸಂತ್ರಸ್ತರು ಇಲ್ಲಿನ ಭಾಗದ ಜನರ ಅಗತ್ಯಕ್ಕಾಗಿ ಸೇತುವೆ ಅನಿವಾರ್ಯವಾಗಿದ್ದು ನಿರಂತರ ಹೋರಾಟದ ಫಲವಾಗಿ ಸೇತುವೆ ನಾಳೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.

ಸೇತುವೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಸಂಸದ ಬಿ.ವೈ.ರಾಘವೇಂದ್ರ :
ಶಿವಮೊಗ್ಗ : ಮಲೆನಾಡಿನ ದಶಕಗಳ ಕನಸಾಗಿದ್ದ, ಶರಾವತಿ ಹಿನ್ನೀರಿನ ಅಂಬಾರಗೋಡ್ಲು– ಕಳಸವಳ್ಳಿ ನಡುವಿನ ಸೇತುವೆ ನಾಳೆ ಲೋಕಾರ್ಪಣೆಗೊಳ್ಳುತ್ತಿದೆ. ಈ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಬರುವಂತೆ ಭಾನುವಾರ ಆಹ್ವಾನ ನೀಡಿದ್ದಾರೆ. ಯೋಜನೆ ಪೂರ್ಣಗೊಳ್ಳಲು ಶ್ರಮಿಸಿದ ಎಲ್ಲರಿಗೂ ಸಂಸದರು ಅಭಿನಂದನೆ ತಿಳಿಸಿದ್ದಾರೆ.
ಸಿಗಂದೂರು ಸೇತುವೆ ಕಾಮಗಾರಿಯು 2019ರಲ್ಲಿ ಪ್ರಾರಂಭವಾಗಿ ಕೇವಲ ಆರು ವರ್ಷದಲ್ಲಿ ಪೂರ್ಣಗೊಂಡಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಇಚ್ಛಾಶಕ್ತಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಶ್ರಮದಿಂದ ಸೇತುವೆ ಪೂರ್ಣಗೊಂಡಿದೆ. ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗುತ್ತಿದ್ದು, ದ್ವೀಪ ಜನರಿಗೆ ಮುಕ್ತಿ ಸಿಕ್ಕಿದೆ, ಎಲ್ಲರೂ ನಾಳೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಂಸದರ ಮನವಿ ಮಾಡಿದ್ದಾರೆ.
ಇದನ್ನೂ ಓದಿ ⇒ ಜುಲೈ 14 : ಸಿಗಂದೂರು ಸೇತುವೆ ಉದ್ಘಾಟನೆ, ಯಾರೆಲ್ಲ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ