
ಶಿವಮೊಗ್ಗ : ಶಿವಮೊಗ್ಗದ ರಾಗಿಗುಡ್ಡದಲ್ಲಿ ಗಣಪತಿ ವಿಗ್ರಹ ಹಾಗೂ ನಾಗರ ಕಲ್ಲು ವಿಗ್ರಹಕ್ಕೆ ಅನ್ಯಕೋಮಿನವರು ದುಷ್ಕೃತ್ಯ ಎಸಗಿ ಹಾನಿಗೊಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಗರದ ಶಾಂತಿನಗರ ವಾರ್ಡ್ ನ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಗೊಂದಲದ ವಾತವರಣ ಸೃಷ್ಟಿಯಾಗಿದ್ದು, ಬಡಾವಣೆಯ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ವಿಗ್ರಹ ಹಾಗೂ ನಾಗದೇವರ ವಿಗ್ರಹದ ಹಾನಿ ಕುರಿತು ಹಿಂದೂ ದೇವರುಗಳಿಗೆ ಅನ್ಯಕೋಮಿನವರು ದುಷ್ಕೃತ್ಯ ಎಸಗಿ ಅವಮಾನ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಶಿವಮೊಗ್ಗ ಸಬ್ ಡಿವಿಜನ್-2 ಡಿವೈಎಸ್ಪಿ ಸಂಜೀವ್ ಕುಮಾರ್, ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಐ ಸತ್ಯನಾರಾಯಣ, ಜಯನಗರ ಠಾಣೆ ಪಿಐ ಸಿದ್ದೇಗೌಡ ಭೇಟಿ ನೀಡಿ ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ದಾರೆ.
ಹಿಂದೂ ದೇವರಿಗೆ ಅವಮಾನ ಮಾಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ದೂರು ನೀಡಿ, ತಪ್ಪಿತಸ್ಥರನ್ನ ಬಂಧಿಸುತ್ತೇವೆ ಎಂದು ಭರವಸೆ ನೀಡಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ವಿಗ್ರಹ ಇದ್ದ ಸ್ಥಳದಲ್ಲೇ ಇದೆ. ತಪ್ಪಿತಸ್ಥರನ್ನು ಬಂಧಿಸುತ್ತೇವೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ತಿಳಿಗೊಳಿಸಿದ್ದೇವೆ.
| ಮಿಥುನ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ

ಸೌಹಾರ್ಧ ಹಾಳು ಮಾಡುತ್ತಿರುವ ಅನ್ಯ ಕೋಮಿನವರ ವಿರುದ್ಧ ಕ್ರಮಕ್ಕೆ ಚೆನ್ನಿ ಆಗ್ರಹ :
ರಾಗಿಗುಡ್ಡದಲ್ಲಿನ ಬಂಗಾರಪ್ಪ ಬಡಾವಣೆಯಲ್ಲಿ ನಡೆದಿರುವ ಗಣಪತಿ ಹಾಗೂ ನಾಗರ ವಿಗ್ರಹ ದ್ವಂಸ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿದ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು, ರಾಗಿಗುಡ್ಡದಲ್ಲಿ ಸೌಹಾರ್ಧ ಹಾಳು ಮಾಡುತ್ತಿರುವ ಅನ್ಯ ಕೋಮಿನವರ ವಿರುದ್ಧ ಎಫ್ಐಆರ್ ದಾಖಲಿಸಿ ಸೂಕ್ತ ಕ್ರಮ ಜರುಗಿಸುವಂತೆ ರಕ್ಷಣಾ ಇಲಾಖೆಯವರಿಗೆ ಸೂಚಿಸಿದರು.

ದೇವಸ್ಥಾನದ ಎದುರುಗಡೆ ಇರುವ ಜಾಗದಲ್ಲಿ ಅನ್ಯಕೋಮಿನವರು ಅಕ್ರಮವಾಗಿ ಮನೆ ಕಟ್ಟುತ್ತಿದ್ದು, ಪಾಲಿಕೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದ ಅವರು, ಇದೇ ವೇಳೆ ಪಾಲಿಕೆ ಆಯುಕ್ತರಿಗೆ ಕರೆ ಮಾಡಿ ಇಲ್ಲಿ ಅಕ್ರಮವಾಗಿ ಕಟ್ಟುತ್ತಿರುವ ಮನೆಯ ದಾಖಲಾತಿ ಪರಿಶೀಲಿಸಿ, ಅಕ್ರಮವಾಗಿದ್ದರೆ ಅದನ್ನು ತಕ್ಷಣವೇ ತೆರವುಗೊಳಿಸಬೇಕಾಗಿ ಕರೆ ಮೂಲಕ ತಿಳಿಸಿದ ಅವರು, ಬಂಗಾರಪ್ಪ ಬಡಾವಣೆಯಲ್ಲಿ ವಾಸಿಸುತ್ತಿರುವ ಹಿಂದೂ ಜನಗಳಿಗೆ ಸೂಕ್ತ ಭದ್ರತೆಯನ್ನು ಕೊಡಬೇಕು.
| ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ದೀನದಯಾಳು, ಮಂಜುನಾಥ್ ಕೆ ನವಲೆ, ಹಾಗೂ ಮಾಧ್ಯಮ ಸಂಚಾಲಕ ಶ್ರೀನಾಗ, ಸ್ಥಳೀಯ ಪ್ರಮುಖರು, ಬಂಗಾರಪ್ಪ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.