
ಶಿವಮೊಗ್ಗ : ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪರವರು ಇಂದು (ಜುಲೈ 21) ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.
ಹೊರರೋಗಿಗಳ ವಿಭಾಗ, ಮೂಳೆ ಮತ್ತು ಕೀಲು ವಿಭಾಗ, ಹೊರ ವಿಭಾಗ, ಡಯಾಲಿಸಿಸ್ ವಿಭಾಗ, ಚರ್ಮ ರೋಗ ವಿಭಾಗ ಹಾಗೂ ಜನರಲ್ ಮೆಡಿಸಿನ್ ವಾರ್ಡ್ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ರೋಗಿಗಳೊಂದಿಗೆ ಸಾರ್ವಜನಿಕರು ಹಾಗೂ ಆಸ್ಪತ್ರೆ, ನಾನ್ ಕ್ಲಿನಿಕಲ್ ಸಿಬ್ಬಂದಿಗಳೊಂದಿಗೆ ಮಾತನಾಡಿ ಕುಂದು ಕೊರತೆ ಆಲಿಸಿದರು.

ಹೊರ ಜಿಲ್ಲೆಗಳ ರೋಗಿಗಳ ಮಾಹಿತಿ ಹಾಗೂ ಎಂಆರ್ ಐ ಸ್ಕ್ಯಾನ್ ಸೇರಿದಂತೆ ವಿವಿಧ ವಿಭಾಗಗಳ ಮಾಹಿತಿ ನೀಡಲು ಸೂಚನೆ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಿಮ್ಸ್ ನಿರ್ದೇಶಕ ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಿದ್ದನಗೌಡ ಪಾಟೀಲ್, ಮುಖಂಡರು, ವೈದ್ಯರು, ಸಾರ್ವಜನಿಕರು ಹಾಜರಿದ್ದರು.

ಮೆಗ್ಗಾನ್ ಆಸ್ಪತ್ರೆ ವೀಕ್ಷಣೆ ನಂತರದ ಸಭೆ :
ವೀಕ್ಷಣೆ ನಂತರ ಉಸ್ತುವಾರಿ ಸಚಿವರು ಆಸ್ಪತ್ರೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಹೊಸ ಓಪಿಡಿ ಕೌಂಟರ್ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ದಪಡಿಸಲು, 5 ಡಯಾಲಿಸಿಸ್ ಮಷೀನ್ ಗಳು, ಡಾರ್ಮೆಟರಿ ನಿರ್ಮಾಣಕ್ಕೆ ಪ್ರಸ್ತಾವನೆ ನೀಡಲು ಸೂಚನೆ ನೀಡಿದರು.
ತಾಯಿ ಮರಣ ಪ್ರಮಾಣ ಕಡಿಮೆ ಮಾಡಲು ಎಲ್ಲ ರೀತಿಯಲ್ಲಿ ಪರಿಣಾಮಕಾರಿ ಕ್ರಮ ವಹಿಸಲು ಸೂಚಿಸಿದ ಅವರು, ಹೊರ ಜಿಲ್ಲೆಗಳಿಂದ ಬರುವ ಗರ್ಭಿಣಿಯರು ಇಲ್ಲಿ ಪ್ರಸವ ಆಗುವ ಕುರಿತಾದ ಮಾಹಿತಿ ನೀಡಲು ತಿಳಿಸಿದರು.
ಆಸ್ಪತ್ರೆಗೆ ಅಗತ್ಯವಿರುವ ಹೆಚ್ಚುವರಿ ವೆಂಟಿಲೇಟರ್ ಗಳ ಮಾಹಿತಿ ನೀಡುವಂತೆ ಹಾಗೂ ಎನ್ ಐ ಸಿಯು ಎಂಸಿಹೆಚ್ (ತಾಯಿ ಮತ್ತು ಮಕ್ಕಳ ವಿಭಾಗ) ಬ್ಲಾಕ್, ವಿವರ, ಓಬಿಜಿ, ಪಿಡಿಯಾಟ್ರಿಕ್ ಸೇರಿದಂತೆ ವಿವಿಧ ವಿಭಾಗಗಳ ನೀರು ಲೀಕೇಜ್ ಸಮಸ್ಯೆ ಸೇರಿದಂತೆ ಆಸ್ಪತ್ರೆಯ ಒಟ್ಟಾರೆ ಸಮಸ್ಯೆಗಳು ಹಾಗೂ ಅಗತ್ಯವಿರುವ ಸೌಲಭ್ಯಗಳ ಕುರಿತು
ಪ್ರಸ್ತಾವನೆ ಸಿದ್ದಪಡಿಸಲು ಸೂಚಿಸಿದ ಅವರು, ಈ ಕುರಿತು 25.07.2025 ರಂದು ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಸಭೆ ನಡೆಸಿ ಮಾತನಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ ⇒ ಫೋನ್ ಪೇ, ಗೂಗಲ್ ಪೇ ಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್, ವ್ಯಾಪಾರಿಗಳಿಗೆ ಆತಂಕ