
ಶಿವಮೊಗ್ಗ : ಕಾಡಾನೆ ಉಪಟಳದಿಂದ ಹಾನಿಗೊಳಗಾದ ಭತ್ತದ ಸಸಿ, ಅಡಿಕೆ ಸಸಿ, ಬಾಳೆ, ಕಬ್ಬು ಹಾಗೂ ಮೆಕ್ಕೆಜೋಳವನ್ನು ತಂದು ಶಿವಮೊಗ್ಗ ವನ್ಯಜೀವಿ ವಲಯದ ಉಪಸಂರಕ್ಷಣಾಧಿಕಾರಿ ಕಛೇರಿ ಎದುರು ಸುರಿದು ಪುರದಾಳು ಗ್ರಾಮದ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಪುರದಾಳು ಗ್ರಾಮದಲ್ಲಿ ಕಳೆದ ಹಲವು ತಿಂಗಳಿನಿಂದ ಕಾಡಾನೆಗಳ ಹಿಂಡು ರೈತರ ಹೊಲ, ಗದ್ದೆಗಳ ಮೇಲೆ ದಾಳಿ ನಡೆಸಿ ನಾಟಿ ಮಾಡಿದ್ದ ಭತ್ತದ ಗದ್ದೆ, ಅಡಿಕೆ ಸಸಿ, ಸಲಿಗೆ ಬಂದಿದ್ದ ಬಾಳೆ ಹಾಗೂ ಮೆಕ್ಕೆಜೋಳವನ್ನು ನಾಶ ಮಾಡುತ್ತಿವೆ. ಕಳೆದ ಕೆಲವು ದಿನಗಳಿಂದ ಊರಿನ ಒಳಗೂ ಕಾಡಾನೆಗಳು ಪ್ರವೇಶ ಮಾಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಽಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪುರದಾಳು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.ರೈತರು ಬೆಳೆದ ಬೆಳೆಯನ್ನು ಕಾಡಾನೆಗಳ ಹಿಂಡು ನಾಶ ಮಾಡುತ್ತಿವೆ. ಅರಣ್ಯ ಇಲಾಖೆಯವರು ತತಕ್ಷಣವಾಗಿ ರೈತರ ಸಾಗುವಳಿ ಭೂಮಿಗೆ ತೊಂದರೆಯಾಗದ ರೀತಿಯಲ್ಲಿ ಇಪಿಟಿ ಟ್ರಂಚ್ ತೆಗೆಯಬೇಕು. ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು.
– ಶಾರದಾ ಪೂರ್‍ಯನಾಯ್ಕ್, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಶಾಸಕರು
_________________________
ಪುರದಾಳು ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಏಳೆಂಟು ಕಾಡಾನೆಗಳಿವೆ.ಆನೆಗಳು ರೈತರ ಹೊಲದತ್ತ ಬರದಂತೆ ತಕ್ಷಣದ ಕ್ರಮವಾಗಿ ಇಪಿಟಿ ಟ್ರಂಚ್ ತೆಗೆಯಲಾಗುವುದು. ಸೋಲಾರ್ ತಂತಿ ಬೇಲಿ ಅಳವಡಿಕೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಅನುಮೋದನೆ ಪಡೆದುಕೊಂಡ ನಂತರ ಸೋಲಾರ್ ತಂತಿ ಬೇಲಿ ಅಳವಡಿಕೆ ಮಾಡಲಾಗುವುದು.
– ಪ್ರಸನ್ನಕುಮಾರ್ ಪಟಗಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವಿಭಾಗ, ಶಿವಮೊಗ್ಗ

ಪುರದಾಳು ಗ್ರಾಮದ ಮೇಲಿನ ಪುರದಾಳ, ಬೇಳೂರು, ಕೌಲಾಪುರ ಸೇರಿದಂತೆ ಹಲವು ಕಡೆ ಕಾಡಾನೆಗಳು ದಿನನಿತ್ಯ ರೈತರ ಹೊಲಗಳಿಗೆ ದಾಳಿ ನಡೆಸುತ್ತಿವೆ. ಫಸಲಿಗೆ ಬಂದ ಬೆಳೆಯನ್ನು ಕಾಡಾನೆಗಳು ಹಾನಿ ಮಾಡುತ್ತಿರುವುದರಿಂದ ರೈತರು ಲಕ್ಷಾಂತರ ರೂಪಾಯಿ ಬೆಳೆ ನಷ್ಟ ಅನುಭವಿಸುಂತಾಗಿದೆ. ಅಲ್ಲದೇ ಕಳೆದ ಕೆಲವು ತಿಂಗಳಿನಿಂದಿಚೇಗೆ ಆಲದೇವರ ಹಸೂರಿನಲ್ಲಿ ಕೂಲಿಕಾರ್ಮಿಕ ಹನುಮಂತ ಎಂಬುವವರು ಆನೆ ದಾಳಿಗೆ ಒಳಗಾಗಿ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಕಾಡಾನೆಗಳು ಗ್ರಾಮದೊಳಗೆ ನುಗ್ಗುತ್ತಿವೆ. ಇದರಿಂದ ಜನರು ಜೀವವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯವರ ಗಮನದಲ್ಲಿದ್ದರೂ ಕ್ರಮ ಕೈಗೊಳ್ಳದೇ ಮೀನಾಮೇಷ ಏಣಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರಹಾಕಿದರು.
ಪುರದಾಳು ಗ್ರಾಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರು ಹೆಚ್ಚು ವಾಸಿಸುತ್ತಿದ್ದು, ರೈತರು ಪುನರ್ವಸತಿ ಕಲ್ಪಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಅಲ್ಪಸ್ವಲ್ಪ ಪ್ರಮಾಣದಲ್ಲಿ ಜಮೀನು ಸಾಗುವಳಿ ಮಾಡಿಕೊಂಡು ತೆಂಗು, ಅಡಿಕೆ, ಭತ್ತ, ಬಾಳೆ, ಜೋಳ, ಕಬ್ಬು ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ, ಕಳೆದ ಮೂರು ನಾಲ್ಕು ವರ್ಷಗಳಿಂದ ಕಾಡಾನೆಗಳು ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ.ಆನೆಗಳು ಗ್ರಾಮದೊಳಗೆ ಮತ್ತು ಜಮೀನುಗಳಿಗೆ ನುಗ್ಗದಂತೆ ತಡೆಯಲು ಅರಣ್ಯ ಇಲಾಖೆಯವರಿಗೆ ಹಲವು ಬಾರಿ ಮನವಿ ಮಾಡಿದ್ದರು ಸಹ ಅರಣ್ಯ ಇಲಾಖೆಯವರು ನಾಮಕಾವಸ್ತೇ ಕಾರ್ಯಗಳನ್ನು ಮಾಡುತ್ತಿದ್ದಾರೆ.ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪುರದಾಳು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಪ್ರದೀಪ್ ಎಸ್ ಹೆಬ್ಬೂರು ಆಕ್ರೋಶ ವ್ಯಕ್ತಪಡಿಸಿದರು.
ಎಸಿಎ- ಮಾತಿಗೆ ಗರಂ ಆದ ರೈತರು :
ಮುಳುಗಡೆ ರೈತರು ಕಾಡನ್ನು ಒತ್ತುವರಿ ಮಾಡಿಕೊಂಡಿರುವುದಕ್ಕೆ ಆನೆಗಳು ರೈತರ ಹೊಲಗಳಿಗೆ ಬರುತ್ತಿವೆ ಎಂದು ಸಹಾಯಕ ಉಪ ಅರಣ್ಯ ಸಂರಕ್ಷಣಾಽಕಾರಿಯವರ ಮಾತಿಗೆ ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಈ ರೀತಿ ಮಾತನಾಡುವುದು ಸಮಂಜಸವಲ್ಲ, ಸರ್ಕಾರವೇ ಮುಳುಗಡೆ ಮಾಡಿ ನಮ್ಮನ್ನು ಕಾಡಿಗೆ ಬಿಟ್ಟಿದೆ. ಇಲ್ಲಿಯವರೆಗೂ ಪುರ್ನವಸತಿ ಕಲ್ಪಿಸಿಲ್ಲ,ಮುಳುಗಡೆ ರೈತರು ಒತ್ತುವರಿದಾರರಲ್ಲ, ಈ ರೀತಿಯ ಉಡಾ- ಹೇಳಿಕೆ ನೀಡಬಾರದು ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಉಪ ಸಂರಕ್ಷಣಾಧಿಕಾರಿಗಳ ಮೂಲಕ ಅರಣ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪುರದಾಳು ಗ್ರಾ.ಪಂ ಉಪಾಧ್ಯಕ್ಷರಾದ ಕುಸುಮಾ ಜಗದೀಶ್, ಸದಸ್ಯರಾದ ಮಾನಸ ಹೆಬ್ಬೂರು, ಗ್ರಾಮಸ್ಥರಾದ ಪ್ರಭಾಕರ್ ಸಂಪೋಡಿ, ಆಶೋಕ್, ಗೋಪಾಲ್, ಮುಕುಂದಪ್ಪ ಕಿಡದುಂಬೆ, ಮುಕುಂದ.ಎಂ.ಜಿ, ಕೃಷ್ಣಮೂರ್ತಿ ಹಿಳ್ಳೋಡಿ, ನಾಗರಾಜ್, ಸುರೇಶ್ ಜಿ, ವಸಂತ ಹಿಳ್ಳೋಡಿ, ಬಸವರಾಜ್, ರವಿ ಸಂಪೋಡಿ, ಕೋದಂಡ, ಶಿವಪ್ಪ ಸೇರಿದಂತೆ ನೂರಾರು ರೈತರು ಇದ್ದರು.
ಇದನ್ನೂ ಓದಿ 》》ದಸರಾ ಹಬ್ಬದ ಪ್ರಯುಕ್ತ, ಮಾರುಕಟ್ಟೆಯಲ್ಲಿ ಭರ್ಜರಿ ಖರೀದಿ, ನಗರದಲ್ಲಿ ಹೇಗಿದೆ ವಾತಾವರಣ?
