
ಶಿವಮೊಗ್ಗ : ಶಿವಮೊಗ್ಗ ನಗರದ ಸೌಂದರ್ಯಕ್ಕೆ, ವಾತಾವರಣಕ್ಕೆ ಮರ ಗಿಡಗಳು ತೀರಾ ಅಗತ್ಯ. ಕಾಡಿದ್ದರೆ ಮಳೆ, ಮರವಿದ್ದರೆ ತಂಪು, ಜೊತೆಗೆ ಒಳ್ಳೆಯ ವಾತಾವರಣ ಕೂಡಾ. ಮರಗಳನ್ನು ಹಾಳು ಮಾಡುವುದನ್ನು ಯಾರು ಸಹ ಸಹಿಸುವುದಿಲ್ಲ. ಆದರೆ ಒಣಗಿದ ಮರಗಳು ಅಪಾಯಕಾರಿ. ಮಳೆ-ಗಾಳಿ ಶುರುವಾದರೆ ಎಲ್ಲಿ ಹೇಗೆ ಅವು ಬೀಳುತ್ತವೆ ಎನ್ನುವುದೇ ಗೊತ್ತಾಗುವುದಿಲ್ಲ. ಹಾಗಾಗಿ ಅಂತಹ ಒಣಗಿದ ಮರಗಳನ್ನು ಕಾಲ ಕಾಲಕ್ಕೆ ಗುರುತಿಸಿ, ಅವುಗಳನ್ನು ತೆರವು ಮಾಡುವ ಕೆಲಸ ಆಗಬೇಕು.
ಮಳೆಗಾಲ ಶುರುವಾದರೆ ಶಿವಮೊಗ್ಗ ನಗರದ ಜನರಿಗೆ ಒಂದೆಡೆ ತುಂಗಾ ನದಿಯ ಪ್ರವಾಹ ಭೀತಿ ಇನ್ನೊಂದೆಡೆ ನಗರದ ರಸ್ತೆಗಳಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಮರಗಳು ಯಾವುದೇ ಕ್ಷಣ ಬೀಳುವ ಆತಂಕ ಶುರುವಾಗುತ್ತದೆ. ಸದ್ಯಕ್ಕೆ ಶಿವಮೊಗ್ಗ ನಗರದ ನಾಗರೀಕರಿಗೆ ಇವೆರೆಡು ಭೀತಿಗಳು ಈಗ ಎದುರಾಗಿವೆ.

ನಗರದ ಸಹ್ಯಾದ್ರಿ ಕಾಲೇಜ್ ಬಳಿಯ ರಸ್ತೆಯಲ್ಲಿ ಬೃಹದಾಕಾರದ ಮರದ ಕೊಂಬೆ ರಸ್ತೆಗೆ ಹರಡಿಕೊಂಡಿರುವುದು
ಬಾಲರಾಜ್ ಅರಸು ರಸ್ತೆ, ಗಾಂಧಿ ಪಾರ್ಕ್ ಸುತ್ತ ಮುತ್ತ, ಡಿಸಿ ಕಚೇರಿ ಎದುರು, ನೆಹರು ರಸ್ತೆ, ಸವಳಂಗ ರಸ್ತೆ, ಕುವೆಂಪು ರಸ್ತೆ, ಗಾಂಧಿ ನಗರ, ಸಾಗರ ರಸ್ತೆ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಬೇಸಿಗೆ ಬಿಸಿಲಿನ ರಕ್ಷಣೆಗೆ ತಂಪು ಇರಲಿ ಎಂದು, ಜತೆಗೆ ನಗರದ ಸೌಂದರ್ಯ ಕಾಪಾಡುವುದಕ್ಕೆ ಅಲ್ಲಲ್ಲಿ ಸಾಕಷ್ಟು ಗಿಡ ಮರಗಳನ್ನು ಬೆಳೆಸಿರುವುದು ನಿಮಗೆಲ್ಲ ತಿಳಿದಿದೆ. ಆದರೆ ಇಂತಹ ಅನೇಕ ಮರಗಳು ಈಗ ತುಂಬಾ ವರ್ಷಗಳಾಗಿ ಅವುಗಳ ಬೇರು ದುರ್ಬಲವಾಗಿ ಬೀಳುವ ಹಂತಕ್ಕೆ ತಲುಪಿವೆ. ಬಹುತೇಕ ಕಡೆಗಳಲ್ಲಿ ಸಾಕಷ್ಟು ಮರಗಳು ಒಣಗಿ ನಿಂತಿವೆ. ಈ ಮರಗಳು ಈಗ ಮಳೆ ಗಾಳಿಗೆ ಯಾವುದೇ ಕ್ಷಣ ರಸ್ತೆಗಳಿಗೆ ಬಿದ್ದು ಹೋಗಬಹುದು ಎಂದು ನಗರ ನಾಗರೀಕರಿಗೆ ಹೊಸ ಟೆನ್ಷನ್ ಸೃಷ್ಟಿ ಮಾಡಿವೆ.
ಮೆಸ್ಕಾಂ ಹಾಗೂ ಅರಣ್ಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಅಪಾಯಕಾರಿ ಮರಗಳನ್ನು ಪರಿಶೀಲಿಸಲಾಗುವುದು. ಇದುವರೆಗೂ ನಮ್ಮ ಗಮನಕ್ಕೆ ಯಾವುದೇ ರೀತಿಯ ದೂರುಗಳು ಬಂದಿಲ್ಲ. ಬೀಳುವ ಸ್ಥಿತಿಯಲ್ಲಿರುವ ಮರಗಳ ಸ್ಥಳಗಳನ್ನು ಸಾರ್ವಜನಿಕರು ತಿಳಿಸಿದರೆ ಅಂತಹ ಮರಗಳ ರೆಂಬೆಗಳನ್ನು ಕತ್ತರಿಸುವ ಬಗ್ಗೆ ಯೋಚಿಸಲಾಗುವುದು.
– ಕೆ.ಮಾಯಣ್ಣ ಗೌಡ, ಮಹಾನಗರ ಪಾಲಿಕೆ ಆಯುಕ್ತರು

ನಗರದ ಕುವೆಂಪು ರಸ್ತೆಯಲ್ಲಿ ಬೃಹತ್ ಮರದ ಕೊಂಬೆಗಳು
ಸದ್ಯಕ್ಕೀಗ ನಗರದಲ್ಲಿ ಮಳೆಗೆ ಜನರು ರಸ್ತೆಗಿಳಿಯಲು, ಮನೆಯಿಂದ ಹೊರಗೆ ಬರಲು ಹೆದರುವಂತಹ ಪರಿಸ್ಥಿತಿ ಉಂಟಾಗಿದೆ. ನಿಖರವಾಗಿ ಹೇಳಲು ಆಗದ. ಯಾವ ಕ್ಷಣದಲ್ಲಾದರೂ ಸುರಿಯುವ ಮಳೆಯ ರಭಸ, ಗಾಳಿಯ ವೇಗ ಇರುವುದರಿಂದ ಜನರು ಹೆಚ್ಚು ಎಚ್ಚರ ವಹಿಸುವುದು ಅನಿವಾರ್ಯವಾಗಿದೆ. ಏಕೆಂದರೆ ನಗರದಲ್ಲಿ ಈಗ ಅನೇಕ ಕಡೆಗಳಲ್ಲಿ ಸಾಕಷ್ಟು ಹಳೆಯ ಬೃಹತ್ ಮರಗಳಿದ್ದು, ಅವು ಗಾಳಿ ಮಳೆಗೆ ಯಾವ ಕ್ಷಣದಲ್ಲಾದರೂ ಧರೆಗುರುಳುವ ಸಂಭವ ಇದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಪತ್ತೆ ಹಚ್ಚಿ ತೆರವು ಮಾಡುವ ಅನಿವಾರ್ಯತೆ ಇದೆ. ನಗರದಲ್ಲಿ ರಸ್ತೆ ದುರಸ್ತಿ, ಅವೈಜ್ಞಾನಿಕ ಕಾಮಗಾರಿ ಹಾಗೂ ಮರಗಳ ಅಸಮರ್ಪಕ ನಿರ್ವಹಣೆಯಿಂದ ಸಣ್ಣ ಮಳೆಗೂ ಕೂಡ ಈ ರೀತಿಯ ತೊಂದರೆಗಳನ್ನು ಎದುರಿಸುವ ಸಂದರ್ಭ ಉಂಟಾಗಿದೆ. ಅದಕ್ಕೆ ಅನೇಕ ಕಾರಣಗಳಿವೆ. ನಗರದ ಸೌಂದರ್ಯಕ್ಕಾಗಿ ರಸ್ತೆಗಳಲ್ಲಿ ಬೆಳೆಸಿರುವ ಅನೇಕ ಕಾಡು ಜಾತಿಯ ಮರಗಳು ತುಂಬಾ ದುರ್ಬರ ಬೇರುಗಳನ್ನು ಹೊಂದಿವೆ. ಹಾಗೆ ಈ ಮರಗಳು ಎಲ್ಲಿಯೂ ಆಳವಾಗಿ ಬೀರು ಬಿಟ್ಟಿಲ್ಲ ಏಕೆಂದರೆ, ಅವುಗಳ ಸುತ್ತ ಡಾಂಬರ್ ಆಗಿರುವುದು, ಫುಟ್ಪಾತ್ ನಿರ್ಮಾಣ ಮಾಡಿರುವುದು, ಇಲ್ಲವೇ ಮರಗಳನ್ನು ಅರ್ಧಬರ್ಧ ಕಡಿದು ಬಿಟ್ಟಿರುವುದು ಈಗ ಅವುಗಳು ಯಾವುದೇ ಕ್ಷಣ ಬೀಳುವ ಹಂತಕ್ಕೆ ತಂದು ನಿಲ್ಲಿಸಿದೆ.

ನಗರದ ದೀನ್ ದಯಾಳ್ ರಸ್ತೆಯಲ್ಲಿ ಎರಡೂ ಬದಿಯ ಮರದ ಕೊಂಬೆಗಳು ತಾಕಿರುವುದು
ಹಲವು ಕಡೆ ಒಣಗಿದ ಮರಗಳು ಹೆಚ್ಚಾಗಿದ್ದು, ಮರ ಬೀಳುವ ಆತಂಕದಲ್ಲೇ ಜನರು ಓಡಾಡುವಂತಾಗಿದೆ. ಬಸ್ ನಿಲ್ದಾಣ ಸೇರಿದಂತೆ ಹೆಚ್ಚಾಗಿ ಜನ ಓಡಾಡುವ ಸ್ಥಳಗಳಲ್ಲಿ ಒಣ ಮರಗಳು ಬೀಳುವ ಹಂತದಲ್ಲಿವೆ. ಕೆಲವು ಮರಗಳ ಪ್ರಭೇದ ಕಾಲದ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲವಾದರೂ ಅನೇಕ ಮರಗಳು ನೋಡಲು ಬೃಹತ್ ಆಗಿ ದೊಡ್ಡದಾಗಿ ದೃಢವಾಗಿರುವಂತೆ ಕಂಡರೂ ಕೂಡ ದುರ್ಬಲವಾಗಿರುತ್ತವೆ. ಈ ಮಳೆಗಾಲದ ಗಾಳಿ ಮಳೆ ರಭಸದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮರಗಳ ಬಗ್ಗೆ ಅವುಗಳ ಸ್ಥಿತಿಗತಿ ಬಗ್ಗೆ ತಿಳಿದು ಆದಷ್ಟು ಬೇಗ ಕ್ರಮ ಕೈಗೊಳ್ಳುವುದು ಅವಶ್ಯಕ.
ಸಾರ್ವಜನಿಕರು ತಮ್ಮ ಸುತ್ತಮುತ್ತಲ ಪರಿಸರದಲ್ಲಿರುವ ಗಿಡ-ಮರಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅರಣ್ಯ ಇಲಾಖೆಯ ನೆರವಿನೊಂದಿಗೆ ಮಹಾನಗರ ಪಾಲಿಕೆ ಗಿಡಗಳ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ವೈಜ್ಞಾನಿಕವಾಗಿ ಮಾಡುವುದರಿಂದ ಮರಗಳಿಗೆ ಆಗುವ ಹಾನಿಯನ್ನು ಹಾಗೂ ಮರಗಳಿಂದ ಆಗುವ ಹಾನಿಯನ್ನು ತಪ್ಪಿಸಬಹುದಾಗಿದೆ.

ನಗರದ ದೀನ್ ದಯಾಳ್ ರಸ್ತೆಯಲ್ಲಿ ಎರಡೂ ಬದಿಯ ಮರದ ಕೊಂಬೆಗಳು ತಾಕಿರುವುದು
ಶಿವಮೊಗ್ಗ ನಗರದ ಬಹುತೇಕ ರಸ್ತೆಗಳಲ್ಲಿ ಗುಲ್ ಮೊಹರ್ ಮರಗಳು ಬೆಳೆದು ನಿಂತಿವೆ. ಈ ಮರದ ಬುಡವು ಅತ್ಯಂತ ಪೊಳ್ಳಾಗಿದ್ದು, ಸಣ್ಣ ಗಾಳಿ ಬೀಸಿದರೂ ಬೀಳುತ್ತವೆ. ಈ ಹಿಂದೆ ನಗರ ಸೌಂದರ್ಯವಾಗಿ ಕಾಣಲಿ ಎಂಬ ಕಾರಣಕ್ಕೆ ರಸ್ತೆ ಬದಿಯಲ್ಲಿ ಈ ಗಿಡಗಳನ್ನು ನೆಡಲಾಗಿದೆ. ಈ ರೀತಿಯ ಮರಗಳನ್ನು ಉದ್ಯಾನದಲ್ಲಿ, ಇಲ್ಲವೇ ಜನರ ಸಂಚಾರವಿಲ್ಲದ ಜಾಗದಲ್ಲಿ ನೆಡುವುದು ಸೂಕ್ತ ಎಂಬುದು ಪರಿಸರ ತಜ್ಞರ ಸಲಹೆ.