
ಶಿಕಾರಿಪುರ : ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿ ಎಸ್ ಸಿ ಆನರ್ಸ್ ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ರಸಗೊಬ್ಬರ ಕಲಬೆರಕೆ ಕಂಡುಹಿಡಿಯುವ ಸರಳ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿತೆಯನ್ನು ಚಿಕ್ಕಜೋಗಿಹಳ್ಳಿಯ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಾತ್ಯಕ್ಷೀತೆಯನ್ನು ಒಂದು ಕಿರು ನಾಟಕದ ಮೂಲಕ ರೈತ ಹೇಗೆ ಕಲಬೆರಕೆಯಾದ ರಸಗೊಬ್ಬರ ಬಳಸಿ ಮೋಸ ಹೋಗುತ್ತಿದ್ದಾನೆ ಎಂದು ತಿಳಿಸಲಾಯಿತು. ಹಸಿರು ಕ್ರಾಂತಿಯ ನಂತರ ಅಧಿಕ ಇಳುವರಿಗಾಗಿ ರೈತನಿಗೆ ರಸಗೊಬ್ಬರದ ಅವಶ್ಯಕತೆ ಹೆಚ್ಚಾಗಿದೆ. ಇದಕ್ಕೆ ಮಣ್ಣಿನ ಫಲವತ್ತತೆ ಕಡಿಮೆ ಆಗಿರುವುದು ಒಂದು ಕಾರಣ. ಹೀಗೆ ರಸಗೊಬ್ಬರದ ಮೇಲೆ ಅವಲಂಬಿತವಾಗಿರುವ ರೈತ ಅದರ ಗುಣಮಟ್ಟವನ್ನು ಅರಿತು ಉಪಯೋಗಿಸುವುದು ಉತ್ತಮ.
ಇತ್ತೀಚಿನ ದಿನಗಳಲ್ಲಿ ಕೆಲವೊಂದು ಕಡೆ ರಸಗೊಬ್ಬರ ಕಲಬೆರಕೆ ಆಗಿರುವುದು ಕಂಡು ಬಂದಿದೆ. ಇಂತಹ ರಸಗೊಬ್ಬರ ಬಳಸಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ರಸಗೊಬ್ಬರಗಳನ್ನು ಪ್ರಯೋಗಾಲಯದಲ್ಲಿ ರಾಸಾಯನಿಕವಾಗಿ ಪರೀಕ್ಷಿಸಿ ಕಲಬೆರಕೆಯಾಗಿದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ ಆದರೂ ಕೂಡಾ ಇದು ದುಬಾರಿಯಾಗುತ್ತದೆ. ಆದ್ದರಿಂದ ಇದನ್ನು ಪತ್ತೆಹಚ್ಚಲು ಕೇವಲ ನೀರು ಮತ್ತು ಸುಣ್ಣವನ್ನು ಬಳಸಿ ಹೇಗೆ ಪರೀಕ್ಷಿಸಬಹುದೆಂದು ಹೇಳಿಕೊಡಲು ಈ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರಾತ್ಯಕ್ಷಿತೆಯಲ್ಲಿ ಯೂರಿಯಾ, ಡಿಎಪಿ, 10:26:26, 19:19:19, ಎಂಓಪಿ, 14:06:21 ಗೊಬ್ಬರಗಳನ್ನು ಸರಳವಾದ ರೀತಿಯಲ್ಲಿ ಪರೀಕ್ಷಿಸುವ ವಿಧಾನವನ್ನು ಹೇಳಿಕೊಟ್ಟು, ರೈತರ ಮುಂದೆ ವಿದ್ಯಾರ್ಥಿಗಳು ಮಾಡಿ ತೋರಿಸಿದರು. ಇದಾದ ಮೇಲೆ ರೈತರು ತಮ್ಮ ಕೈಯಾರೆ ಅವರು ಬಳಸುವ ರಸಗೊಬ್ಬರ ಪರೀಕ್ಷೆ ಮಾಡಿ ಅಸಲಿಯೋ, ನಕಲಿಯೋ ಎಂದು ತಿಳಿದುಕೊಂಡರು.
ಕಾರ್ಯಕ್ರಮದ ಅಂತ್ಯದಲ್ಲಿ ರೈತರು ತಮಗೊದಗಿದ ಸಂದೇಹಗಳನ್ನು ಕೇಳಿ ಉತ್ತರ ಪಡೆದುಕೊಂಡರು ಪ್ರಾತ್ಯಕ್ಷಿತಯು ಉತ್ತಮವಾಗಿತ್ತೆಂದು, ತಾವು ಕೂಡ ತಾವು ಉಪಯೋಗಿಸುವ ರಸಗೊಬ್ಬರವನ್ನು ಪರೀಕ್ಷೆ ಮಾಡುತ್ತೇವೆಂದು ರೈತರು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ » ಇರುವಕ್ಕಿ ಕೃಷಿ ಕಾಲೇಜ್ ವಿದ್ಯಾರ್ಥಿಗಳಿಂದ ಮಣ್ಣು ಮಾದರಿ ಪ್ರಾತ್ಯಕ್ಷಿಕೆ, ಹಿತ್ತಲ ಗ್ರಾಮದ ರೈತರಿಗೆ ಮಾಹಿತಿ