
ಶಿವಮೊಗ್ಗ : ಅಚ್ಚೆದಿನ್ ಆಯೇ ಗಾ ಎಂದು ಹೇಳಿಕೊಂಡೇ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿ ಆರಂಭದಿಂದಲೂ ಜನಸಾಮಾನ್ಯರ ಮೇಲೆ ಗದಾ ಪ್ರಹಾರ ಮಾಡುತ್ತಲೇ ಬಂದಿದ್ದು, ಇದೀಗ ರೈತರ ಬೆಳೆಗಳಿಗೆ ವಿತರಿಸುವ ರಾಸಾಯನಿಕ ರಸಗೊಬ್ಬರಗಳ ಬೆಲೆಯನ್ನು ಹೆಚ್ಚಳ ಮಾಡಿದ್ದು, ಎಲ್ಲಾ ರಸಗೊಬ್ಬರಗಳ ಮೇಲಿನ ಬೆಲೆ ಮಿತಿ ಮೀರಿ ಏರುತ್ತಿರುವ ಬಗ್ಗೆ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸಿ, ಮನವಿ ಸಲ್ಲಿಸಲಾಯಿತು.
ಕೇಂದ್ರ ಬಿಜೆಪಿ ಸರ್ಕಾರ ಒಂದೆಡೆ ರೈತರಿಗೆ ಕಿಸಾನ್ ಸಮ್ಮಾನ್ ಎಂದು ವರ್ಷಕ್ಕೆ ರೂ.4,000/-ಗಳನ್ನು ನೀಡಿ, ಹಿಂಬಾಗಿಲಿನಿಂದ ಗೊಬ್ಬರ, ಔಷಧಿ, ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡುವ ಮೂಲಕ ಅದಕ್ಕಿಂತ ದುಪ್ಪಟ್ಟು ಹಣವನ್ನು ರೈತರಿಂದ ವಸೂಲು ಮಾಡುತ್ತಿದೆ.
ಮಳೆಯ ಅನಿಶ್ಚಿತತೆ, ಅತಿವೃಷ್ಟಿ, ಅನಾವೃಷ್ಟಿಗಳಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆಹಾನಿ ಮುಂತಾದ ಕಾರಣಗಳಿಗೆ ರೈತರ ಆತ್ಮಹತ್ಯೆಗಳೂ ನಡೆಯುತ್ತಿವೆ. ಇದರ ಮಧ್ಯೆ ಕೇಂದ್ರದ ಬಿಜೆಪಿ ಸರ್ಕಾರ ಏಕಾಏಕಿ ಅವೈಜ್ಞಾನಿಕವಾಗಿ ರಸಗೊಬ್ಬರಗಳ ಬೆಲೆ ಏರಿಕೆ ಮಾಡಿದರೆ, ಮೊದಲೇ ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ಸಂಕಷ್ಟ ಕ್ಕೊಳಗಾಗಲಿದ್ದಾರೆ. ಕೇಂದ್ರ ಸರ್ಕಾರ ರಸಗೊಬ್ಬರಗಳ ಬೆಲೆ ಇಳಿಕೆ ಮಾಡದಿದ್ದಲ್ಲಿ ಯುವ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ. ಆದ್ದರಿಂದ ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ, ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವ ರಸಗೊಬ್ಬರಗಳ ಬೆಲೆಯನ್ನು ಇಳಿಕೆ ಮಾಡುವಂತೆ ಸೂಕ್ತ ನಿರ್ದೇಶನ ಮಾಡಬೇಕೆಂದು ಈ ಮೂಲಕ ಯುವ ಕಾಂಗ್ರೆಸ್ ಒತ್ತಾಯಿಸುತ್ತಿದೆ ಎಂದು ಮನವಿಯನ್ನು ಜಂಟಿ ಕೃಷಿ ನಿರ್ದೇಶಕರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಹಾಪ್ ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್ (ದನಿ), ಗ್ರಾಮಾಂತರ ಯುವ ಕಾಂಗ್ರೆಸ್ನ ಅಧ್ಯಕ್ಷ ಪ್ರವೀಣ್, ಯುವ ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಹರ್ಷಿತ್, ಪ್ರಮುಖರಾದ ಹಾಲಪ್ಪ, ಶಿವಾನಂದ್, ಗಿರೀಶ್, ಮಧು ಸೂದನ್, ಚೇತನ್, ಬಾಲಾಜಿ, ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಚರಣ್, ಬ್ಲ್ಯಾಕ್ ಅಧ್ಯಕ್ಷರಾದ ಪ್ರವೀಣ್ ಪಾಟೀಲ್, ಶಶಿಕುಮಾರ್, ಗಿರೀಶ್ ಸೇರಿದಂತೆ ಇನ್ನಿತರರಿದ್ದರು.