
ಶಿವಮೊಗ್ಗ : ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್, ರವೀಂದ್ರ ನಗರ ಗಣಪತಿ ದೇವಾಲಯ, ಬಸವೇಶ್ವರ ದೇವಾಲಯ ಸೇರಿದಂತೆ ನಗರದ ಪ್ರಮುಖ ದೇವಾಲಯಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ, ಬೆಳಗ್ಗೆಯೇ ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಲಾಯಿತು.
ಇನ್ನೂ ನಗರದ ಸೈನ್ಸ್ ಫೀಲ್ಡ್ ನಲ್ಲಿ ಗಣೇಶ ಮೂರ್ತಿಗಳ ಮಾರಾಟ ಜೋರಾಗಿದ್ದು, ನಾಳೆಯ ಗಣೇಶನ ಹಬ್ಬಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಸಾರ್ವಜನಿಕರು ಮಾಡಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಗಣಪನ ಮೆರಗು ಹೆಚ್ಚಾಗಿದೆ.

ತಾಲ್ಲೂಕು ಹಾಗೂ ಗ್ರಾಮೀಣ ಭಾಗಗಳಿಂದ ಜನರು ಆಗಮಿಸಿ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ. ವಿವಿಧ ಗಾತ್ರ ಮತ್ತು ವಿನ್ಯಾಸದ ಮೂರ್ತಿಗಳಿಗೆ ಉತ್ತಮ ಬೇಡಿಕೆ ಕಂಡುಬಂದಿದೆ. ಹಬ್ಬದ ಪ್ರಯುಕ್ತ ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಸಾರಿಗೆ ಇಲಾಖೆಯು ಹೆಚ್ಚುವರಿ ಬಸ್ಸುಗಳನ್ನು ಸಜ್ಜುಗೊಳಿಸಿದೆ. ಪೊಲೀಸ್ ಇಲಾಖೆ ಮಾರುಕಟ್ಟೆ, ದೇವಾಲಯ ಮತ್ತು ಸಾರಿಗೆ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಿದೆ.
ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿದೆ. ಗೌರಿ ಹಬ್ಬ ಸಡಗರದಿಂದ ನಡೆದರೆ, ನಾಳಿನ ಗಣೇಶ ಹಬ್ಬಕ್ಕೆ ಅಂತಿಮ ಹಂತದ ಸಕಲ ಸಿದ್ಧತೆಗಳು ನಡೆಯುತ್ತಿದೆ.

ಇನ್ನೊಂದೆಡೆ ನಗರದೆಲ್ಲೆಡೆ ಗಣಪತಿ ಪೆಂಡಾಲ್‌ಗಳು ಸಿದ್ಧವಾಗಿವೆ. ಗಣೇಶನನ್ನು ಬರಮಾಡಿಕೊಳ್ಳಲು ಅಂತಿಮ ಸಿದ್ಧತೆಯಾಗುತ್ತಿದೆ. ಪೆಂಡಾಲ್ ಗಳಲ್ಲಿ ಅಲಂಕಾರ ಮಾಡಲಾಗುತ್ತಿದೆ. ಅಲಂಕಾರ ಮತ್ತು ಪೂಜೆಗಾಗಿ ಹೂವು, ಹಣ್ಣು, ಅಲಂಕಾರಿಕ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆ ಯತ್ತ ಮುಖ ಮಾಡಿದ್ದಾರೆ.