
ಶಿವಮೊಗ್ಗ : ಶ್ರಾವಣ ಆರಂಭಕ್ಕೆ ಜೋರು ಗಾಳಿ, ಮಳೆಯು ಮುನ್ನುಡಿ ಬರೆದಿದ್ದು, ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಕವಿದ ಮೋಡ, ಮಳೆ ಜೊತೆಗೆ ಗಾಳಿ ಬೀಸುತ್ತಿರುವುದರಿಂದ ವಾತಾವರಣದಲ್ಲಿ ಥಂಡಿ ಆವರಿಸಿದೆ.
ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದರೆ, ಅರೆ ಮಲೆನಾಡು ಪ್ರದೇಶದಲ್ಲಿ ಮೋಡ ಕವಿದ ವಾತಾವರಣದ ನಡುವೆ ಆಗಾಗ್ಗೆ ಜಿಟಿಜಿಟಿ ಮಳೆ ಬಂದು ಹೋಗುತ್ತಿದೆ. ತುಂಗಾ ಮಂಟಪ ಮುಳುಗಲು ಇನ್ನೂ ಒಂದು ಅಡಿ ಮಾತ್ರ ಬಾಕಿ ಇದೆ.

ನಗರದಲ್ಲಿ ಮಳೆಯಿಂದ ಅಲ್ಲಲ್ಲಿ ಹಾನಿ ಉಂಟಾಗಿದ್ದು, ನಗರ ಸೇರಿದಂತೆ ಜಿಲ್ಲೆಯಾದ್ಯಂತ ವರುಣನ ಅರ್ಭಟ ಶುಕ್ರವಾರವೂ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾನಿಯಾದ ಪ್ರದೇಶಕ್ಕೆ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಇಂದು (ಶುಕ್ರವಾರ ಜುಲೈ 25) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ ನಗರದ ಅಶೋಕನಗರದ ಕುಮಾರ್ ಎಂಬುದರ ಮನೆಯ ಮೇಲ್ಚಾವಣಿ ಕುಸಿದಿದೆ. ಕುಮಾರ್ ಮನೆಗೆ ಶಾಸಕರು ಹಾಗೂ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಭೇಟಿ ನೀಡಿ ಪರಿಶೀಲಿಸಿ, ಕೂಡಲೇ ತಾತ್ಕಾಲಿಕ ವಸತಿ ಮತ್ತು ಅವಶ್ಯಕ ಮೂಲಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಯಿಂದ ಮನೆಯ ಮೇಲ್ಚಾವಣಿ ಕುಸಿದಿದ್ದು ಕೂಡಲೇ ತಾತ್ಕಾಲಿಕ ವಸತಿ ಮತ್ತು ಅವಶ್ಯಕ ಮೂಲಸೌಕರ್ಯಗಳನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದ್ದೇನೆ. ಕುಮಾರ್ ಅವರ ಕುಟುಂಬಕ್ಕೆ ಮಹಾನಗರ ಪಾಲಿಕೆಯ ವತಿಯಿಂದ ತಕ್ಷಣ ನೆರವು ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು.
– ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು
ಇದೇ ವೇಳೆ ಮಿಳಗಟ್ಟ ಹಾಗೂ ಅಣ್ಣನಗರದ ಪ್ರಮುಖ ರಸ್ತೆಗಳ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಿದರು.
ಮಳೆಯಿಂದಾಗಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಎದುರಾಗುತ್ತಿರುವ ತಾತ್ಕಾಲಿಕ ಆಡಚಣೆಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿ ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿ, ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸಂಬಂಧಿತ ಅಧಿಕಾರಿಗಳು, ಸ್ಥಳೀಯ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ ⇒ ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆ ಮಾಡಲು ಕೃಷಿ ಇಲಾಖೆ ಸಲಹೆ