
ಶಿವಮೊಗ್ಗ : ನವರಾತ್ರಿ ದಸರಾ ಹಬ್ಬದ ಭಾಗವಾಗಿ ನಾಳೆ ಆಯುಧ ಪೂಜೆ ಹಾಗೂ ನಾಡಿದ್ದು ವಿಜಯದಶಮಿ ಆಚರಣೆ ಇರುವ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಜನರು ಭರ್ಜರಿಯಾಗಿ ಹೂವು, ಬಾಳೆ ಕಂದು, ಬೂದುಗುಂಬಳ ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿತ್ತು.

ಆಯುಧ ಪೂಜೆಯಂದು ಆಯುಧಗಳಿಗೆ ಮಾತ್ರವಲ್ಲದೇ, ವಾಹನಗಳಿಗೆ, ಯಂತ್ರೋಪಕರಣಗಳಿಗೆ, ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಇರುವುದರಿಂದ ಜನರು ಸ್ವಚ್ಛತಾ ಕಾರ್ಯದ ಜೊತೆಗೆ ನಗರ, ಪಟ್ಟಣಗಳಲ್ಲಿ ಇಂದಿನಿಂದಲೇ ಜನಸಂದಣಿ ಹೆಚ್ಚಾಗಿತ್ತು. ಬೆಳಗ್ಗೆಯಿಂದಲೇ ಜನರು ಪೇಟೆಗೆ ಬಂದು ಹಬ್ಬದ ಆಚರಣೆಗೆ ಬೇಕಾದ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ.

ಪ್ರತಿ ಕೆ.ಜಿ. ಚೆಂಡು ಹೂವು ರೂ.80, ಕನಕಾಂಬರ ಹೂವು ರೂ.500, ಮಲ್ಲಿಗೆ ರೂ.600, ಗುಲಾಬಿ ರೂ.400, ಸೇವಂತಿಗೆ ರೂ.400 ನಂತೆ ಮಾರಾಟವಾಗುತ್ತಿದೆ. ಆಯುಧ ಪೂಜೆಯ ದಿನ ಮನೆ, ವಾಹನ, ಅಂಗಡಿ, ಕಾರ್ಖಾನೆ ಬಳಿ ಒಡೆಯುವ ಬೂದುಗುಂಬಳ ಪ್ರತಿ ಕೆ.ಜಿ.ಗೆ ರೂ.40 ರಿಂದ ಗಾತ್ರದ ಆಧಾರದ ಮೇಲೆ ಒಂದಕ್ಕೆ ರೂ.100 ರಿಂದ 200 ನಂತೆ ಮಾರಾಟವಾಗುತ್ತಿದೆ.

ಮಧ್ಯಾಹ್ನದ ನಂತರ ಜನರ ಸಂಖ್ಯೆ ಹೆಚ್ಚಾಗಿತ್ತು. ಆಯುಧ ಪೂಜೆಗಾಗಿ ಹೂವು, ಹಣ್ಣು ಹಂಪಲು, ಬೂದುಗುಂಬಳ ಕಾಯಿ, ನಿಂಬೆ ಹಣ್ಣು, ಮಾವಿನ ಸೊಪ್ಪು, ಬಾಳೆ ಕಂದು, ಅರಿಶಿಣ, ಕುಂಕುಮ ಸೇರಿದಂತೆ ಇತರೆ ಪೂಜಾ ವಸ್ತುಗಳ, ಅಲಂಕಾರಿಕ ವಸ್ತುಗಳ ಖರೀದಿ ಅತ್ಯಂತ ಭರದಲ್ಲಿ ಸಾಗಿದೆ.

ವ್ಯಾಪಾರಿಗಳು ರಸ್ತೆ ಬದಿಯಲ್ಲಿ ತಳ್ಳುವ ಗಾಡಿಗಳಲ್ಲಿ ಹೂವು, ಹಣ್ಣು, ಬಾಳೆ ಕಂದು, ಮಾವಿನಸೊಪ್ಪು, ನಿಂಬೆ ಹಣ್ಣುಗಳ ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು. ವಾಹನಗಳನ್ನು, ಅಂಗಡಿಗಳನ್ನು ಅಲಂಕರಿಸಲು ಬಳಸುವ ಕೃತಕ ಹಾರಗಳು ಇತರೆ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರ ಸಂಖ್ಯೆಯು ಹೆಚ್ಚಿದೆ.
ಗಾಂಧಿ ಬಜಾರ್, ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಲಕ್ಷ್ಮೀ ಟಾಕೀಸ್ ವೃತ್ತ, ಗೋಪಾಳ, ಪೊಲೀಸ್ ಚೌಕಿ ಸೇರಿದಂತೆ ಎಲ್ಲೆಡೆ ಹಬ್ಬದ ಖರೀದಿ ಭರ್ಜರಿಯಾಗಿ ನಡೆಸಿದರು.
