
ಶಿವಮೊಗ್ಗ : ಇತಿಹಾಸ ಗೊತ್ತಿಲ್ಲದವನು ಇತಿಹಾಸ ಸೃಷ್ಟಿಸಲಾರ ಎಂಬ ಮಾತಿದೆ. ಹೀಗಾಗಿ ದೇಶದಲ್ಲಿ ನಡೆದ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ನೆನಪಿಸಿಕೊಳ್ಳುವುದು ಅನಿವಾರ್ಯ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಸುರೇಶ್ ಕುಮಾರ್ ಹೇಳಿದರು.
1975 ರ ಜೂನ್ 25 ರಂದು, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸಂವಿಧಾನವನ್ನು ಬುಡಮೇಲು ಮಾಡುವ ಮೂಲಕ ತುರ್ತು ಪರಿಸ್ಥಿತಿಯನ್ನು ಹೇರಿದರು. ಆ ಘಟನೆ ನಡೆದು ಈಗ 50 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಅದರ ಒಂದು ನೆನಪು ಮಾಡುವ ಸಲುವಾಗಿ ಇಂದು ಬಿಜೆಪಿ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಅಂದು ಗರೀಬಿ ಹಠಾವೋಕ್ಕೆ ಜನ ಮಾರು ಹೋದರೆ, ಇಂದು ಗ್ಯಾರಂಟಿಗಳಿಗೆ ಮಾರು ಹೋಗಿದ್ದಾರೆ. ಪರಿಸ್ಥಿತಿ ಆಗಲೂ ಬದಲಾಗಲಿಲ್ಲ, ಈಗಲೂ ಆಗಿಲ್ಲ ಎಂದು ಹೇಳಿದರು.

ಎಲ್ಲಾ ಗಣ್ಯರು ಸೇರಿ ಭಾರತಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿದರು
ಇಂತಹ ಕರಾಳ ಇತಿಹಾಸ ವಿರುದ್ಧ ನಿರಂತರವಾಗಿ ಹೋರಾಟ ಮಾಡಿಕೊಂಡೇ ಬರಲಾಗಿದೆ. 50 ವರ್ಷಗಳ ಹಿಂದೆ ದೇಶದಲ್ಲಿ ನಡೆದ ಕರಾಳ ಘಟನೆಯ ನೆನಪು ಇಂದೇಕೆ ಎಂದು ಅನೇಕರು ಕೇಳಬಹುದು. ಆದರೆ ಇತಿಹಾಸ ಗೊತ್ತಿಲ್ಲದವನು ಇತಿಹಾಸ ಸೃಷ್ಟಿಸಲಾರ ಎಂಬ ಮಾತಿದೆ. ಹೀಗಾಗಿ ದೇಶದಲ್ಲಿ ನಡೆದ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ನೆನಪಿಸಿಕೊಳ್ಳಬೇಕಿದೆ. ಅದು ಏಕೆ ಹೇರಿಕೆಯಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕಿದೆ.
| ಸುರೇಶ್ ಕುಮಾರ್, ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ
ಇಸ್ರೇಲ್‌ನಂತಹ ಪುಟ್ಟ ರಾಷ್ಟ್ರ ಇಂದು ಜಗತ್ತಿನ ಗಮನ ಸೆಳೆಯುತ್ತಿದೆ. ತನಗೆ ಆದ ಅನ್ಯಾಯದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿದೆ. ಅಂದು ಯಹೂದಿಗಳಿಗೆ ಹಿಟ್ಲರ್ ನೀಡಿದ ಚಿತ್ರ ಹಿಂಸೆಯನ್ನು ಇಸ್ರೇಲಿಗರೂ ಇಂದಿಗೂ ಮರೆತಿಲ್ಲ. ಅಂತಹ ಅವಮಾನ ಹಾಗೂ ನೋವಿನ ವಿರುದ್ಧ ಇಂದಿಗೂ ಹೋರಾಟ ಮಾಡುತ್ತಿದ್ದಾರೆ. ಅವರು ಇತಿಹಾಸ ತಿಳಿದುಕೊಂಡ ಪರಿಣಾಮವಾಗಿ ಹೋರಾಟ ನಡೆಯುತ್ತಿದೆ ಎಂದರು.
ಇಂದಿರಾಗಾಂಧಿ ಪ್ರಧಾನಿಯಾದಾಗಿನಿಂದ ಎಷ್ಟು ವೇಗವಾಗಿ ಜನಪ್ರಿಯತೆ ಹೆಚ್ಚಿತ್ತೋ ಅಷ್ಟೇ ವೇಗವಾಗಿ ಅವರ ಜನಪ್ರಿಯತೆ 1973 ರಿಂದ ಕುಸಿಯಲಾರಂಭಿಸಿತು. ಅವರು ಮಾಡಿದ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಪರಿಣಾಮ ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರಿಗೆ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ತೀರ್ಪು ನೀಡಿತ್ತು. ಇದರಿಂದಾಗಿ ಇಂದಿರಾಗಾಂಧಿ ಸರ್ವಾಧಿಕಾರಿ ಧೋರಣೆ ಅನುಸರಿಸಿ 1975 ರ ಜೂನ್ 25 ರಂದು ಮಧ್ಯರಾತ್ರಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಪತ್ರಿಕೆಗಳು ಸುದ್ದಿ ಮಾಡದಂತೆ ಆದೇಶಿಸಲಾಗಿತ್ತು. ಹಾಗೂ ಸುದ್ದಿ ಮಾಡಿದವರನ್ನು ಬಂಧಿಸಲಾಗಿತ್ತು. ಹೋರಾಟಗಾರರನ್ನು ಜೈಲಿಗೆ ಹಾಕಲಾಗಿತ್ತು. ಆಲ್ ಇಂಡಿಯಾ ರೇಡಿಯೋ ಆಲ್ ಇಂದಿರಾ ರೇಡಿಯೋ ಆಗಿ ಮಾರ್ಪಟ್ಟು ಇಂದಿರಾಗಾಂಧಿ ಪರವಾದ ಸುದ್ದಿಗಳನ್ನೇ ಬಿತ್ತರಿಸುತ್ತಿತ್ತು ಎಂದರು.
ಯಾವುದೇ ಅಧಿಕಾರ ಇರದ ಇಂದಿಗಾಂಧಿ ಪುತ್ರ ಸಂಜಯ್ ಗಾಂಧಿ ಹೇಳಿದಂತೆ ಇಡೀ ಸರ್ಕಾರ ಕೇಳುತಿತ್ತು. ಆತ ಪುರುಷರನ್ನು ಕುರಿಗಳನ್ನು ಹಿಡಿಸಿದಂತೆ ಹಿಡಿಸಿ ಸುಮಾರು 10 ಲಕ್ಷ ಪುರುಷರಿಗೆ ವ್ಯಾಸೆಕ್ಟಮಿ ಮಾಡಿಸಿದ್ದ. ಜೈಲಿಗೆ ಹಾಕಿದವರ ಉಗುರನ್ನು ಇಕ್ಕಳದಿಂದ ಕಿತ್ತು ಹಾಕಿಸಿ ಚಿತ್ರ ಹಿಂಸೆ ನೀಡಿದ್ದ. ಇಂತಹ ಘಟನೆಗಳನ್ನು ನೆನಪಿಸುವುದು ಇಂದು ಅನಿವಾರ್ಯವಾಗಿದೆ ಎಂದು ಹೇಳಿದರು.
ಈ ವರ್ಷ ತುರ್ತು ಪರಿಸ್ಥಿತಿಗೆ 50 ವರ್ಷಗಳು ಪೂರೈಸಿರುವ ಕಾರಣ ಉತ್ತಮ ಯೋಚನೆಯನ್ನಿಟ್ಟುಕೊಂಡು, ತುರ್ತು ಪರಿಸ್ಥಿತಿಗೆ ಕಾರಣವಾದ ಸತ್ಯಾಸತ್ಯತೆಯನ್ನು ತಿಳಿಸುವ ಸಲುವಾಗಿ ಎಲ್ಲಾ ಕಾರ್ಯಕರ್ತರನ್ನು ಒಟ್ಟಿಗೆ ಸೇರಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ.
| ಎನ್.ಕೆ.ಜಗದೀಶ್, ಬಿಜೆಪಿ ಜಿಲ್ಲಾಧ್ಯಕ್ಷ
ಕಾರ್ಯಕ್ರಮದಲ್ಲಿ ಎಲ್ಲಾ ಗಣ್ಯವ್ಯಕ್ತಿಗಳು ಸೇರಿ ಭಾರತಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿದರು.

ವೇದಿಕೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ, ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕರ ಕೆ.ಜಿ.ಕುಮಾರ್ ಸ್ವಾಮಿ, ಗಿರೀಶ್ ಪಟೇಲ್, ಎಸ್.ರುದ್ರೇಗೌಡರು, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಟಿ.ಡಿ.ಮೇಘರಾಜ್, ಡಾ. ಶಿವಯೋಗಿ ಸ್ವಾಮಿ, ಎಸ್.ದತ್ತಾತ್ರಿ, ರಾಮು, ಎಸ್.ಜ್ಞಾನೇಶ್ವರ, ಮಾಲತೇಶ್, ಜಯರಾಮ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.