
ಶಿವಮೊಗ್ಗ : ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಬೈಪಾಸ್ ರಸ್ತೆ, ಎಂಆರ್‌ಎಸ್ ವೃತ್ತದಿಂದ ಊರುಗಡೂರು ವೃತ್ತದವರೆಗೆ ರಸ್ತೆ ಅಗಲೀಕರಣಗೊಂಡು ಸುಮಾರು ವರ್ಷಗಳೇ ಕಳೆದರೂ ಸಹ ಇದುವರೆಗೂ ಬೀದಿ ದೀಪಗಳ ಬೆಳಕಿನ ವ್ಯವಸ್ಥೆಯೇ ಇಲ್ಲದಂತಾಗಿದೆ. ಈ ರಸ್ತೆ ಬೀದಿ ದೀಪಗಳ ವ್ಯವಸ್ಥೆ ಇಲ್ಲದೆ ಅನೇಕ ದುರ್ಘಟನೆಗಳಿಗೆ ಕಾರಣವಾಗುತ್ತಿದೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವುದು ಅನಿವಾರ್ಯವಾಗಿದೆ.
ಬೈಪಾಸ್ ರಸ್ತೆಯ ಅಕ್ಕಪಕ್ಕದಲ್ಲಿ ಮೈತ್ರಿ ನರ್ಸಿಂಗ್ ಹೋಂ ಕಾಲೇಜ್, ನಂದನ ಎಜುಕೇಶನ್ ಟ್ರಸ್ಟ್ ಶಾಲೆ ಸೇರಿದಂತೆ ನಾಲ್ಕೈದು ಶಾಲಾ ಕಾಲೇಜುಗಳು ಇವೆ. ನಂಜಪ್ಪ ಲೇಔಟ್, ನಿಸರ್ಗ ಲೇಔಟ್, ಊರುಗಡೂರು, ವಾದಿ-ಎ-ಹುದಾ ಸೇರಿದಂತೆ ವಿವಿಧ ಬಡಾವಣೆಗಳಿವೆ. ಇಲ್ಲಿಯ ನಿವಾಸಿಗಳು ಬೈಪಾಸ್ ರಸ್ತೆಯನ್ನು ಬಳಕೆ ಮಾಡಿಕೊಳ್ಳುತ್ತಾರೆ. ಇನ್ನು, ಅಂತರ ಜಿಲ್ಲೆ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು, ಲಾರಿಗಳೆಲ್ಲವು ಇದೆ ಮಾರ್ಗವಾಗಿ ನಗರ ಪ್ರವೇಶಿಸುತ್ತವೆ. ಹಾಗಾಗಿ ಬೈಪಾಸ್ ರಸ್ತೆಯಲ್ಲಿ ಜನ ದಟ್ಟಣೆಯು ಹೆಚ್ಚು, ವಾಹನಗಳ ಸಂಖ್ಯೆಯು ಹೆಚ್ಚು. ಈ ಬೈಪಾಸ್ ರಸ್ತೆಗೆ ಪ್ರವೇಶ ಪಡೆಯುತ್ತಿದ್ದಂತೆ, ಸ್ಪೀಡ್ ಬ್ರೇಕರ್ ಗಳ ಅಳವಡಿಕೆಯೂ ಇಲ್ಲದೆ, ವಾಹನಗಳ ವೇಗಕ್ಕೆ ಲಗಾಮು ಇಲ್ಲದಂತಾಗುತ್ತದೆ. ಈ ಕಾರಣಕ್ಕೆ ಇಲ್ಲಿ ಅಪಘಾತ ಸಂಭವಿಸುತ್ತಿವೆ. ಹಾಗಾಗಿ ಬೈಪಾಸ್ ರಸ್ತೆ ಅಂದರೆ ಆತಂಕ ಪಡುವಂತಾಗಿದೆ.

ಇಲ್ಲಿ ಈಗಾಗಲೇ ರಸ್ತೆ ಅಗಲೀಕರಣಗೊಂಡಿದ್ದು, ಬೈಪಾಸ್ ರಸ್ತೆಯಲ್ಲಿನ ಬೀದಿ ದೀಪಗಳನ್ನು ಅಳವಡಿಸಲು ಸುಮಾರು 1 ವರೆ ಯಿಂದ 2 ಕೋಟಿ ರೂ. ಹಣ ಬೇಕಾಗುತ್ತದೆ. ಹಾಗಾಗಿ ಮುಂದಿನ ವರ್ಷದಲ್ಲಿ ಬೀದಿ ದೀಪಗಳ ಅಳವಡಿಕೆ ಕಾರ್ಯ ಆರಂಭಿಸಲಾಗುವುದು.
| ಮಾಯಣ್ಣ ಗೌಡ, ಮಹಾನಗರ ಪಾಲಿಕೆ ಆಯುಕ್ತರು
ರಾತ್ರಿ ಹೊತ್ತು ಬೀದಿ ದೀಪಗಳು ಇಲ್ಲದ ಕಾರಣ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಇತ್ತೀಚಿಗಷ್ಟೇ ಕೆಎಸ್‌ಆರ್‌ಟಿಸಿ ಬಸ್ ಅಪಘಾತವಾಗಿ ಓರ್ವನ ಸಾವಿಗೆ ಕಾರಣವಾಗಿತ್ತು. ಆಟೋ ಮತ್ತು ದ್ವಿಚಕ್ರ ವಾಹನಗಳು ಕೂಡ ಕತ್ತಲೆಯಲ್ಲಿ ಅನೇಕ ಅಪಘಾತಕ್ಕೆ ಕಾರಣವಾಗಿದ್ದು, ಕೂಡಲೇ ಬೀದಿ ದೀಪದ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ದಿನದ 24 ಗಂಟೆಯೂ ವಾಹನ ಸಂಚಾರ ಇರುವ ಬೈಪಾಸ್ ರಸ್ತೆಯಲ್ಲಿ ಬೀದಿ ದೀಪಗಳ ಬೆಳಕಿನ ವ್ಯವಸ್ಥೆ ಇಲ್ಲ. ಅಪಘಾತಗಳ ಪ್ರಮಾಣ ಹೆಚ್ಚಲು ಪ್ರಮುಖ ಕಾರಣಗಳ ಪೈಕಿ ಇದು ಒಂದು. ರಾತ್ರಿ ಸಂದರ್ಭ ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಚಾಲಕರಿಗೆ ಸಾಹಸದ ಕೆಲಸ. ರಸ್ತೆಗೆ ಡಿವೈಡರ್ ಇದೆ. ಆದರೂ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳ ಲೈಟುಗಳು ವಾಹನ ಚಾಲಕರ ಕಣ್ಣು ಕುಕ್ಕಲಿದೆ. ಒಂದು ವೇಳೆ ಡಿವೈಡರ್ ಮೇಲೆ ಬೀದಿ ದೀಪ ಅಳವಡಿಸಿದರೆ ಈ ಸಮಸ್ಯೆ ಉಂಟಾಗುವುದಿಲ್ಲ. ಆದರೆ ರಸ್ತೆ ನಿರ್ಮಾಣವಾಗಿ ವರ್ಷಗಳೆ ಕಳೆದರೂ ಬೀದಿ ದೀಪ ಅಳವಡಿಸಿಲ್ಲ.

ಅಲ್ಲದೇ ಇಲ್ಲಿ ಡಾಬಾಗಳು, ಬಾರ್ ಅಂಡ್ ರೆಸ್ಟೋರೆಂಟ್, ಅಂಗಡಿಗಳು, ಮಳಿಗೆಗಳು, ಗ್ಯಾರೇಜ್ ಗಳು ಕೂಡಾ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಭಾರೀ ಗಾತ್ರದ ವಾಹನಗಳನ್ನು ರಸ್ತೆ ಬದಿಯಲ್ಲೇ ಎಲ್ಲೆಂದರಲ್ಲಿ ನಿಲ್ಲಿಸುವುದು ಸಾಮಾನ್ಯವಾಗಿದೆ. ಸರಿಯಾದ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲದೆ, ಬೀದಿ ದೀಪಗಳ ವ್ಯವಸ್ಥೆಯೂ ಇಲ್ಲದೆ ಈ ರಸ್ತೆಯ ಸ್ಥಿತಿ ಚಿಂತಾಜನಕವಾಗಿದೆ.
ಅದಕ್ಕಿಂತ ಹೆಚ್ಚಾಗಿ ಬೈಪಾಸ್ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಬೀದಿ ದೀಪ ಇಲ್ಲದೇ ಇರುವುದರಿಂದ ಲೂಟಿ ಮಾಡಲು ಅನುಕೂಲವಾಗಿದೆ. ಸಿಸಿ ಕ್ಯಾಮರಗಳು ಕಾರ್ಯಾಚರಿಸುತ್ತಿಲ್ಲ, ಈ ರಸ್ತೆಯಲ್ಲಿ ನಾಲೈದು ಕಾಲೇಜುಗಳು, ವಾಹನಗಳ ಶೋರೂಂಗಳು ಇವೆ. ಇಲ್ಲಿರುವ ಶೋ ರೂಂಗಳಲ್ಲಿ ಕೆಲಸ ಮಾಡುವ ಮಹಿಳೆಯರು ರಾತ್ರಿ ಮನೆಗೆ ತೆರಳಲು ಯೋಚಿಸುವಂತಹ ಪರಿಸ್ಥಿತಿ ಇದೆ. ಎರಡು ಮಹಿಳಾ ಹಾಸ್ಟೆಲ್‌ಗಳಿದ್ದು, ವಿದ್ಯಾರ್ಥಿನಿಯರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಓಡಾಡುವಂತಾಗಿದೆ. ರಾತ್ರಿ ಹೊತ್ತು ಈ ಭಾಗದಲ್ಲಿ ಹೆಚ್ಚಿನ ಗಸ್ತು ಏರ್ಪಡಿಸಿ ಪುಂಡು ಪೋಕರಿಗಳ ಹಾವಳಿಯನ್ನು ನಿಯಂತ್ರಿಸಬೇಕು.

ಬೈಪಾಸ್ ರಸ್ತೆಯಲ್ಲಿ ಊರುಗಡೂರು, ಮತ್ತೂರು ರಸ್ತೆ ಹೋಗುವ ಕಡೆಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಹಾಗಾಗಿ ಇಲ್ಲಿ ವಾಹನಗಳ ವೇಗ ತಗ್ಗುತ್ತದೆ. ಉಳಿದೆಲ್ಲೂ ವೇಗ ನಿಯಂತ್ರಣಕ್ಕೆ ಕ್ರಮವಿಲ್ಲದಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಉತ್ತಮ.
ನಗರಕ್ಕೆ ಸಮೀಪವಿರುವ ಈ ಮುಖ್ಯ ರಸ್ತೆಯಲ್ಲೇ ಈ ರೀತಿಯ ಅವ್ಯವಸ್ಥೆಯಾದರೆ ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡುವವರು ಯಾರು? ತುಂಗಾ ನಗರ ಠಾಣಾ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಅತಿ ಹೆಚ್ಚಿನ ಕ್ರೈಮ್ ರೇಟ್ ಇದ್ದು, ಈ ಬಗ್ಗೆ ಪೋಲೀಸರು ಕೂಡ ಕ್ರಮಕೈಗೊಳ್ಳಬೇಕು. ಈಗಾಲಾದರೂ ಪಾಲಿಕೆ ಕೂಡಲೇ ಬೀದಿ ದೀಪದ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರತಿನಿತ್ಯ ನೂರಾರು ವಿದ್ಯಾರ್ಥಿನಿಯರು ಮತ್ತು ಕೆಲಸಕ್ಕೆ ಹೋಗುವ ಮಹಿಳೆಯರು, ಕೂಲಿ ಕಾರ್ಮಿಕರು ಓಡಾಡುವ ಈ ರಸ್ತೆಯಲ್ಲಿ ಬೀದಿ ದೀಪ ಇಲ್ಲದ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಮತ್ತು ಭಯ ಹಾಗೂ ಆತಂಕದ ವಾತಾವರಣವಿದೆ. ಈಗಲಾದರೂ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.