ಜೆ.ಎನ್.ಎನ್.ಸಿ.ಇ: ಐಡಿಯಾ ಲ್ಯಾಬ್ ಮತ್ತು ಕಂಪ್ಯೂಟರ್ ಸೈನ್ಸ್ ಸಂಕೀರ್ಣ ಕಟ್ಟಡ ಉದ್ಘಾಟನೆ

ಶಿವಮೊಗ್ಗ : ಆವಿಷ್ಕಾರಯುತ ಕಾಲದಲ್ಲಿ ಅನುಭವಾತ್ಮಕ‌ ಕಲಿಕೆ ಮತ್ತು ನಾವೀನ್ಯಯುತ ಚಿಂತನೆಗಳ ಬಗ್ಗೆ ಸದಾ ಜಾಗೃತಿ ಅತ್ಯಗತ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ » ಶಿವಮೊಗ್ಗ : ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ, ಭಕ್ತಿ ಭಾವ ಮೆರೆದು ಪುನೀತರಾದ ಭಕ್ತರು!

ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ನೂತನವಾಗಿ ಸ್ಥಾಪಿಸಿರುವ ಎಐಸಿಟಿಇ ಐಡಿಯಾ ಲ್ಯಾಬ್ ಮತ್ತು ಕಂಪ್ಯೂಟರ್ ಸೈನ್ಸ್ ಸಂಕೀರ್ಣ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಐಡಿಯಾ ಲ್ಯಾಬ್ ನಂತಹ ಯೋಜನೆಗಳು ಅಕಾಡೆಮಿ ಮತ್ತು ಉದ್ಯಮದ ನಡುವಿನ ಸಹಕಾರವನ್ನು ಉತ್ತೇಜಿಸಲಿದೆ. ವಿಜ್ಞಾನ ಮತ್ತು ಜ್ಞಾನಕ್ಕೆ ಅವಿನಾಭಾವ ಸಂಬಂಧವಿದೆ. ಉತ್ತಮ ಮಾತು ಮತ್ತು ವ್ಯಕ್ತಿತ್ವಕ್ಕೆ ಹೆಚ್ಚು ಆದ್ಯತೆ ನೀಡುವ ಜ್ಞಾನ ನಮಗೆ ಬೇಕು. ನಾವು ಕಲಿತ ಜ್ಞಾನ ಸಮಾಜಕ್ಕೆ ಅರ್ಪಣೆಯಾಗಬೇಕು ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನಾಲ್ಕು ಗೋಡೆಯ ನಡುವಿನ ಕಲಿಕೆ‌ಯ ಜೊತೆಗೆ, ವಾಸ್ತವತೆಯ ಅವಶ್ಯಕತೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಲು ಐಡಿಯಾ ಲ್ಯಾಬ್ ನಂತಹ ವೇದಿಕೆ ಸಹಕಾರಿ. ಸಕ್ರಿಯ ಭಾಗವಹಿಸುವಿಕೆ‌ ಮೂಲಕ ಹೊಸ ಆಧುನಿಕ ತಂತ್ರಜ್ಞಾನ, ಕೌಶಲ್ಯತೆಗೆ ಯುವ ಸಮೂಹ ತೆರೆದು ಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳ ಜೊತೆಗೆ ಉದ್ಯಮ ಸಂಸ್ಥೆಗಳು ಕೂಡ ಐಡಿಯಾ ಲ್ಯಾಬ್ ಉಪಯೋಗ ಪಡೆಯಬಹುದಾಗಿದೆ ಎಂದರು.

ಕೃತಕ ಬುದ್ಧಿಮತ್ತೆಯನ್ನು ಬಳಸಿ ಮಾದರಿಗಳ ತರಬೇತಿ, ಪರೀಕ್ಷೆ ಮತ್ತು ಕಾರ್ಯಗತಗೊಳಿಸಲು ಬೇಕಾಗುವ ಸಂಪೂರ್ಣ ತಾಂತ್ರಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡುವಲ್ಲಿ ವಿದ್ಯಾಸಂಸ್ಥೆಯ ಪಾತ್ರ ಪ್ರಮುಖವಾಗಿದೆ. ಎಐ ತಂತ್ರಜ್ಞಾನಕ್ಕೆ ನಮ್ಮ ಸ್ಥಳೀಯ ಭಾಷೆಗಳ ಮೂಲಕ ಮತ್ತಷ್ಟು ತರಬೇತಿ ನೀಡುವ ಕಾರ್ಯ ನಡೆಯಬೇಕು. ಇದರಿಂದ ಮೇಕ್ ಇನ್ ಇಂಡಿಯಾದಂತಹ ಪರಿಕಲ್ಪನೆಗೆ ಹೆಚ್ಚು ಬಲ ನೀಡಿದಂತಾಗುತ್ತದೆ ಎಂದು ಹೇಳಿದರು.

ಏನಿದು ಐಡಿಯಾ ಲ್ಯಾಬ್?

ಎಐಸಿಟಿಯಿ (AICTE) ಸಂಸ್ಥೆಯ ಪ್ರಮುಖ ಯೋಜನೆಯಾದ ಐಡಿಯಾ ಲ್ಯಾಬ್, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ಕ್ಕೆ ಅನುಸಾರವಾಗಿ, ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಆಧಾರಿತ ಮತ್ತು ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುತ್ತದೆ.

ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ, 7,500 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಜೆ.ಎನ್.ಎನ್.ಸಿ.ಇ ಐಡಿಯಾ ಲ್ಯಾಬ್, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ 24×7 ಕಾರ್ಯನಿರ್ವಹಿಸಲಿದೆ. ತ್ರಿಡಿ ಪ್ರಿಂಟರ್‌ಗಳು, ತ್ರಿಡಿ ಸ್ಕ್ಯಾನರ್‌ಗಳು, ರೋಬೋಟಿಕ್ ಪರಿಕರಗಳು, ಮರ, ಪ್ಲಾಸ್ಟಿಕ್, ಅಲ್ಯೂಮಿನಿಯಂ ಮತ್ತು ಫೋಮ್‌ನಂತಹ ವಸ್ತುಗಳನ್ನು ವಿನ್ಯಾಸಗೊಳಿಸುವ ಸಿ.ಎನ್.ಸಿ ರೌಟರ್‌ಗಳು, ಎಲೆಕ್ಟ್ರಾನಿಕ್ ಸರ್ಕ್ಯೂಟ್ ವಿನ್ಯಾಸವನ್ನು ನಿಖರವಾಗಿ ಮುದ್ರಿಸಬಲ್ಲ ಪಿಸಿಬಿ ಮುದ್ರಣ ಯಂತ್ರ ಮತ್ತು ಲೇಸರ್ ಕಟರ್‌ಗಳು, ಡ್ರೋನ್ ಯುನಿಟ್, ಐಓಟಿ ಪರಿಕರಗಳು, ಅಮ್ಯೆಚುರ್ ರೇಡಿಯೋ ಅಪರೇಟರ್ಸ್ ಸೇರಿದಂತೆ ಉದ್ಯಮ ಮಟ್ಟದ ಸುಮಾರು 200 ಕ್ಕೂ ಹೆಚ್ಚು ಆಧುನಿಕ ಉಪಕರಣಗಳು ಹಾಗೂ ಪ್ರಾತ್ಯಕ್ಷಿಕೆ ಸೌಲಭ್ಯಗಳನ್ನು ಹೊಂದಿದೆ. ಇದರಿಂದ‌ ಒಂದೇ ಸೂರಿನಡಿ, ಸ್ಮಾರ್ಟ್ ಉತ್ಪಾದನೆ, ಡಿಜಿಟಲ್ ಎಂಜಿನಿಯರಿಂಗ್, ಎಐ ಚಾಲಿತ ಎಂಜಿನಿಯರಿಂಗ್ ಸೇರಿದಂತೆ ವಿವಿಧ‌ ಕ್ಷೇತ್ರಗಳ ಆವಿಷ್ಕಾರಿ‌ ಯೋಚನೆಗಳು, ಕಾರ್ಯಗತಗೊಳಿಸುವ ಯೋಜನೆಗಳಾಗಿ ರೂಪಗೊಳ್ಳಲಿದೆ.

ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಎಂ.ಎಸ್.ಅನಂತದತ್ತಾ, ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಜಿ.ಎನ್.ಸುಧೀರ್, ಎಂ.ಆರ್.ಸೀತಾಲಕ್ಷ್ಮೀ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಐಡಿಯಾ ಲ್ಯಾಬ್ ಸಂಯೋಜಕ ಡಾ. ಎಂ.ಎಚ್.ಮೊಯಿನುದ್ದೀನ್ ಖಾನ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಜಲೇಶ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು.

ಇದನ್ನೂ ಓದಿ » ಸಚಿವ ಸಂತೋಷ್ ಲಾಡ್ ಹುಟ್ಟುಹಬ್ಬದ ಪ್ರಯುಕ್ತ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...