
ಶಿವಮೊಗ್ಗ : ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರೂ, ಮಾಜಿ ಉಪಮುಖ್ಯಮಂತ್ರಿಗಳೂ ಆದ ಕೆ.ಎಸ್.ಈಶ್ವರಪ್ಪನವರಿಗೆ 77ನೇ ವಸಂತ ಪೂರೈಸಿದ ಪ್ರಯುಕ್ತ ಶ್ರೀಗಂಧ ಸಂಸ್ಥೆಯ ವತಿಯಿಂದ ಜೂ.10 ಮತ್ತು 11 ರಂದು ನಗರದ ಶುಭಮಂಗಳ ಕಲ್ಯಾಣ ಮಂಟಪದ ಆವರಣದಲ್ಲಿ ಹಲವು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂದೇಶ್ ಉಪಾಧ್ಯರು ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.10 ರ ಮಂಗಳವಾರ ಬೆಳಿಗ್ಗೆ 6.00 ಗಂಟೆಯಿಂದ ಶ್ರೀ ಲಲಿತ ಸಹಸ್ರನಾಮ ಪಾರಾಯಣ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಸಹಸ್ರ ಚಂಡಿಕಾ ಯಾಗ ಹಾಗೂ ಮಹಾರುದ್ರ ಹೋಮಗಳು ನಡೆಯಲಿವೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆದು 11.00 ಗಂಟೆಗೆ ಪೂರ್ಣಾಹುತಿಯ ನಂತರ ಸಮಾಜದ ವಿವಿಧ ಮಠಾಧೀಶರು ಭಾಗವಹಿಸುವ ಧರ್ಮ ಸಭೆ ಪ್ರಾರಂಭವಾಗಲಿದೆ. ಈ ಧರ್ಮ ಸಭೆಯಲ್ಲಿ ಪರಮಪೂಜ್ಯರುಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು, ಪೇಜಾವರ ಮಠ, ಶ್ರೀ ಮಲ್ಲಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬೆಕ್ಕಿನಕಲ್ಮಠ, ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು, ಕೂಡ್ಲಿ ಶ್ರೀ ಶೃಂಗೇರಿ ಶಂಕರ ಮಠ, ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಮಹಾಸ್ವಾಮಿಗಳು, ಚಿತ್ರದುರ್ಗ, ಶ್ರೀ ಈಶ್ವರಾನಂದಪುರಿ ಸ್ವಾಮಿಗಳು, ಕಾಗಿನೆಲೆ ಗುರುಪೀಠ ಹೊಸದುರ್ಗ, ಶ್ರೀ ಸಾಯಿನಾಥ ಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಮಠ ಶಿವಮೊಗ್ಗ, ಇವರುಗಳು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಧರ್ಮ ಸಭೆಯ ನಂತರ 12.30 ಕ್ಕೆ ‘ಮಂಗಳ ನಿಧಿ ಸಮರ್ಪಣೆ’ ಕಾರ್ಯಕ್ರಮವಿದ್ದು, ಇದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೇಷ್ಠ ಪ್ರಚಾರಕರಾದ ಸು.ರಾಮಣ್ಣನವರು ಉಪಸ್ಥಿತರಿರುತ್ತಾರೆ ಎಂದರು.
ಅದೇ ದಿನ ಸಂಜೆ 6.00 ಗಂಟೆಗೆ ‘ಸ್ವಾಭಿಮಾನಿ ಭಾರತ’ ಎಂಬ ವಿಶೇಷ ಕಾರ್ಯಕ್ರಮವಿದ್ದು, ದಿಕ್ಸೂಚಿ ಭಾಷಣಕಾರರಾಗಿ ಹೆಸರಾಂತ ವಾಗ್ನಿಗಳಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಮಾತನಾಡಲಿದ್ದಾರೆ ಹಾಗೂ ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಸ್ವತಂತ್ರ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಮರಿಮಗ ಶೈಲೇಶ್ ತಿಲಕ್ ಅವರು ಆಗಮಿಸಲಿದ್ದಾರೆ. ನಂತರ ದೇಶಭಕ್ತಿ ಗೀತೆಗಳ ಗಾಯನವಿರುತ್ತದೆ ಎಂದರು.
ಜೂ.11 ರ ಬುಧವಾರ ಸಂಜೆ 6.೦೦ ಗಂಟೆಗೆ ಶಿವಮೊಗ್ಗ ನಗರದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಿದ್ದು, 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸುಮಾರು 1500 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಕೊಲ್ಲಾಪುರ ಸಿದ್ಧಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು, ಕವಲಗುಡ್ಡ ಗುರುಪೀಠದ ಶ್ರೀ ಅಮರೇಶ್ವರ ಸ್ವಾಮಿಗಳು ಹಾಗೂ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆ ಮೂಡಬಿದರೆಯ ಡಾ. ಮೋಹನ್ ಆಳ್ವ ಅವರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಈ.ಕಾಂತೇಶ್, ನಾಗರಾಜ್ ಭಾಗವತ್ ರಾಮಚಂದ್ರ, ಉಮೇಶ್ ಆರಾಧ್ಯ, ಸುವರ್ಣ ಶಂಕರ್, ಸುಬ್ರಮಣ್ಯ ಭಟ್, ರವೀಂದ್ರ ಭಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.