
ಶಿವಮೊಗ್ಗ : ಶಿವಮೊಗ್ಗದಲ್ಲಿ ಕಳೆದ 29 ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಹೊಂಗಿರಣ ತಂಡವು ಜೂ.09 ರಂದು ಉಡುಪಿಯ ಪ್ರಜ್ಞಾನಂ ಟ್ರಸ್ಟ್ನ ಖ್ಯಾತ ನೃತ್ಯಪಟು ವಿದುಷಿ ಸಂಸ್ಕøತಿ ಪ್ರಭಾಕರ್ರವರು ಅಭಿನಯಿಸಿರುವ ‘ಹೆಜ್ಜೆಗೊಲಿದ ಬೆಳಕು’ ಏಕವ್ಯಕ್ತಿ ನಾಟಕವನ್ನು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಹೊಂಗಿರಣ ತಂಡದ ಮುಖ್ಯಸ್ಥರಾದ ಸಾಸ್ವೆಹಳ್ಳಿ ಸತೀಶ್ ತಿಳಿಸಿದರು.
ಶನಿವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ನಾಟಕವನ್ನು ನಾವು ಖ್ಯಾತ ಕಲಾವಿದ, ಸಂಗೀತಗಾರ ಶ್ರೀ ಕೊಂಡಯ್ಯದಾಸ್ ಇವರ ಸಹಾಯಾರ್ಥ ನಡೆಸುತ್ತಿದ್ದು, ಕೊಂಡಯ್ಯನವರಿಗೆ ಹೃದಯ ಮತ್ತು ಬೆನ್ನು ಹುರಿಯ ಸಮಸ್ಯೆಯಿಂದ ಸಹಾಯಕರಿಲ್ಲದೆ ನಡೆದಾಡುವುದೂ ಕಷ್ಟವಾಗಿದೆ ಎಂದರು.
ಇಂತಹ ಸ್ಥಿತಿಯಲ್ಲಿ ಅವರು ತಮ್ಮ ಕುಟುಂಬವನ್ನು ನಿರ್ವಹಿಸಬೇಕಿದೆ. ಶಿವಮೊಗ್ಗದ ಹಲವು ತಂಡಗಳ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಕೊಂಡಯ್ಯನವರು ಹಲವು ಬೀದಿನಾಟಕ ತಂಡಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇಂತಹವರು ಸಂಕಷ್ಟದಲ್ಲಿ ಇರುವುದರಿಂದ ಈ ನಾಟಕದಲ್ಲಿ ಬಂದ ಹಣದ ಜೊತೆ ತಂಡದಿಂದಲೂ ಒಂದಷ್ಟು ಸಹಾಯ ನೀಡುವ ಯೋಜನೆ ಇದೆ ಎಂದರು.
ನಾಟಕಕ್ಕೆ ರೂ.50 ಹಾಗೂ ರೂ.100 ಗಳ ಟಿಕೇಏಟ್ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಬಂದು ನಾಟಕವನ್ನು ವೀಕ್ಷಿಸುವುದರ ಜೊತೆಗೆ ಕಲಾವಿದರ ಕುಟುಂಬಕ್ಕೆ ನೆರವಾಗುವಂತೆ ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಹೊಂಗಿರಣ ತಂಡದ ಪ್ರಮುಖರಾದ ರವಿ ಹಾಗೂ ಗಿರಿಧರ್ ದಿಣ್ಣಿ ಉಪಸ್ಥಿತರಿದ್ದರು.