
ಶಿವಮೊಗ್ಗ : ನಗರದ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವರ ರಥೋತ್ಸವವು ಇಂದು (ಭಾನುವಾರ) ಅತ್ಯಂತ ವಿಜೃಂಭಣೆಯಿಂದ ಅಪಾರ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಕೋಟೆ ಶ್ರೀ ಆಂಜನೇಯ ಸ್ವಾಮಿ ರಥವು ಕೋಟೆ ಶ್ರೀ ಸೀತಾರಾಮಾಂಜನೇಯ ದೇಗುಲದಿಂದ ಎಸ್.ಪಿ.ಎಂ. ರಸ್ತೆ ಮೂಲಕ, ಗಾಂಧಿ ಬಜಾರ್ ವರೆಗೆ ರಥೋತ್ಸವ ನಡೆಯಿತು. ರಥೋತ್ಸವಕ್ಕೂ ಮುನ್ನ ವಿಶೇಷ ಪೂಜೆ ಸಲ್ಲಿಸಲಾಯಿತು. ಅನಂತರ ಅದೇ ಮಾರ್ಗವಾಗಿ ರಥೋತ್ಸವ ಮರಳಿದ್ದು, ಕೋಟೆ ಶ್ರೀಮಾರಿಕಾಂಬ ದೇವಿ ದೇಗುಲದ ಬಳಿ ಪೂಜೆ ಸಲ್ಲಿಸಲಾಯಿತು. ಅಪಾರ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದು, ಜೈ ಶ್ರೀರಾಮ್ ಘೋಷಣೆ ಮೂಲಕ ರಥವನ್ನು ಎಳೆದರು. ವಿಶೇಷ ಬೇಡಿಕೆಯೊಂದಿಗೆ ಪೂಜೆ ಸಲ್ಲಿಸಿದರು.

ರಾತ್ರಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ವಿವಿಧ ಕಲಾ ತಂಡಗಳು ರಥೋತ್ಸವದಲ್ಲಿ ಭಾಗವಹಿಸಿದ್ದವು.
ಶಿವಮೊಗ್ಗದ ಐತಿಹಾಸಿಕ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಾಲಯ ಅತ್ಯಂತ ಪ್ರಸಿದ್ಧವಾಗಿದೆ. ಶಿವಪ್ಪ ನಾಯಕರ ಕಾಲದ ಕೋಟೆ, ತುಂಗಾನದಿ ಹತ್ತಿರದಲ್ಲಿರುವುದರಿಂದ ಪ್ರಮುಖ ದೇವಾಲಯಗಳಲ್ಲಿ ಶ್ರೀ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ ಹೆಚ್ಚು ಸುಪ್ರಸಿದ್ಧವಾಗಿದೆ.
ಭಕ್ತರು ದೇವರ ಕೃಪಾಶಿರ್ವಾದ ಪಡೆದುಕೊಳ್ಳಲು ಪ್ರತಿ ಶನಿವಾರವೂ ಈ ದೇವಾಲಯಕ್ಕೆ ಆಗಮಿಸುತ್ತಾರೆ. ಅಪಾರ ಭಕ್ತರು ದೇವರ ಆಶೀರ್ವಾದ ಪಡೆದುಕೊಳ್ಳಲು ಆಗಮಿಸುವುದರಿಂದ ಪ್ರತಿ ಶನಿವಾರವೂ ಕೂಡಾ ಜಾತ್ರೆಯ ರೀತಿಯಲ್ಲಿಯೇ ವಾತಾವರಣ ಇರುತ್ತದೆ.

ಭಕ್ತರ ಅಭೀಷ್ಟಗಳನ್ನು ಶೀಘ್ರ ನೆರವೇರಿಸಿ ಸಂಕಷ್ಟ ಪರಿಹರಿಸುವ ದೇವರು ಎಂದೇ ಹೆಸರಾಗಿದೆ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ. ಇಂದು ರಥೋತ್ಸವದ ಅಂಗವಾಗಿ ಹಲವಾರು ಅಂಗಡಿಗಳು ತೆರೆದಿದ್ದು, ಖಾರಾ ಮಂಡಕ್ಕಿ ಹಾಗೂ ಮಕ್ಕಳ ಆಟಿಕೆಗಳು ಹೆಚ್ಚು ಗಮನ ಸೆಳೆದವು. ಅಪಾರ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದು, ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು.
