
ಶಿವಮೊಗ್ಗ : ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾವು ಡಾರ್ಕ್ ಹ್ಯೂಮರ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಆಗಿದೆ. ಇದು ಎಡಗೈ ಬಳಸುವವರ ತೊಂದರೆ, ಸಂಕಷ್ಟಗಳ ಸುತ್ತ ಹೆಣೆದುಕೊಂಡಿದ್ದು, ರಾಜ್ಯಾದ್ಯಂತ ಅತ್ಯಂತ ಯಶಸ್ವಿ ಪ್ರದರ್ಶನ ಕಂಡಿದೆ ಎಂದು ಸಹ ನಿರ್ಮಾಪಕ ರಾಜೇಶ್ ಕೀಳಂಬಿ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾವು ಕಳೆದ ಜೂನ್ 13ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಶೈಲಿಯ ನಿರೂಪಣೆ ಮತ್ತು ತಾಂತ್ರಿಕತೆಯ ವಿಭಿನ್ನತೆ ಇಲ್ಲಿ ಕಂಡು ಬರುತ್ತದೆ. ಎಡಗೈ ಬಳಸುವವರ ಸಂಕಷ್ಟಗಳ ಸುತ್ತ ಲಘು ಹಾಸ್ಯದ ಮೂಲಕ ಮತ್ತು ಕೌತುಕದ ಮೂಲಕ ಚಿತ್ರ ಸಾಗಿದೆ. ಪ್ರೇಕ್ಷಕರು ಈ ಚಿತ್ರವನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಇದು ನಮಗೆ ಸಂತೋಷ ತಂದಿದೆ ಎಂದರು.
ಈ ಸಿನಿಮಾ ನನಗೆ ಒಂದು ವಿಶಿಷ್ಟವಾದ ಅನುಭವ ತಂದಿದೆ. ನಾನು ಬಲಗೈ ಬಳಸುತ್ತಿದ್ದರೂ ಕೂಡ ಎಡಗೈ ಬಳಸಬೇಕಾದ ಅನಿವಾರ್ಯತೆ ಇದ್ದಿದ್ದರಿಂದ ಎಡಗೈ ಬಳಸುವುದನ್ನೇ ಅಭ್ಯಾಸ ಮಾಡಿಕೊಳ್ಳಬೇಕಾಯಿತು. ಒಟ್ಟಾರೆ ಈ ಚಿತ್ರ ಯಶಸ್ವಿಯಾಗಿ ಸಾಗುತ್ತಿದೆ. ಇದರ ಹೆಚ್ಚುವರಿ ಪ್ರಚಾರಕ್ಕಾಗಿ ನಾವು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಶಿವಮೊಗ್ಗದ ಜನ ಸಿನಿಮಾಕ್ಕೆ ಯಾವಾಗಲೂ ಪ್ರೀತಿ ತೋರಿಸಿದ್ದಾರೆ. ಈ ಸಿನಿಮಾವನ್ನು ಕೂಡ ಪ್ರೀತಿಯಿಂದ ಬರಮಾಡಿಕೊಳ್ಳಿ. ನಾನು ಕೂಡ ಶಿವಮೊಗ್ಗದ ಹುಡುಗ.
– ದಿಗಂತ್ ಮಂಚಾಲೆ, ನಟ
ನಿರ್ದೆಶಕರು ಹಾಗೂ ನಿರ್ಮಾಪಕರಾದ ಸಮರ್ಥ್ ಕಡಕೋಳ್ ಮಾತನಾಡಿ, ಇದು ನನ್ನ ಮೊದಲನೇ ನಿರ್ದೇಶನದ ಸಿನಿಮಾವಾಗಿದ್ದು, 2 ಗಂಟೆ ಮನರಂಜನೆ ನೀಡಲು 4 ವರ್ಷ ನೀಡಲಿತ್ತಿದ್ದೇನೆ. ಸಹ ನಿರ್ಮಾಪಕ ರಾಜೇಶ್ ಕೀಳಂಬಿಯವರು ಈ ಚಿತ್ರದ ಯಶಸ್ಸಿಗೆ ಮತ್ತು ಪ್ರಚಾರಕ್ಕೆ ಕಾರಣರಾಗಿದ್ದಾರೆ. ಚಿತ್ರದಲ್ಲಿ ನಾಯಕ ನಟಿಯಾಗಿ ಈಗಾಗಲೇ ಸಿನಿಮಾದಲ್ಲಿ ಒಳ್ಳೆಯ ಹೆಸರು ಗಳಿಸಿರುವ ನಿಧಿಸುಬ್ಬಯ್ಯ ಕಾಣಿಸಿಕೊಂಡಿದ್ದಾರೆ. ಇತರೆ ಪಾತ್ರಗಳಲ್ಲಿ ಧನುಹರ್ಷ, ರಾಧಿಕಾ ನಾರಾಯಣ್ ಸೇರಿದಂತೆ ಹಲವರಿದ್ದಾರೆ. ಛಾಯಾಗ್ರಹಣದ ಹೊಣೆಯನ್ನು ಅಭಿಮನ್ಯು ಸದಾನಂದ ನಿರ್ವಹಿಸಿದ್ದಾರೆ. ಸಂಗೀತವನ್ನು ಪ್ರದ್ಯೋತ್ತನ್ ನೀಡಿದ್ದಾರೆ. ಇಡೀ ಸಿನಿಮಾವು ಡಾರ್ಕ್ ಹ್ಯೂಮರ್ ಕ್ರೈಮ್ ಥ್ರಿಲ್ಲರ್ ಆಗಿದೆ ಎಂದರು.
ಚಿತ್ರ ವಿಭಿನ್ನವಾಗಿದೆ. ಚಿತ್ರ ನೋಡಿದವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ದಿಗಂತ್ ಪಾತ್ರ ವಿಭಿನ್ನವಾಗಿದ್ದು, ಚಿತ್ರ ಪ್ರೇಕ್ಷಕರ ಮನ ಗೆಲ್ಲಲಿದೆ.
– ನಿಧಿ ಸುಬ್ಬಯ್ಯ, ನಟಿ
ಪತ್ರಿಕಾಗೋಷ್ಠಿಯಲ್ಲಿ ರವಿಚಂದ್ರ.ಎ.ಜೆ, ಉದಯ್, ಶ್ರೀನಾಗ್, ರಘು ಗುಂಡ್ಲು ಉಪಸ್ಥಿತರಿದ್ದರು.
ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ
ಶಿವಮೊಗ್ಗದಲ್ಲಿ ಮಲ್ಲಿಕಾರ್ಜುನ ಚಿತ್ರಮಂದಿರ ಮತ್ತು ಭಾರತ್ ಸಿನಿಮಾದಲ್ಲಿ ಪ್ರದರ್ಶನ ಕಾಣುತ್ತಿದೆ.
ನಿರ್ದೇಶನ : ಸಮರ್ಥ್ ಕಡಕೋಳ್
ನಿರ್ಮಾಪಕರು : ಸಮರ್ಥ್ ಕಡಕೋಳ್, ರಾಜೇಶ್ ಕೀಳಂಬಿ ಮತ್ತು ರಂಜನಿ ಪ್ರಸನ್ನ ಗುರುದತ್ತ ಗಾಣಿಗ
ವಿತರಣೆ : ರವಿಚಂದ್ರ.ಎ.ಜೆ. ಜನನಿ ಪಿಕ್ಚರ್ಸ್
ಛಾಯಾಗ್ರಹಣ : ಅಭಿಮನ್ಯು ಸದಾನಂದ
ಸಂಗೀತ : ಪ್ರದ್ಯೋತನ್
ಸಂಕಲನ : ಶ್ರೀಕಾಂತ್ ಗೌಡ, ಪ್ರವೀಣ್ ಶಿವಣ್ಣ
ತಾರಾಗಣ : ದಿಗಂತ್ ಮಂಚಾಲೆ, ನಿರೂಪ್ ಭಂಡಾರಿ, ನಿಧಿ ಸುಬ್ಬಯ್ಯ ಧನು ಹರ್ಷ, ರಾಧಿಕಾ ನಾರಾಯಣ್, ಕೃಷ್ಣ ಹೆಬ್ಬಾಳೆ, ಭಜರಂಗಿ ಲೋಕಿ ಹಾಗೂ ಹಲವರು ತಾರಾ ಬಳಗದಲ್ಲಿದ್ದಾರೆ.