
ಶಿವಮೊಗ್ಗ : ಆಶ್ರಯ ಮನೆಯ ಖಾತೆ ಮಾಡಿಕೊಡಲು ಸಾರ್ವಜನಿಕರೊಬ್ಬರಿಂದ ರೂ.10,000 ಗಳ ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ, ಶಿವಮೊಗ್ಗ ಮಹಾನಗರ ಪಾಲಿಕೆ ಆಶ್ರಯ ವಿಭಾಗದ ಸಮುದಾಯ ಅಧಿಕಾರಿಯೋರ್ವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದ ಘಟನೆ, ನಗರದ ನೆಹರು ರಸ್ತೆಯ ಪಾಲಿಕೆ ಆಶ್ರಯ ವಿಭಾಗದ ಕಚೇರಿಯಲ್ಲಿ ಇಂದು (ಆಗಸ್ಟ್ 29) ರ ಸಂಜೆ ನಡೆದಿದೆ.
ಶಶಿಧರ್ (57) ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಎಂದು ಗುರುತಿಸಲಾಗಿದೆ. ಲಂಚದ ಹಣದ ಸಮೇತ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ದ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ, ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?:
ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿಯಾದ ದೂರುದಾರ ಮೊಹಮ್ಮದ್ ಆಸೀಫ್ ಉಲ್ಲಾ ಎಂಬುವರು, ಆಶ್ರಯ ಬಡಾವಣೆಯಲ್ಲಿ ಮನೆಯೊಂದನ್ನು ಖರೀದಿಸಿದ್ದರು. ಇದನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಳ್ಳುವ ಸಂಬಂಧ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು.
ಖಾತೆ ಮಾಡಿಕೊಡಲು ರೂ.10,000 ನೀಡುವಂತೆ ಅಧಿಕಾರಿ ಶಶಿಧರ್ ರವರು, ದೂರುದಾರರಿಗೆ ಡಿಮ್ಯಾಂಡ್ ಮಾಡಿದ್ದರು. ಲಂಚ ನೀಡಲು ಇಷ್ಟವಿಲ್ಲದ ದೂರುದಾರರು, ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಇಂದು ಸಂಜೆ ನೆಹರು ರಸ್ತೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ವಾಣಿಜ್ಯ ಸಂಕೀರ್ಣದಲ್ಲಿರುವ ಪಾಲಿಕೆ ಆಶ್ರಯ ಕಚೇರಿಯಲ್ಲಿ, ದೂರುದಾರರು ಶಶಿಧರ್ ಅವರಿಗೆ ರೂ.10,000 ಲಂಚ ನೀಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಲಂಚದ ಹಣದ ಸಮೇತ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ ಚೌಧರಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಉಪಾಧ್ಯಕ್ಷ ಬಿ.ಪಿ.ಚಂದ್ರಶೇಖರ್, ಇನ್ಸ್‌ಪೆಕ್ಟರ್ ರುದ್ರೇಶ್.ಕೆ.ಪಿ, ಇನ್ಸ್‌ಪೆಕ್ಟರ್‌ಗಳಾದ ಗುರುರಾಜ್ ಮೈಲಾರ್, ವೀರಬಸಪ್ಪ ಎಲ್.ಕುಸಲಾಪುರ, ಸಿಬ್ಬಂದಿ ಯೋಗೇಶ್, ಮಂಜುನಾಥ್, ಟೀಕಪ್ಪ, ಸುರೇಂದ್ರ, ಪ್ರಶಾಂತ್ ಕುಮಾರ್, ದೇವರಾಜ್, ಪ್ರಕಾಶ್ ಬಾರಿಮರದ, ಅರುಣ್ ಕುಮಾರ್, ಆದರ್ಶ, ಚಂದ್ರಿಬಾಯಿ, ಪ್ರದೀಪ, ಗಂಗಾಧರ, ಆನಂದ, ಗೋಪಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.