
ಶಿವಮೊಗ್ಗ : ಶಿವಮೊಗ್ಗ ಮಲ್ನಾಡ್ ಎಜುಕೇಷನಲ್ ಅಂಡ್ ಚ್ಯಾರಿಟೆಬಲ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ವರ್ಷ 2024-25 ರಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜವಾಹರಲಾಲ್ ನೆಹರು ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ವೈ.ವಿಜಯ್ ಕುಮಾರ್ ಮಾತನಾಡಿ, ”
ವಿದ್ಯಾಭ್ಯಾಸದ ಮುಖ್ಯ ಉದ್ದೇಶ ಕೇವಲ ಪದವಿ ಪಡೆಯುವುದಲ್ಲದೆ ಕೌಶಲ್ಯಾಭಿವೃದ್ಧಿ ನಿರಂತರವಾಗಿ ಬೆಳಸಿಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳು ಪದವೀಧರರಾದ ನಂತರ ವಿದೇಶಗಳತ್ತ ಮುಖ ಮಾಡುವ ಬದಲಿಗೆ, ಭಾರತದಲ್ಲಿಯೇ ಲಭ್ಯವಿರುವ ಸಂಪತ್ತಿನ ಪ್ರಯೋಜನವನ್ನು ಪಡೆಯಬೇಕು. ಇಂದು ಲ್ಯಾಪ್‌ಟಾಪ್ ಬಹುಮಾನವಾಗಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಭವಿಷ್ಯದಲ್ಲಿ ಇತರರಿಗೆ ದಾನ ಮಾಡುವಷ್ಟು ಯಶಸ್ವಿಯಾಗಬೇಕು.
ಆದಿ ಚಂಚಂಗಿರಿ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಗುರುರಾಜ್ ಮಾತನಾಡಿ, ಇದ್ದಲು ಮತ್ತು ವಜ್ರ ಎರಡೂ ಒಂದೇ ಪದಾರ್ಥದಿಂದ ತಯಾರಾಗುತ್ತವೆ. ಆದರೆ ವಜ್ರ ತನ್ನ ಒತ್ತಡದ ಶಕ್ತಿ ಮತ್ತು ಬೆಳಕು ಹಂಚುವ ಸಾಮರ್ಥ್ಯದ ಮೂಲಕ ಅಮೂಲ್ಯವಾಗುತ್ತದೆ. ವಿದ್ಯಾರ್ಥಿಗಳು ವಜ್ರದಂತೆ ಜಗತ್ತು ಮೆಚ್ಚುವ ವ್ಯಕ್ತಿಗಳಾಗಬೇಕು. ಅವರು ಕನಸುಗಳನ್ನು ನಿದ್ದೆಯಲ್ಲಿ ಕಾಣದೆ ಕನಸನ್ನು ಎಚ್ಚರವಿದ್ದಾಗ ನೋಡಬೇಕೆಂದು ಹಿತವಚನ ನೀಡಿದರು.
ಡಾ. ಆಫ್ತಾಬ್ ಅಹ್ಮದ್ ಮಾಲ್ದಾರ್ ಮಾತನಾಡಿ, ಕಾಲದ ಬೆಲೆಯನ್ನು ಅರಿಯದವನು ಯಶಸ್ಸಿನ ಓಟದಿಂದ ಹೊರಬಿದ್ದವನಾಗುತ್ತಾನೆ. ಇಂದಿನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಉಪಕರಣಗಳು ಹೆಚ್ಚು ವ್ಯಾಪಕವಾಗಿರುವ ಕಾರಣ, ಕೇವಲ ಶೈಕ್ಷಣಿಕ ಪದವಿಗಳು ಸಾಕಾಗುವುದಿಲ್ಲ, ಬದಲಾಗಿ ಮಾನವೀಯ ಕೌಶಲ್ಯಗಳು ಅವಶ್ಯಕ ಎಂದು ಹೇಳಿದರು.
ಒಟ್ಟಾಗಿ ಕೆಲಸ ಮಾಡುವ ಶಕ್ತಿ ಯಶಸ್ಸಿನ ಮೂಲವಾಗಿದೆ. ನಾವು ಸಮಾಜದಿಂದ ಏನಾದರೂ ಪಡೆಯುತ್ತಿದ್ದರೆ, ಅದರ ಸಾಲವನ್ನು ತೀರಿಸಲು ಕೊಡುಗೆ ನೀಡುವ ಗುಣವನ್ನೂ ಬೆಳೆಸಿಕೊಳ್ಳಬೇಕು.
| ಮೊಹಮ್ಮದ್ ಇಬ್ರಾಹಿಂ, ಮಲ್ನಾಡ್ ಟ್ರಸ್ಟ್ ಅಧ್ಯಕ್ಷ
ಟ್ರಸ್ಟ್‌ನ ಅಧ್ಯಕ್ಷ ಎಜಾಜ್ ಅಹ್ಮದ್ ಅವರು ಟ್ರಸ್ಟ್‌ನ ಉದ್ದೇಶ ಮತ್ತು ಗುರಿಗಳನ್ನು ವಿವರಿಸಿದರು. ಆಡಳಿತಾಧಿಕಾರಿ ಎಸ್ ಎನ್ ಎಜಾಜ್ ಅಹ್ಮದ್ ಅವರು ಸಂಸ್ಥೆಯ ವಿವಿಧ ಚಟುವಟಿಕೆಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಮುದಸ್ಸಿರ್ ಅಹ್ಮದ್, ಇಫ್ತಿಖಾರ್ ಅಹ್ಮದ್ ಖಾನ್, ಮೊಹಮ್ಮದ್ ಲಿಯಾಖತ್ ಮತ್ತು ಇಂಪೀರಿಯಲ್ ಎಜುಕೇಶನಲ್ ಫೌಂಡೇಶನ್‌ನ ಅಧ್ಯಕ್ಷ ಇಕ್ಬಾಲ್ ಹಬೀಬ್ ಸೇಠ್ ಉಪಸ್ಥಿತರಿದ್ದರು.