ಶಿವಮೊಗ್ಗ : ಭದ್ರಾ ನಾಲೆ ಅವೈಜ್ಞಾನಿಕ ಕಾಮಗಾರಿ ವಿರುದ್ಧ ವೈಜ್ಞಾನಿಕ ಹೋರಾಟ ಆರಂಭಿಸಿದ್ದೇವೆ. ನಮ್ಮ ಹೋರಾಟ ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಭದ್ರಾ ನಾಲೆ ಸೀಳಿರುವುದನ್ನು ವಿರೋಧಿಸಿ ಇಂದು ಸಾಗರ ರಸ್ತೆಯಲ್ಲಿರುವ ತುಂಗಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಕಚೇರಿಗೆ ದಾವಣಗೆರೆ ಜಿಲ್ಲೆ ರೈತ ಒಕ್ಕೂಟದ ವತಿಯಿಂದ ಭಾರೀ ಸಂಖ್ಯೆಯಲ್ಲಿ ರೈತರು ಆಗಮಿಸಿ ಸಾಗರ ರಸ್ತೆಯ ಎರಡೂ ಬದಿಯಲ್ಲಿ ಬಂದ್ ಮಾಡಿ ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮುತ್ತಿಗೆ ಹಾಕುವ ಮೊದಲು ರೈತ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೋರಾಟದ ಕಿಚ್ಚು ಹಚ್ಚಿದ್ದು ಶಿವಮೊಗ್ಗ ಜಿಲ್ಲೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮಗೆಲ್ಲಾ ಪ್ರೇರಣೆ. ರಾಜ್ಯ ಸರ್ಕಾರ ಕಣ್ಣಿಗೆ ಕಪ್ಪು ಪಟ್ಟಿ ಹಚ್ಚಿ ಅನ್ಯಾಯ ಮಾಡುತ್ತಿದೆ ಎಂದು ಟೀಕಿಸಿದರು.
ವೈಯಕ್ತಿಕವಾಗಿ ಸಿಎಂ, ಡಿಸಿಎಂ ವಿರುದ್ಧ ಟೀಕೆ ಮಾಡಲ್ಲ. ಕುರ್ಚಿ ಕದನ ನಡೀತಿದೆ. ರೈತರ ಪರ ಕೆಲಸ ಮಾಡಲು ಸಮಯ ಇಲ್ಲ. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸ್ತೀವಿ. ರಕ್ತ ಚೆಲ್ಲಿಯಾದರೂ ರೈತರಿಗೆ ನ್ಯಾಯ ಕೊಡಿಸ್ತೀವಿ.
| ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವರು
65000 ಎಕರೆ ಪದೇಶಕ್ಕೆ ನೀರಿಲ್ಲ, ಅಧಿಕಾರಿಗಳು ಮಾಡಿದ ಯಡವಟ್ಟು ಇದಾಗಿದೆ. ಬೇಸಿಗೆಯಲ್ಲೇ ಎಡದಂಡೆ ನಾಲೆಗೆ ಗೇಟ್ ಕೂರಿಸಬೇಕಿತ್ತು. ಕೇವಲ 50 ಲಕ್ಷ ರೂ. ಹಣದಲ್ಲಿ ಆಗುವ ಕೆಲಸ ಮಾಡದೇ ಈಗ ಡ್ಯಾಂ ಖಾಲಿ ಮಾಡಲು ದಿನಾಲು 5000 ಕ್ಯುಸೆಕ್ ಬಿಡ್ತಾ ಇದ್ದಾರೆ. ಭದ್ರಾಬಲದಂಡೆ ಕಾಲುವೆಯಿಂದ ಕುಡಿಯುವ ನೀರು ಕೊಡಬೇಡಿ. ಅಧಿಕಾರಿಗಳು ಸರ್ಕಾರದ ಏಜೆಂಟರಾಗಿ ರೈತ ವಿರೋಧಿ ಕೆಲಸ ಮಾಡುತ್ತಿದ್ದಾರೆ. ರೈತರ ಹೊಟ್ಟೆಯ ಮೇಲೆ ತಣ್ಣಿರು ಬಟ್ಟೆ ಹಾಕಲು ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ.
| ಮಾಡಾಳು ಮಲ್ಲಿಕಾರ್ಜುನ,
ಇಂದಿನದ್ದು ನಾಲ್ಕನೇ ಹೋರಾಟ, ಮುಖ್ಯ ಮಂತ್ರಿಗಳು, ಉಪಮುಖ್ಯ ಮಂತ್ರಿಗಳು ನಮ್ಮ ಹೋರಾಟವನ್ನು ಉಪೇಕ್ಷೆ ಮಾಡುತ್ತಿದ್ದಾರೆ. ಕುಡಿಯುವ ನೀರು ಕೊಡಲು ನಮ್ಮ ವಿರೋಧವಿಲ್ಲ ಆದರೆ, ಅನುಸರಿಸಿದ ವಿಧಾನಕ್ಕೆ ನಮ್ಮ ವಿರೋಧವಿದೆ.
| ಎಂ.ಬಸವರಾಜ ನಾಯಕ, ಮಾಜಿ ಶಾಸಕ
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಶಿವಮೊಗ್ಗದ ಪವಾಸಿಮಂದಿರದಲ್ಲಿ ಸಭೆ ನಡೆಸಿ ಅಲ್ಲಿಂದ ತುಂಗಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ರಸ್ತೆ ಬಂದ್ ಮಾಡಿ ಸಭೆ ನಡೆಸಿದರು. ಬೇಡಿಕೆ ಈಡೇರಿಸುವ ಭರವಸೆ ಲಿಖಿತ ರೂಪದಲ್ಲಿ ಕೊಡುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದ್ದಾರೆ.
ಸ್ಥಳಕ್ಕೆ ಸಿಇಒ ಹೇಮಂತ್ ಕುಮಾರ್ ಮನವಿ ಪಡೆದರೂ, ರೈತರು ಪ್ರತಿಭಟನೆ ನಿಲ್ಲಿಸಲು ಒಪ್ಪಲಿಲ್ಲ. ರೈತರ ಪ್ರತಿಭಟನೆ ಯಿಂದಾಗಿ ಸಾಗರ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಈ ವೇಳೆ ಧನಂಜಯ ಕಡ್ಲೆಬೇಳೆ, ಕೊನಗನಳ್ಳಿ ಸತೀಶ್, ನಾಗರಾಜ ಲೋಕಿಕೆರೆ, ಅಜಯ ಕುಮಾರ್, ಚಂದ್ರಶೇಖರ ರಾಜಶೇಖರ ಪೂಜಾರ್, ನಾಗಪ್ಪ, ಶಿವಕುಮಾರ, ನಾರಾಯಣ, ವಿರೂಪಾಕ್ಷಪ್ಪ ಇನ್ನಿತರರಿದ್ದರು
ಇದನ್ನೂ ಓದಿ ⇒ ಆರ್‌ಬಿಐನಿಂದ ಚಿನ್ನ ಖರೀದಿಗೆ ಬ್ರೇಕ್ | ಹಿಂದಿರುವ ಮಾಸ್ಟರ್ ಪ್ಲಾನ್ ಏನು? ಇಲ್ಲಿದೆ ಡೀಟೆಲ್ಸ್