ಪಾಲಿಕೆ ನಡೆ ಖಂಡಿಸಿ, ರಾಷ್ಟ್ರ ಭಕ್ತರ ಬಳಗದಿಂದ ಬೃಹತ್ ಪ್ರತಿಭಟನೆ

ಶಿವಮೊಗ್ಗ : ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡದಿರುವುದು ಮತ್ತು ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದ ಆಶ್ರಯ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಲ್ಲಿ ಆಗಿರುವ ವಿಳಂಬ ಖಂಡಿಸಿ ಮತ್ತು ಪಾಲಿಕೆಯ ವಿವಿಧ ಅವಾಂತರಗಳನ್ನು ವಿರೋಧಿಸಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರ ಭಕ್ತರ ಬಳಗವು ಶನಿವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು.

ರಾಷ್ಟ್ರಭಕ್ತರ ಬಳಗವು ಕೆ.ಎಸ್.ಈಶ್ವರಪ್ಪ ಮತ್ತು ಕೆ.ಈ.ಕಾಂತೇಶ್ ಅವರ ನೇತೃತ್ವದಲ್ಲಿ ನಗರದ ರಾಮಣ್ಣ ಶ್ರೇಷ್ಠ ಪಾರ್ಕ್‌ನಿಂದ ಮಹಾನಗರ ಪಾಲಿಕೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆ ಬಳಿಕ ಪಾಲಿಕೆ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮುಖಂಡರು, ಜಿಲ್ಲಾಡಳಿತದ ವಿರುದ್ದ ಹರಿಹಾಯ್ದರು.

ರಾಷ್ಟ್ರಭಕ್ತರ ಬಳಗ ಸದಾ ಜನಪರ ಹೋರಾಟಕ್ಕೆ ಮುಂಚೂಣಿಯಲ್ಲಿದ್ದು, ಮೇಲಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಆಯುಕ್ತರ ಬಗ್ಗೆ ವಿಶ್ವಾಸವಿದೆ. ನ್ಯಾಯಾಲಯಕ್ಕೆ ವಿವಾದಿತ ಮೈದಾನದ ಎಲ್ಲಾ ದಾಖಲೆಗಳನ್ನು ಕೂಡಲೇ ಪಾಲಿಕೆ ಒದಗಿಸಬೇಕು ಮತ್ತು ಸಮಸ್ಯೆಯನ್ನು ಪರಿಹರಿಸಬೇಕು.

|ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ


ಬಡವರಿಗೆ ನೀಡುವ ಆಶ್ರಯ ಯೋಜನೆಯ ಮನೆಗಳನ್ನು ಆದಷ್ಟು ಬೇಗ ವಿತರಿಸಬೇಕು. ಇ-ಸ್ವತ್ತು ನೋಂದಾವಣೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಸರಿ ಪಡಿಸಬೇಕು. ನಿರಂತರ ನೀರಿನ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಬೇಕು. ಬೀದಿದೀಪ ಮತ್ತು ನಗರದ ಸ್ವಚ್ಚತೆಗೆ ಆದ್ಯತೆಕೊಡಬೇಕು.

| ಕೆ.ಈ.ಕಾಂತೇಶ್, ರಾಷ್ಟ್ರಭಕ್ತರ ಬಳಗದ ಮುಖಂಡ


ಈ ಹೋರಾಟದಲ್ಲಿ ವಾಸ್ತವಾಂಶವಿದೆ. ಕಾನೂನಿನ ತೊಡಕಿನಿಂದಾಗಿ ಮಳಿಗೆಗಳು ಮತ್ತು ವಾಣಿಜ್ಯ ಸಂಕಿರ್ಣದ ವಿತರಣೆಯಲ್ಲಿ ವಿಳಂಬವಾಗಿದೆ. ಅದನ್ನು ಕೂಡ ಸರಿಪಡಿಸಿದ್ದೇವೆ. ಡಿಸಿ ಕಚೇರಿ ಮುಂಭಾಗದ ಮೈದಾನದ ವಿವಾದ ಕೂಡ ಜ್ಯೂಡಿಷಿಯಲ್ ನಿಯಮದ ಪ್ರಕಾರವೇ ಮುಂದುವರೆದಿದ್ದು, ಶೀಘ್ರವಾಗಿ ಅದನ್ನು ಕೂಡ ಬಗೆಹರಿಸುತ್ತೇವೆ.

|ಡಾ. ಮಾಯಣ್ಣ ಗೌಡ, ಪಾಲಿಕೆ ಆಯುಕ್ತರು


ರಾಷ್ಟ್ರ ಭಕ್ತರ ಬಳಗದ ಮುಖಂಡ ಹಾಗೂ ಪಾಲಿಕೆ ಮಾಜಿ ಸದಸ್ಯ ಈ.ವಿಶ್ವಾಸ್ ಮಾತನಾಡಿ, ಮಹಾನಗರ ಪಾಲಿಕೆಯ ಅವಾಂತರಗಳ ಬಗ್ಗೆ ಈ ಹಿಂದೆಯೇ ಗಮನ ಸೆಳೆಯಲಾಗಿತ್ತು. ಪಾಲಿಕೆಗೆ ಈಗಾಗಲೇ ವಾಣಿಜ್ಯ ಸಂಕೀರ್ಣಗಳಾದ ಶಿವಪ್ಪನಾಯಕ ಹೂವಿನ ಮಾರುಕಟ್ಟೆ, ಗಾರ್ಡನ್ ಏರಿಯಾ ವಾಣಿಜ್ಯ ಸಂಕಿರ್ಣ, ಗಾಂಧಿನಗರದ ವಾಣಿಜ್ಯ ಸಂಕಿರ್ಣಗಳಲ್ಲಿ ನಿರ್ಮಾಣವಾದ ಮಳಿಗೆಗಳನ್ನು ಇದುವರೆಗೂ ಬಾಡಿಗೆ ನೀಡಿಲ್ಲ. ಇದರಿಂದ ಮಹಾನಗರ ಪಾಲಿಕೆಗೆ ಸುಮಾರು ರೂ.11.51 ಕೋಟಿಯಷ್ಟು ನಷ್ಟವಾಗುತ್ತದೆ ಎಂದು ದೂರಿದರು.

ಈ ವಿಚಾರದಲ್ಲಿ ರಾಷ್ಟ್ರಭಕ್ತರ ಬಳಗ ಪಾಲಿಕೆ ಮುತ್ತಿಗೆ ಹಾಕುವುದಾಗಿ ಪ್ರಕಟಿಸಿದ ಮೇಲೆ ಈಗ ಹೂವಿನ ಮಾರುಕಟ್ಟೆಯ ಫಲಾನುಭವಿಗಳಿಗೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಇನ್ನೂ ಉಳಿದ ಪಾಲಿಕೆ ವಾಣಿಜ್ಯ ಸಂಕಿರ್ಣಗಳನ್ನು ಕೂಡಲೇ ನೀಡುವಂತೆ ಹಾಗೂ ಪಾಲಿಕೆ ಆದಾಯ ಹೆಚ್ಚಿಸಿಕೊಳ್ಳುವಂತೆ ಮನವಿ ಮಾಡಿದರು.

ಬೊಮ್ಮನಕಟ್ಟೆಯಿಂದ ಪ್ರತಿನಿತ್ಯ ಕೂಲಿನಾಲಿ ಬಿಟ್ಟು ರೂ.500 ಖರ್ಚು ಮಾಡಿ, ಇ-ಖಾತೆ ಮಾಡಿಕೊಳ್ಳಲು ತಿಂಗಳುಗಟ್ಟಲೆ ಬಡವರು ಓಡಾಡುತ್ತಿದ್ದಾರೆ. ಆಶ್ರಯ ಮನೆಗಾಗಿ ತಾಳಿ ಅಡವಿಟ್ಟು ಕಂತು ಕಟ್ಟಿದ್ದರೂ ಕೂಡ ಇನ್ನೂ ಫಲಾನುಭವಿಗಳಿಗೆ ಮನೆಯ ಕೀ ವಿತರಣೆ ಆಗಿಲ್ಲ. ನೀರಿನ ಸಮಸ್ಯೆ ಹೆಚ್ಚಾಗಿದೆ. ಯಾವ ಅಭಿವೃದ್ಧಿ ಕಾರ್ಯ ಮಾಡಲು ಪಾಲಿಕೆ ಬಳಿ ಹಣವಿಲ್ಲ ಎಂದರು.

ಜಿಲ್ಲಾಧಿಕಾರಿಗಳ ಆಟದ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹಾನಗರ ಪಾಲಿಕೆಗೆ ಕೂಡಲೇ ವರದಿ ಕೊಡುವಂತೆ ತಿಳಿಸಿತ್ತು. ಹೈಕೋರ್ಟ್ ನೀಡಿದ ಸಮಯದ ಅವಧಿ ಮುಗಿದು ಐದು ತಿಂಗಳಾದರೂ ಕೂಡ ಮಹಾನಗರ ಪಾಲಿಕೆ ಆಯುಕ್ತರು ಯಾವುದೇ ಮೂಲ ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸಿಲ್ಲ. ಕೂಡಲೇ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರ ಭಕ್ತರ ಬಳಗದ ಮುಖಂಡ ಕೆ.ಈ.ಕಾಂತೇಶ್ ಮಾತನಾಡಿ, ನಗರದ ನಾಗರೀಕರ ಅನೇಕ ಸಮಸ್ಯೆಗಳಿವೆ. ಮುಖ್ಯವಾಗಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆ ತಲುಪಬೇಕು ಮತ್ತು ಪೌರಕಾರ್ಮಿಕರ ಭವನ ನಿರ್ಮಿಸಬೇಕು. ರೋಟರಿ ಅನಿಲ ಚಿತಾಗಾರವನ್ನು ದುರಸ್ಥಿ ಮಾಡಬೇಕು. ಪಶುವೈದ್ಯಕೀಯ ಆಂಬುಲೆನ್ಸ್ ಸೇವೆಯು ಸಾರ್ವಜನಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಲಕ್ಷ್ಮೀ ಶಂಕರ್‌ನಾಯ್ಕ, ಆರತಿ ಆ.ಮ.ಪ್ರಕಾಶ್, ಈ.ವಿಶ್ವಾಸ್, ಬಾಲು, ಶ್ರೀಕಾಂತ್, ಮೋಹನ್ ಜಾದವ್, ಶಕುಂತಲಾ, ಶಶಿಕಲಾ, ಚಿದಾನಂದ, ಕುಬೇರಪ್ಪ, ನಾಗರತ್ನಮ್ಮ, ರಾಜೇಶ್ವರಿ, ಜಯಲಕ್ಷ್ಮೀ, ಎಸ್ ಟಿಡಿ ರಾಜು, ಆಶಾ ಚನ್ನಬಸಪ್ಪ, ಸೀತಾಲಕ್ಷ್ಮಿ, ಅನಿತಾ, ಇಂದಿರಾನಗರ ರಾಜು ಸೇರಿದಂತೆ ಮೊದಲಾವರಿದ್ದರು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...